ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಎಐಟಿಯುಸಿ, ಬಿಸಿಯೂಟ ನೌಕರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:05 IST
Last Updated 24 ಜನವರಿ 2019, 12:05 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಸಂಘಟನೆ ಪದಾಧಿಕಾರಿಗಳು, ಬಿಸಿಯೂಟ ನೌಕರರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಸಂಘಟನೆ ಪದಾಧಿಕಾರಿಗಳು, ಬಿಸಿಯೂಟ ನೌಕರರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟಿಸಿದರು.   

ಚಿತ್ರದುರ್ಗ: ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರಿಗೆ ಕನಿಷ್ಠ ಮಾಸಿಕ ₹ 18 ಸಾವಿರ ವೇತನ ಜಾರಿಗೊಳಿಸಬೇಕು ಎಂದು ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಮಂಡಳಿಯ ಪದಾಧಿಕಾರಿಗಳು ಇಲ್ಲಿ ಗುರುವಾರ ಪ್ರತಿಭಟಿಸಿದರು.

ಇಲ್ಲಿನ ಮುಖ್ಯ ರಸ್ತೆ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದರು.

‘ರಾಜ್ಯ ಸರ್ಕಾರ ಶಾಲೆಗಳ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಇತರೆ ಖಾಸಗಿ ಸಂಸ್ಥೆಗಳಿಗೆ ವಹಿಸುವ ಹುನ್ನಾರ ಕೈಬಿಡಬೇಕು. ಬಿಸಿಯೂಟ ತಯಾರಕರಿಗೆ ಕೆಲಸದ ಭದ್ರತೆ ಒದಗಿಸಬೇಕು. ಅಲ್ಲದೆ, ಶಾಲಾ ಸಿಬ್ಬಂದಿಯಾಗಿ ಪರಿವರ್ತಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಿಸಿಯೂಟ ತಯಾರಕರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಕಾಯ್ದೆಯಡಿ ಸೌಲಭ್ಯ ನೀಡಬೇಕು. ಪಿಎಫ್-ಇಎಸ್‌ಐ ಜಾರಿಗೆತರಬೇಕು. ಬಿಸಿಯೂಟ ಯೋಜನೆ ಎಂಬ ಹೆಸರನ್ನು ಕೈಬಿಟ್ಟು, ಬಿಸಿಯೂಟ ನಿರಂತರ ಕಾರ್ಯಕ್ರಮ ಎಂಬುದಾಗಿ ಬದಲಾಯಿಸಬೇಕು’ ಎಂದು ಒತ್ತಾಯಿಸಿದರು.

‘ಬಿಸಿಯೂಟ ತಯಾರಕರಿಗೆ ₹ 2ಲಕ್ಷ ಅಪಘಾತ ಪರಿಹಾರ ಹಾಗೂ ₹ 5ಲಕ್ಷ ಮರಣ ಪರಿಹಾರ ನೀಡಬೇಕು.
ದಸರಾ, ಬೇಸಿಗೆ ರಜೆ ಸಮೇತ ವೇತನ ನೀಡಬೇಕು. 60ವರ್ಷದ ನಂತರ ಮಾಸಿಕ ₹ 3 ಸಾವಿರ ನಿವೃತ್ತಿ ಪಿಂಚಣಿ, ₹ 2ಲಕ್ಷ ಇಡುಗಂಟು ಹಣ ಕೊಡಬೇಕು’ ಎಂದುಆಗ್ರಹಿಸಿದರು.

15ಕ್ಕೂ ಅಧಿಕ ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನಮ್ಮ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲವಾಗಿದೆ. ದಿನದಿಂದ ದಿನಕ್ಕೆ ಬೆಲೆಗಳ ಏರಿಕೆಯಾಗುತ್ತಿದ್ದು, ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಈಗಲಾದರೂ ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಸರ್ಕಾರಗಳಿಗೆ ಕೋರಿದರು.

ಎಐಟಿಯುಸಿ ಪದಾಧಿಕಾರಿಗಳಾದಜಿ.ಸಿ. ಸುರೇಶ್‌ಬಾಬು,ಜಾಫರ್,ಎಸ್.ಸಿ. ಕುಮಾರ್,ಸಿ.ವೈ. ಶಿವರುದ್ರಪ್ಪ,ಸತ್ಯಕೀರ್ತಿ, ದೊಡ್ಡಉಳ್ಳಾರ್ತಿ ಕರಿಯಣ್ಣ, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಕಾರ್ಯಕರ್ತೆಯರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.