ADVERTISEMENT

ಮೀನು ಬಲೆಯ ಉತ್ಪಾದನಾ ಘಟಕ ಸ್ಥಾಪನೆಗೆ ಚಿಂತನೆ: ಎಸ್‌. ಅಂಗಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:01 IST
Last Updated 19 ಸೆಪ್ಟೆಂಬರ್ 2021, 5:01 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ವೀಕ್ಷಣೆಯ ನಂತರ ಶುಕ್ರವಾರ ರಾತ್ರಿ ನಗರದ ಪ್ರವಾಸಿ ಮಂದಿರಕ್ಕೆ ಬಂದಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸನ್ಮಾನಿಸಿದರು.
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ವೀಕ್ಷಣೆಯ ನಂತರ ಶುಕ್ರವಾರ ರಾತ್ರಿ ನಗರದ ಪ್ರವಾಸಿ ಮಂದಿರಕ್ಕೆ ಬಂದಿದ್ದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸನ್ಮಾನಿಸಿದರು.   

ಹಿರಿಯೂರು: ‘ಮೀನು ಹಿಡಿಯುವ ಬಲೆ ಉತ್ಪಾದನಾ ಘಟಕವನ್ನು ರಾಜ್ಯದಲ್ಲಿಯೇ ಆರಂಭಿಸುವ ಉದ್ದೇಶವಿದ್ದು, ಮುಖ್ಯಮಂತ್ರಿ ಜೊತೆ ಈ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ತಾಲ್ಲೂಕಿನ ವಿ.ವಿ ಸಾಗರ ಮೀನುಮರಿ ಪಾಲನಾ ಕೇಂದ್ರಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ಅಗತ್ಯವಿರುಷ್ಟು ಪೂರೈಸುವಷ್ಟು ಮೀನುಮರಿ ಉತ್ಪಾದನಾ ಕೇಂದ್ರ ನಮ್ಮಲ್ಲಿ ಇಲ್ಲದಿರುವ ಕಾರಣ, ಉತ್ಪಾದನೆ ಕಡಿಮೆ ಆದಾಗ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಿಂದ ಮೀನು ಮರಿಗಳನ್ನು ತಂದು ಕೊಡಲಾಗುತ್ತಿದೆ. ಇಲ್ಲಿಯೇ ಮೀನುಮರಿ ಸಂತತಿ ಹೆಚ್ಚಿಸಿದರೆ ನಮ್ಮ ರಾಜ್ಯದಲ್ಲಿ ಮೀನಿನ ಉತ್ಪಾದನೆ ಹೆಚ್ಚುತ್ತದೆ. ಮೀನು ಕೃಷಿಕರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ’ ಎಂದು ಸಚಿವರು ಹೇಳಿದರು.

ADVERTISEMENT

‘ಈಗಾಗಲೇ ಕರಾವಳಿ ಭಾಗದ ಎಲ್ಲ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಮೀನುಗಾರಿಕೆ ಇಲಾಖೆಯಲ್ಲಿನ ಸಮಸ್ಯೆಗಳು, ಅವುಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದೇನೆ. ವಾಣಿ ವಿಲಾಸ ಜಲಾಶಯದಲ್ಲಿ ಮೀನು ಸಾಕಣೆಗೆಂದೇ 12 ಎಕರೆ ಜಾಗವಿದ್ದು, 100 ಮೀನುಮರಿ ಉತ್ಪಾದನಾ ಕೊಳಗಳಿವೆ. ಅವುಗಳಲ್ಲಿ 60 ಕೊಳಗಳು ಹಾಳಾಗಿವೆ. ಎಲ್ಲವನ್ನೂ ಸರಿಪಡಿಸಿದಲ್ಲಿ ಈ ಭಾಗದಲ್ಲಿ ಮೀನುಮರಿಗೆ ಇರುವ ಬೇಡಿಕೆ ಪೂರೈಸಬಹುದು. ಮೀನು ಸಾಕಣೆಗೆ ನೀರಿನ ತೊಂದರೆ ಇದ್ದು, ನೀರಾವರಿ ಸಚಿವರ ಜೊತೆ ಮಾತನಾಡಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಅಂಗಾರ ತಿಳಿಸಿದರು.

‘ಕರಾವಳಿ ಭಾಗದಲ್ಲಿ ಜಟ್ಟಿ ವಿಸ್ತರಣೆ ಮಾಡಬೇಕೆನ್ನುವ ಅಪೇಕ್ಷೆ ಇದೆ. ಈಚೆಗೆ ಬಹಳಷ್ಟು ಮೀನಿನ ತಳಿಗಳು ವಿನಾಶದ ಅಂಚಿಗೆ ಹೋಗಿವೆ. ಸಮುದ್ರ ಮೀನುಗಾರಿಕೆಯಲ್ಲಿ ಕೂಡ ಎಲ್ಲ ಮೀನಿನ ತಳಿಗಳು ಸಿಗುತ್ತಿಲ್ಲ. ಸಚಿವನಾದ ಮೇಲೆ ಒಂಬತ್ತು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಾರ್ಯ ಯೋಜನೆ ರೂಪಿಸಿ ಅಗತ್ಯ ಅನುದಾನ ಬಿಡುಗಡೆಗೆ ಸಿಎಂ ಮನ ಒಲಿಸುತ್ತೇನೆ’ ಎಂದು ಸಚಿವರು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.