ADVERTISEMENT

ಎಸ್‌ಟಿ ಪಟ್ಟಿಯಲ್ಲಿ ಕೈಬಿಟ್ಟ ಪದ ಸೇರಿಸಿ

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 15:30 IST
Last Updated 23 ಜನವರಿ 2021, 15:30 IST
ಪಾದಯಾತ್ರೆ ತೆರಳುತ್ತಿದ್ದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು  ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಳಿ ಶನಿವಾರ ಸನ್ಮಾನಿಸಲಾಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.
ಪಾದಯಾತ್ರೆ ತೆರಳುತ್ತಿದ್ದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು  ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಳಿ ಶನಿವಾರ ಸನ್ಮಾನಿಸಲಾಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದಾರೆ.   

ಚಿತ್ರದುರ್ಗ: ಪರಿಶಿಷ್ಟ ಪಂಗಡಕ್ಕೆ ಕುರುಬರನ್ನು ಹೊಸದಾಗಿ ಸೇರಿಸುವ ಅಗತ್ಯವಿಲ್ಲ. ಕುರುಬರಿಗೆ ಈಗಾಗಲೇ ಪರಿಶಿಷ್ಟ ಪಂಗಡ ಸೌಲಭ್ಯ ಸಿಕ್ಕಿದೆ. ಆದರೆ, ಪಟ್ಟಿಯಲ್ಲಿ ರಾಜ್ಯದ ಆರು ಪದಗಳು ಕೈಬಿಟ್ಟು ಹೋಗಿದ್ದು, ಅವುಗಳನ್ನು ಸೇರಿಸಿ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

‘ಕೊಡಗು, ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಯ ಕೆಲವರು ಪರಿಶಿಷ್ಟ ಪಂಗಡದ ಸೌಲಭ್ಯ ಪಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯ ವ್ಯಾಪ್ತಿಗೆ ಮಾತ್ರ ಕುರುಬ ಸಮುದಾಯಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ರಾಜ್ಯದ ಎಲ್ಲೆಡೆಗೆ ವಿಸ್ತರಿಸಬೇಕು. ಹಾಲುಮತ ಸೇರಿದಂತೆ ಇತರ ಆರು ಪದಗಳಿಂದ ಗುರುತಿಸುವ ಕುರುಬ ಸಮುದಾಯದ ಪರ್ಯಾಯ ಹೆಸರುಗಳನ್ನು ಪಟ್ಟಿಗೆ ಸೇರಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಹತ್ತು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಭಕ್ತರನ್ನು ಕಣ್ತುಂಬಿಕೊಂಡಾಗ ನಡಿಗೆಯ ದಣಿವು ಮಾಯವಾಗುತ್ತಿದೆ’ ಎಂದರು.

ADVERTISEMENT

ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ. ಹಲವು ಪದಗಳಿಂದ ಗುರುತಿಸುವ ಸಮುದಾಯ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದೆ. ಸರ್ಕಾರ ಸರಿಯಾಗಿ ಸ್ಪಂದಿಸದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಶುಭ ಹಾರೈಸಿದ ಮಠಾಧೀಶರು

ಪಾದಯಾತ್ರೆ ತೆರಳುತ್ತಿರುವ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಭೇಟಿಯಾದ ದಲಿತ ಮತ್ತು ಹಿಂದುಳಿದ ಸಮುದಾಯದ ಮಠಾಧೀಶರು ಮೀಸಲಾತಿ ಹೋರಾಟಕ್ಕೆ ಶುಭ ಕೋರಿದರು.

ಚಿತ್ರದುರ್ಗ ತಾಲ್ಲೂಕಿನ ಮಾರಘಟ್ಟ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪಾದಯಾತ್ರಿಗಳು ತಂಗಿದ್ದರು. ಶನಿವಾರ ನಸುಕಿನ 5.30ಕ್ಕೆ ಅಲ್ಲಿಂದ ಹೊರಟರು. ಹತ್ತು ಕಿ.ಮೀ ದೂರದ ಚಿತ್ರದುರ್ಗವನ್ನು ಬೆಳಿಗ್ಗೆ 9ಕ್ಕೆ ತಲುಪಿದರು.

ಭೋವಿ ಗುರುಪೀಠದ ಸಮೀಪ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಅವರು ಪಾದಯಾತ್ರೆಯನ್ನು ಸ್ವಾಗತಿಸಿದರು. ಮಾದಾರ ಗುರುಪೀಠದ ಬಳಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಜೊತೆಯಾದರು. ಕನಕಗುರುಪೀಠದ ಸ್ವಾಮೀಜಿಗಳನ್ನು ಇತರ ಮಠಾಧೀಶರು ಅಭಿನಂದಿಸಿದರು.

ಪಾದಯಾತ್ರೆಗೆ ಅದ್ದೂರಿಸ್ವಾಗತ

ಚಿತ್ರದುರ್ಗ ಪ್ರವೇಶಿಸಿದ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪಾದಯಾತ್ರೆ ತೆರಳುವ ಮಾರ್ಗವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಪಾದಯಾತ್ರೆ ತೆರಳುವ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಠದ ಕುರುಬರಹಟ್ಟಿ ಸಮೀಪ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರೆಯನ್ನು ಸ್ವಾಗತಿಸಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಪಾದಯಾತ್ರೆಯನ್ನು ಬರಮಾಡಿಕೊಂಡರು.

ಮಾಳಪ್ಪನಹಟ್ಟಿಗೆ ತೆರಳಿದ ಪಾದಯಾತ್ರೆ ತಿರುಮಲ ಕಲ್ಯಾಣ ಮಂಟಪದಲ್ಲಿ ವಿಶ್ರಾಂತಿ ಪಡೆಯಿತು. ಜಿಲ್ಲೆಯ ಹಲವೆಡೆಯಿಂದ ಬಂದಿದ್ದ ಭಕ್ತರು, ಸಮುದಾಯದ ಬಾಂಧವರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.