ADVERTISEMENT

ಅರಸನಘಟ್ಟ: ಬಸವೇಶ್ವರ ಸ್ವಾಮಿ ಕೆಂಡಾರ್ಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 6:18 IST
Last Updated 3 ಮಾರ್ಚ್ 2026, 6:18 IST
ಚಿಕ್ಕಜಾಜೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಸ್ವಾಮಿ ಕೆಂಡಾರ್ಚನೆ ನಡೆಯಿತು
ಚಿಕ್ಕಜಾಜೂರು ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಸ್ವಾಮಿ ಕೆಂಡಾರ್ಚನೆ ನಡೆಯಿತು   

ಚಿಕ್ಕಜಾಜೂರು: ಬಸವೇಶ್ವರ ಸ್ವಾಮಿಯ ಕೆಂಡಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಸೋಮವಾರ ಬಸವೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿ ಕುಂಡಕ್ಕೆ ಬೆಳಿಗ್ಗೆ ಸಾಕಷ್ಟು ಕಟ್ಟಿಗೆ ಹಾಕಿ ಬೆಂಕಿ ಹಾಕಲಾಯಿತು. ನಂತರ, ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವೀರಗಾಸೆ ತಂಡದವರು ಹಾಗೂ ಡೊಳ್ಳು ಕುಣಿತದ ನೃತ್ಯ ಮಾಡುತ್ತಾ ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಸಾಗಿದ್ದು ಗಮನ ಸೆಳೆಯಿತು.

ಸ್ವಾಮಿಯ ಮೆರವಣಿಗೆ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರು ಮನೆಗಳ ಅಂಗಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಸ್ವಾಮಿಯನ್ನು ಬರಮಾಡಿಕೊಂಡು, ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ADVERTISEMENT

ಉತ್ಸವದ ಪಲ್ಲಕ್ಕಿ ದೇವಸ್ಥಾನಕ್ಕೆ ಬರುತ್ತಿದ್ದಂತೆ, ಅರ್ಚಕರು ಅಗ್ನಿಕುಂಡದ ಸುತ್ತ ಕುಂಕುಮ–ಅರಿಸಿನಗಳಿಂದ ಚಿತ್ತಾರ ಬಿಡಿಸಿ, ಎಂಟು ದಿಕ್ಕುಗಳಿಗೂ ಎಡೆ ಹಾಕಿ, ಮಹಾ ಮಂಗಳಾರತಿ ಮಾಡಿದರು. ಪಲ್ಲಕ್ಕಿಯನ್ನು ಹೊತ್ತ ಭಕ್ತರು ಅಗ್ನಿ ಕುಂಡವನ್ನು ಪ್ರವೇಶಿಸಿ, ಮೂರು ಬಾರಿ ಕೆಂಡ ಹಾಯ್ದರು. ಈ ದೃಶ್ಯವನ್ನು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಕಣ್ತುಂಬಿಕೊಂಡು, ಭಕ್ತಿ ಸಮರ್ಪಿಸಿದರು.

ಸರಗ: ಗ್ರಾಮದಲ್ಲಿ ಬೆಂಕಿ ಅವಘಡಗಳಾಗದಂತೆ, ಜನ– ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮತ್ತು ಉತ್ತಮ ಮಳೆಯಾಗಿ ಬೆಳೆ ಬರಲಿ ಎಂದು ಬಸವಣ್ಣ ಸ್ವಾಮಿಗೆ ಸಿದ್ಧಪಡಿಸಿದ ಎಡೆಯನ್ನು ಗ್ರಾಮದ ಸುತ್ತ ಸರಗ (ಚರಗ) ಹಾಕಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.