
ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಖರೀದಿ ಮಾಡಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧ ಸಾಮಗ್ರಿಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರು (ಡಿಎಸ್) ಬಿಲ್ ಪಾವತಿ ಮಾಡದಿ ರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿರುವುದು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
₹ 3 ಕೋಟಿ ಮೌಲ್ಯದ ಔಷಧಿಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರು ಬಿಲ್ ನೀಡಿಲ್ಲ ಎಂದು ಆರೋಪಿಸಿ ಮದಕರಿ ವೃತ್ತದಲ್ಲಿರುವ ರಾಘವೇಂದ್ರ ಮೆಡಿಕಲ್ ಏಜೆನ್ಸಿ ಮಾಲೀಕರು 2025ರ ಸೆ.9ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಪತ್ರ ಬರೆದಿದ್ದರು. ಈಗಿನ ಡಿಎಸ್ ಡಾ.ಎಸ್.ಪಿ. ರವೀಂದ್ರ ಮಾತ್ರವಲ್ಲದೇ ಹಿಂದಿನ ಡಿಎಸ್ ಡಾ.ಬಸವರಾಜು ಅವರ ಅವಧಿಯ ಬಿಲ್ ಕೂಡ ಪಾವತಿಯಾಗಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
‘ಹಿಂದಿನ ಅವಧಿಯ ಬಾಕಿ ತೀರುವಳಿ ಮಾಡಲು ಸಾಧ್ಯವಿಲ್ಲ’ ಎಂದು ಈಗಿನ ಡಿಎಸ್ ರವೀಂದ್ರ ಮೌಖಿಕವಾಗಿ ತಿಳಿಸಿದ್ದಾರೆ. ಇಬ್ಬರ ಅವಧಿ ಸೇರಿ ಒಟ್ಟು ₹ 3.06 ಕೊಟಿ ಬಾಕಿ ಇದೆ. ಇ–ಟೆಂಡರ್ ನಿಯಮಾವಳಿ ಅನುಸಾರ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಕಾರ್ಯಾದೇಶ ಪಡೆದು ಔಷಧಿ ಸರಬರಾಜು ಮಾಡಲಾಗಿದೆ. ಹಲವು ಬಾರಿ ಕೋರಿದರೂ ಬಿಲ್ ಪಾವತಿಸಿಲ್ಲ. ಈ ಸಂಬಂಧ ಹಿಂಬರಹವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಯು 6 ಅಧಿಕಾರಿಗಳ ತಂಡವೊಂದನ್ನು ರಚಿಸಿ ತನಿಖೆಗೆ ಸೂಚಿಸಿದ್ದರು. ಆರೋಗ್ಯ ಇಲಾಖೆ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕ ಡಾ.ಎಚ್.ಡಿ.ಆರ್. ರಾಧಾಕೃಷ್ಣ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿತ್ತು. ಅಧಿಕಾರಿಗಳ ತಂಡ ಫೆ.26 ಹಾಗೂ 27ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದೆ. ತನಿಖಾಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಜಿಲ್ಲಾ ಶಸ್ತ್ರಚಿಕಿತ್ಸಕರ ಕಾರ್ಯವೈಖರಿ ಬೆಳಕಿಗೆ ಬರುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಾದ್ಯಂತ ಆಸ್ಪತ್ರೆಗಳಿಗೆ ಔಷಧಿ ಪೂರೈಸಲು ‘ಡ್ರಗ್ಸ್ ಮತ್ತು ಲಾಜಿಸ್ಟಿಕ್ ಸೊಸೈಟಿ’ ಮೂಲಕ ಟೆಂಡರ್ ಕರೆಯಲಾಗುತ್ತದೆ. ಆಸ್ಪತ್ರೆಗಳು ‘ಔಷಧ’ ಪೋರ್ಟಲ್‌ನಲ್ಲಿ ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಔಷಧಿ ಸರಬರಾಜು ಮಾಡಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ರಾಜ್ಯ ಉಗ್ರಾಣದಲ್ಲಿ ಸಿಗದ, ಕೊರತೆಯಾದ ಅಪರೂಪದ ಔಷಧಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಔಷಧಿ ಖರೀದಿಸಲು ಡಿಎಚ್‌ಒ, ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸ್ಥಳೀಯವಾಗಿ ಟೆಂಡರ್ ಆಹ್ವಾನಿಸಲು ಅಧಿಕಾರವಿರುತ್ತದೆ.
‘ರಾಜ್ಯ ಉಗ್ರಾಣದಲ್ಲಿ ಸಾಕಷ್ಟು ಔಷಧಿ ಸಂಗ್ರಹ, ಸರಬರಾಜು ಇದ್ದರೂ ಸ್ಥಳೀಯವಾಗಿಯೇ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ. ಯಾವುದೇ ಹಿಂಬರಹ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರಾಘವೇಂದ್ರ ಮೆಡಿಕಲ್ ಏಜೆನ್ಸಿ ಮಾತ್ರವಲ್ಲದೇ ಜಿಲ್ಲೆಯ ಆರೇಳು ಮೆಡಿಕಲ್ ಏಜೆನ್ಸಿಗಳಿಂದ ಔಷಧಿ ಖರೀದಿಸಿ ಅವುಗಳಿಗೂ ಬಿಲ್ ಪಾವತಿಸದ್ದನ್ನು ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಅವ್ಯವಹಾರ ರೂಪ ಪಡೆದಿದ್ದು ಇದರಲ್ಲಿ ಮೆಡಿಕಲ್ ಏಜೆನ್ಸಿಗಳೂ ಭಾಗಿಯಾಗಿವೆ ಎಂಬ ಆರೋಪವೂ ಇದೆ.
‘ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಔಷಧಿಗಳೇ ಇಲ್ಲದ ಕಾರಣ ವೈದ್ಯರು ಖಾಸಗಿ ಮೆಡಿಕಲ್ ಸ್ಟೊರ್‌ಗಳಿಗೆ ಕಳುಹಿಸುತ್ತಾರೆ. ಆದರೆ, ಇಲ್ಲಿ ಕೋಟ್ಯಂತರ ರೂಪಾಯಿ ಔಷಧಿ ಖರೀದಿ ಮಾಡುತ್ತಾರೆ. ಔಷಧಿ ಸರಬರಾಜು, ಔಷಧಿಯ ಮೂಲ ಬೆಲೆ, ಖರೀದಿ ಬೆಲೆ ಎಲ್ಲವನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ವಕೀಲ ಪ್ರತಾಪ್ ಜೆ. ಒತ್ತಾಯಿಸಿದರು.
ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಅವರಿಗೆ ಕರೆ ಮಾಡಿದಾಗ ಸರಿಯಾಗಿ ಉತ್ತರ ಕೊಡದೇ ಕರೆ ಸ್ಥಗಿತಗೊಳಿಸಿದರು.
ಬಿಲ್ ಪಾವತಿ ಸಂಬಂಧ ದೊಡ್ಡ ತನಿಖೆಯೇನೂ ಆಗಿಲ್ಲ, ಕೇವಲ ಪರಿಶೀಲನೆ ಮಾಡಿ ಹೋಗಿದ್ದಾರೆ. ಔಷಧ ಖರೀದಿ ಸಂಬಂಧ ಯಾವುದೇ ಗೊಂದಲಗಳು ಉಂಟಾಗಿಲ್ಲಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ
ಲಂಚ ಕೊಟ್ಟಿಲ್ಲ, ಬಿಲ್ ಬಂದಿಲ್ಲ!
‘ಕಾನೂನು ಬದ್ಧವಾಗಿ ಟೆಂಡರ್ ಪಡೆದು ಔಷಧ ಸರಬರಾಜು ಮಾಡಿದ್ದೇವೆ. ಬಿಲ್ ಪಾವತಿ ಮಾಡಲು ನಾವು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಲಂಚದ ರೂಪದಲ್ಲಿ ಹಣ ನೀಡಿಲ್ಲ. ಹೀಗಾಗಿ ನಮ್ಮ ಬಿಲ್ ಬಾಕಿ ಉಳಿದಿದೆ’ ಎಂದು ಮೆಡಿಕಲ್ ಏಜೆನ್ಸಿ ಮಾಲೀಕರು ದೂರಿನಲ್ಲಿ ತಿಳಿಸಿರುವುದು ಅನುಮಾನ ಸೃಷ್ಟಿಸಿದೆ. ಜಿಲ್ಲಾ ಶಸ್ತ್ರಚಿಕಿತ್ಸಕರು ಬಿಲ್ ಪಾವತಿ ಮಾಡಲು ಲಂಚ ಕೇಳಿದರೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.
‘ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲೇ ನಮ್ಮ ಏಜೆನ್ಸಿ ಇದೆ. 2000ನೇ ಇಸವಿಯಿಂದಲೂ ನಾವು ಔಷಧಿ ಸರಬರಾಜು ಮಾಡುತ್ತಿದ್ದೇವೆ. ನಮಗೆ ಹಿಂದೆ ತೊಂದರೆ ಆಗಿರಲಿಲ್ಲ. ಈಗಿನ ಮತ್ತು ಹಿಂದಿನ ಜಿಲ್ಲಾ ಶಸ್ತ್ರಚಿಕಿತ್ಸಕರ ಅವಧಿಯ ಬಿಲ್ ಮಾತ್ರ ಬಂದಿಲ್ಲ’ ಎಂದು ಔಷಧಿ ಏಜೆನ್ಸಿ ಮಾಲೀಕ ಲೋಹಿತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.