ADVERTISEMENT

ಸೆ.11ರಂದು ಹಿರಿಯೂರು ತಾಲ್ಲೂಕಿನ ರೈತರ ಜಮೀನುಗಳಿಗೆ ಸಚಿವ ಬಿ.ಸಿ ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 10:25 IST
Last Updated 6 ಸೆಪ್ಟೆಂಬರ್ 2021, 10:25 IST
   

ಚಿತ್ರದುರ್ಗ: ರೈತರ ಜತೆ ಒಂದು ದಿನ ಕಳೆಯುವ ಕಾರ್ಯಕ್ರಮವೊಂದನ್ನು ರೂಪಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ, ಸೆ.11ರಂದು ಹಿರಿಯೂರು ತಾಲ್ಲೂಕಿನ ಹಲವು ರೈತರ ಜಮೀನು ಹಾಗೂ ತೋಟಗಳಿಗೆ ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ.

ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ಇಡೀ ದಿನ ಹಲವು ಹಳ್ಳಿಗಳ ದರ್ಶನ ಪಡೆಯಲಿದ್ದಾರೆ. ಕೃಷಿಯಲ್ಲಿನ ವಿನೂತನ ಪ್ರಯೋಗಗಳನ್ನು ಅರಿಯಲಿದ್ದಾರೆ. ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳುವಂತೆ ರೈತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಕೃಷಿಕರಿಗೆ ನೆರವಾಗುವ ಹಲವು ಯಂತ್ರಗಳ ಪ್ರಾತ್ಯಕ್ಷಿಕೆ, ರಾಶಿ ಪೂಜೆ ಮತ್ತು ತೊಗರಿ ಗಿಡದ ಕುಡಿ ಚಿವುಟುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಐಮಂಗಲ ಗ್ರಾಮದ ಲಕ್ಷ್ಮಣರೆಡ್ಡಿ ಎಂಬುವರ ತೋಟಕ್ಕೆ ಮೊದಲು ಭೇಟಿ ನೀಡಲಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ಲಕ್ಷಣ, ರೈತರಿಗೆ ಮಾದರಿಯಾಗಿದ್ದಾರೆ. 12 ಎಕರೆ ಜಮೀನಿನಲ್ಲಿ ಈರುಳ್ಳಿ, ದಾಳಿಂಬೆ ಸೇರಿ ಹಲವು ತೋಟಗಾರಿಕೆ ಬೆಳೆ ಬೆಳೆದಿದ್ದಾರೆ. ಹೈನುಗಾರಿಕೆ ನಡೆಸುತ್ತ ತೇಗದ ಗಿಡಗಳನ್ನು ಬೆಳೆದು ಅರಣ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇಲ್ಲಿ ಕೃಷಿಕರೊಂದಿಗೆ ಸಚಿವರು ಸಂವಾದ ನಡೆಸಲಿದ್ದಾರೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪಿ.ರಮೇಶಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಗುಯಿಲಾಳು ಗ್ರಾಮದ ವಸಂತಕುಮಾರ್‌ ಎಂಬುವರ ಕೃಷಿ ಪ್ರಯೋಗಗಳನ್ನು ದರ್ಶನ ಮಾಡಲಿದ್ದಾರೆ. ತೊಗರಿ ಕುಡಿ ಚಿವುಟುವ ಯಂತ್ರದೊಂದಿಗೆ ಕೆಲಸ ಮಾಡಲಿದ್ದಾರೆ. ದೇವರಕೊಟ್ಟ ಗ್ರಾಮದ ನಾಗಪ್ಪ ಎಂಬುವರ ಜಮೀನಿನಲ್ಲಿ ಬೆಳೆದಿರುವ ಶೇಂಗಾ ತಳಿಗಳನ್ನು ವೀಕ್ಷಿಸಲಿದ್ದಾರೆ. ರಾಗಿ ನಾಟಿ, ಸಿರಿಧಾನ್ಯ ಬಿತ್ತನೆ ಹಾಗೂ ಡ್ರೋಣ್‌ ನೆರವಿನಿಂದ ಕೀಟನಾಶಕ ಸಿಂಪಡಿಸುವ ಪ್ರಾತ್ಯಕ್ಷಿಯಲ್ಲಿ ಪಾಲ್ಗೊಳ್ಳಿಲಿದ್ದಾರೆ’ ಎಂದರು.

‘ಮಧ್ಯಾಹ್ನ 2.30ಕ್ಕೆ ಬಬ್ಬೂರು ಫಾರಂನಲ್ಲಿ ಕಿರುಧಾನ್ಯಗಳ ಉತ್ಕೃಷ್ಟತಾ ಕೇಂದ್ರ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಎಣ್ಣೆ ತೆಗೆಯುವ ಆದಿವಾಲ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಕೃಷಿ ಸಂಬಂಧಿತ ಉದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ರೈತರಿಗೆ ತಿಳಿಸಿಕೊಡಲಿದ್ದಾರೆ’ ಎಂದು ವಿವರಿಸಿದರು.

‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಜಿಲ್ಲೆಯ ಅರ್ಧದಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಬ್ಬರು ಫಲಾನುಭವಿಗೆ ಸಮಗ್ರ ಕೃಷಿ ಪದ್ಧತಿಗೆ ನೆರವು ನೀಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.