
ಹೊಸದುರ್ಗ: ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಶುಕ್ರವಾರ ಎತ್ತಿನಗಾಡಿ ಏರಿ ಅಂತರಘಟ್ಟೆ ಜಾತ್ರೆಗೆ ಸಂಭ್ರಮದಿಂದ ಸಾಗಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆಯಲ್ಲಿ ನೆಲೆಸಿರುವ ದುರ್ಗಾಂಬಾ ದೇವಿಯ ರಥೋತ್ಸವದಲ್ಲಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಅದೇ ರೀತಿ ಹೊಸದುರ್ಗ ತಾಲ್ಲೂಕಿನ ಮಂಟೇನಹಳ್ಳಿ, ಗುತ್ತಿಕಟ್ಟೆ, ಮಧುರೆ, ಕೊಂಡಾಪುರ, ಕಬ್ಬಿನಕೆರೆ, ಬುರುಡೇಕಟ್ಟೆ, ನೀರಗುಂದ, ಐಲಾಪುರ, ಸಾಣೇಹಳ್ಳಿ, ಶ್ರೀರಂಗಾಪುರ ಸೇರಿ ಹಲವು ಹಳ್ಳಿಗಳಿಂದ ನೂರಾರು ಭಕ್ತರು ಹತ್ತಾರು ಎತ್ತಿನಗಾಡಿಯಲ್ಲಿ ದೇವಿಯ ಜಾತ್ರೆಗೆ ತೆರಳಿದರು.
ತಾಲ್ಲೂಕಿನಾದ್ಯಂತ ಹಬ್ಬ ಆಚರಿಸಲಾಗುವುದು. ರಥೋತ್ಸವಕ್ಕೂ ಮುನ್ನ ಮಂಗಳವಾರ ಅಥವಾ ಬುಧವಾರ ಬಾಡೂಟ ತಯಾರಿಸಿ, ಸಂಬಂಧಿಕರನ್ನು ಆಹ್ವಾನಿಸುತ್ತಾರೆ. ನಂತರ ಶುಕ್ರವಾರ ಮನೆಯಲ್ಲಿ ಸಿಹಿ ತಯಾರಿಸಿ ಎಲ್ಲ ದೇವರುಗಳಿಗೂ ನೈವೇದ್ಯ ನೀಡಲಾಯಿತು. ಬಳಿಕ ಗ್ರಾಮಸ್ಥರೆಲ್ಲ ಒಗ್ಗೂಡಿ ಗ್ರಾಮದ ದೇವರಿಗೆ ಪೂಜೆ ಸಲ್ಲಿಸಿ ಎತ್ತಿನಗಾಡಿಗಳು ಜಾತ್ರೆಗೆ ಹೊರಡುವವು. ಶುಕ್ರವಾರದಿಂದ ಆರಂಭವಾದ ಜಾತ್ರೆ ಗಾಡಿಗಳು ಮಂಗಳವಾರದವರೆಗೂ ತೆರಳುತ್ತಿರುತ್ತಾರೆ.
‘15 ವರ್ಷಗಳಿಂದ ಎತ್ತಿನ ಗಾಡಿಯಲ್ಲಿ ಅಂತರಘಟ್ಟೆಗೆ ಹೋಗುತ್ತಿದ್ದೇವೆ. ಶುಕ್ರವಾರ ಬೆಳಿಗ್ಗೆ ದೇವರಿಗೆ ಪೂಜೆ ಮಾಡಿಸಿ, ಗ್ರಾಮದ ಎಲ್ಲ ಗಾಡಿಗಳನ್ನು ಊರಿನಲ್ಲಿ ಮೆರವಣಿಗೆ ಮಾಡಿ, ನಂತರ ಅಂತರಘಟ್ಟೆಗೆ ಹೊರಡುತ್ತೇವೆ. ಇದಕ್ಕಾಗಿ ಒಂದು ತಿಂಗಳಿನಿಂದ ತಯಾರಿ ನಡೆಯುತ್ತದೆ. ಎತ್ತುಗಳಿಗೆ ಸಮಯಕ್ಕೆ ಸರಿಯಾಗಿ ಮೇವು, ನೀರು ನೀಡಿ ದಷ್ಟಪುಷ್ಟವಾಗಿ ಆರೈಕೆ ಮಾಡಲಾಗುತ್ತದೆ. ಜಾತ್ರೆಯ ದಿನದಂದು ಎತ್ತು ಹಾಗೂ ಗಾಡಿಗಳನ್ನು ಮದುವಣಗಿತ್ತಿಯಂತೆ ಅಲಂಕರಿಸಿ, ಸಂಬಂಧಿಕರು ಹಾಗೂ ಸ್ನೇಹಿತರೊಟ್ಟಿಗೆ ಜಾತ್ರೆಗೆ ಹೋಗುವುದು ವಿಶೇಷ ಅನುಭವ’ ಎನ್ನುತ್ತಾರೆ ಮಧುರೆಯ ಪ್ರವೀಣ್.
‘ಅಂತರಘಟ್ಟೆ ದುರ್ಗಾಂಬಾ ದೇವಿಗೆ ಎತ್ತಿನಗಾಡಿ ಎಂದರೆ ಬಲು ಪ್ರೀತಿ. ಹಾಗಾಗಿ ಪ್ರತಿ ವರ್ಷ ಗಾಡಿಯಲ್ಲಿ ಜಾತ್ರೆಗೆ ಹೋಗಲಾಗುತ್ತದೆ. ಎರಡು ದಿನಗಳಿಗಾಗುವಷ್ಟು ಮೇವು ಸಹ ಕೊಂಡೊಯ್ಯುತ್ತೇವೆ. ಅಂದಿನ ಕಾಲದ ಜಾತ್ರೆ ಹಾಗೂ ಎತ್ತಿನಗಾಡಿ ಸಂಭ್ರಮ ಹಬ್ಬದಂತಿತ್ತು. ಈಚೆಗೆ ಟ್ರ್ಯಾಕ್ಟರ್ ಹಾಗೂ ಬೈಕ್‌ನಲ್ಲಿ ಜನರು ಜಾತ್ರೆಗೆ ತೆರಳುತ್ತಾರೆ. ದೇವಿಯ ಜಾತ್ರೆಗೆ ಹೋಗುವುದೇ ಒಂದು ಸಂಭ್ರಮ’ ಎನ್ನುತ್ತಾರೆ ಬುರುಡೇಕಟ್ಟೆಯ ಲವಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.