ADVERTISEMENT

ಪಿಒಕೆ ವಶಕ್ಕೆ ಭಾರತೀಯ ಸೇನೆ ಸಜ್ಜು: ಅರವಿಂದ ಲಿಂಬಾವಳಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 13:26 IST
Last Updated 29 ಸೆಪ್ಟೆಂಬರ್ 2019, 13:26 IST
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಭಾನುವಾರ ಏರ್ಪಡಿಸಿದ್ದ ಸಮಾರಂಭವನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು. ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌, ಶಾಸಕ ಎಂ.ಚಂದ್ರಪ್ಪ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ಇದ್ದಾರೆ.
ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಭಾನುವಾರ ಏರ್ಪಡಿಸಿದ್ದ ಸಮಾರಂಭವನ್ನು ಶಾಸಕ ಅರವಿಂದ ಲಿಂಬಾವಳಿ ಉದ್ಘಾಟಿಸಿದರು. ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್‌, ಶಾಸಕ ಎಂ.ಚಂದ್ರಪ್ಪ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌ ಇದ್ದಾರೆ.   

ಚಿತ್ರದುರ್ಗ: ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಐತಿಹಾಸಿಕ ಪ್ರಮಾದದಿಂದ ಭಾರತದ ಕೈತಪ್ಪಿರುವ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮರಳಿ ವಶಪಡಿಸಿಕೊಳ್ಳುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಸೇನೆ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಹಾಗೂ 35ಎ ವಿಧಿ ರದ್ದುಪಡಿಸಿದ ಬಗ್ಗೆ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಭಾನುವಾರ ಏರ್ಪಡಿಸಿದ್ದ ‘ಒಂದು ದೇಶ ಒಂದು ಸಂವಿಧಾನ’ ರಾಷ್ಟ್ರೀಯ ಐಕ್ಯತಾ ಅಭಿಯಾನದಲ್ಲಿ ಅವರು ಮಾತನಾಡಿದರು.

‘ರಾಜಾ ಹರಿಸಿಂಗ್‌ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಒಪ್ಪಿಗೆ ಸೂಚಿಸಿ ಒಡಂಬಡಿಕೆ ಪತ್ರವನ್ನು ಒಪ್ಪಿಸಿದ್ದರು. ನೆಹರೂ ಅವರ ತಪ್ಪು ಹೆಜ್ಜೆಯಿಂದ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿತು. ಕಾಶ್ಮೀರದ ಶೇ 30ರಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿತು. ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ನೀಡುವಂತೆ ಸೂಚನೆ ನೀಡಿತು. ಆದರೆ, ನೆಹರೂ ಪಿಒಕೆ ಹಿಂಪಡೆಯಲು ಆಸಕ್ತಿ ತೋರಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತದೊಂದಿಗೆ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಕಾಶ್ಮೀರದ ಸಮಸ್ಯೆ ದೇಶದ ಆಂತರಿಕ ವಿಚಾರವೇ ಹೊರತು ವಿಶ್ವದ ಸಮಸ್ಯೆಯಲ್ಲ. ನಮ್ಮ ದೇಶದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಭಾರತ ಸಮರ್ಥವಾಗಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಎಲ್ಲ ಭೂಭಾಗ ದೇಶಕ್ಕೆ ಮರಳುವ ಕಾಲ ಬರಲಿದೆ’ ಎಂದು ಹೇಳಿದರು.

ಕಾಶ್ಮೀರಿ ಹುಡ್ಗೀರನ್ನ ಮದುವೆಯಾಗಿ: ‘ವಿಶೇಷ ಸ್ಥಾನಮಾನ ರದ್ದುಪಡಿಸಿದ್ದರಿಂದ ಕಾಶ್ಮೀರದ ಹುಡುಗಿಯರನ್ನು ಭಾರತದ ಯಾರು ಬೇಕಾದರೂ ಮದುವೆಯಾಗಬಹುದು. ಇದರಿಂದ ಅವರ ಆಸ್ತಿ ಮತ್ತು ನಾಗರಿಕತೆಯ ಹಕ್ಕಿಗೆ ಧಕ್ಕೆ ಉಂಟಾಗುವುದಿಲ್ಲ’ ಎಂದು ಲಿಂಬಾವಳಿ ಅಭಿಪ್ರಾಯಪಟ್ಟರು.

‘ಕಾಶ್ಮೀರದ ಹೆಣ್ಣು ದೇಶದ ಯಾವುದೇ ಪುರುಷನನ್ನು ವರಿಸಿದ್ದರೆ ಅಲ್ಲಿನ ನಾಗರಿಕತ್ವ ಕಳೆದುಕೊಳ್ಳುತ್ತಿದ್ದರು. ಇದರಿಂದ ಅನೇಕರು ಹಿಂದೇಟು ಹಾಕುತ್ತಿದ್ದರು. ವಿಶೇಷ ಸ್ಥಾನಮಾನದ ರದ್ದತಿಯಿಂದ ಕಾಶ್ಮೀರದ ಹುಡುಗಿಯರನ್ನು ಮದುವೆಯಾಗುವ ಅವಕಾಶ ಎಲ್ಲರಿಗೂ ಸಿಕ್ಕಿದೆ’ ಎಂದರು.

ಅಂಬೇಡ್ಕರ್‌ ಒಪ್ಪಿರಲಿಲ್ಲ: ‘ಕಾಶ್ಮೀರಕ್ಕೆ ವಿಶೇಷ ಸ್ಥಾನ ಕಲ್ಪಿಸುವ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲು ಅಂಬೇಡ್ಕರ್‌ಗೆ ಇಷ್ಟವಿರಲಿಲ್ಲ. ಅವರನ್ನು ದೂರವಿಟ್ಟು ಈ ಕೆಲಸ ಮಾಡಲಾಯಿತು. ನೆಹರೂ ಒತ್ತಡಕ್ಕೆ ಮಣಿದು ಗೋಪಾಲಸ್ವಾಮಿ ಅಯ್ಯಂಗಾರ್ ವಿಶೇಷ ಸ್ಥಾನದ ವಿಧಿಯನ್ನು ಬರೆದಿದ್ದಾರೆ’ ಎಂದು ಅರವಿಂದ ಲಿಂಬಾವಳಿ ಹೇಳಿದರು.

‘ವಿಧಿ ರಚನೆಯಾದ ಬಳಿಕವೂ ಅಂಬೇಡ್ಕರ್‌ ವಿರೋಧ ವ್ಯಕ್ತಪಡಿಸಿದರು. ಅವರ ಕೋರಿಕೆಯ ಮೇರೆಗೆ ‘ವಿಧಿ ಕೇವಲ ತಾತ್ಕಾಲಿಕ’ ಎಂಬ ಷರವನ್ನು ಬರೆಯಲಾಯಿತು. ಕಾಂಗ್ರೆಸ್‌ ಅಪ್ರಬುದ್ಧತೆ ಹಾಗೂ ರಾಜಕಾರಣದಿಂದ ಇದು 70 ವರ್ಷಗಳ ಕಾಲ ಮುಂದುವರೆಯಿತು. ಮೀಸಲಾತಿ ಸೌಲಭ್ಯ ಕಾಶ್ಮೀರದ ದಲಿತರು ಹಾಗೂ ಹಿಂದುಳಿದ ವರ್ಗಕ್ಕೆ ಈವರೆಗೆ ಸಿಕ್ಕಿಲ್ಲ ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಎ. ನಾರಾಯಣಸ್ವಾಮಿ, ‘ಎರಡು ಸಂವಿಧಾನ ಯಾವ ದೇಶದಲ್ಲಿಯೂ ಇಲ್ಲ. ದೇಶದ ಜನರ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ಕೊಡುತ್ತಿತ್ತು. ಅಲ್ಲಿನ ಮುಖ್ಯಮಂತ್ರಿ ತಮ್ಮ ನಿವಾಸದ ನವೀಕರಣ ಹಾಗೂ ಸುಖಲೋಲುಪತೆಗೆ ಬಳಸುತ್ತಿದ್ದರು. ಆದರೂ, ನಮ್ಮ ದೇಶದ ಸಂವಿಧಾನವನ್ನು ಅವರು ಒಪ್ಪುತ್ತಿರಲಿಲ್ಲ. ವಿಶೇಷ ಸ್ಥಾನ ರದ್ದುಗೊಳಿಸುವ ತಾಕತ್ತು ಕಾಂಗ್ರೆಸ್‌ಗೆ ಇರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ನವೀನ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಬಿಜೆಪಿ ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.