ADVERTISEMENT

ಆತಂಕ ಸೃಷ್ಟಿಸಿದ ‘ಅಸನಿ’ ಶೀತಗಾಳಿ

ನಿರಂತರ ಸೋನೆ ಮಳೆ, ರಸ್ತೆಗಳಲ್ಲಿ ಜನಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:38 IST
Last Updated 13 ಮೇ 2022, 2:38 IST
ಚಳಿಯ ಕಾರಣದಿಂದ ಚಿತ್ರದುರ್ಗದ ನಗರದ ಒನಕೆ ಓಬವ್ವ ವೃತ್ತದ ಟೀ ಸ್ಟಾಲ್‌ ಮುಂದೆ ಕುಳಿತ ಜನರು.
ಚಳಿಯ ಕಾರಣದಿಂದ ಚಿತ್ರದುರ್ಗದ ನಗರದ ಒನಕೆ ಓಬವ್ವ ವೃತ್ತದ ಟೀ ಸ್ಟಾಲ್‌ ಮುಂದೆ ಕುಳಿತ ಜನರು.   

ಚಿತ್ರದುರ್ಗ: ಅಸನಿ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಗುರುವಾರ ದಿನಪೂರ್ತಿ ಸೂರ್ಯನ ದರ್ಶನವಾಗಲಿಲ್ಲ.

ಬುಧವಾರ ರಾತ್ರಿ ಬಿಟ್ಟು ಬಿಡದೆ ಸೋನೆ ಮಳೆ ಸುರಿದ ಕಾರಣ ಬೆಳಗಿನ ಜಾವ ಚುಮುಚುಮು ಚಳಿ ಹೆಚ್ಚಾಗಿತ್ತು. ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿದ್ದರಿಂದ ಮಾರುಕಟ್ಟೆ ಹಾಗೂ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು.

ಕಳೆದ ಮೂರು ತಿಂಗಳಿನಿಂದ ಬೇಸಿಗೆ ಬಿಸಿಲಿಗೆ ತತ್ತರಿಸಿದ್ದ ಜನರು ತಂಪಾದ ವಾತಾವರಣದಿಂದ ಹರ್ಷಗೊಂಡಿದ್ದಾರೆ. ಮಳೆಗಿಂತ ಹೆಚ್ಚಾಗಿ ಶೀತಗಾಳಿ ವೇಗವಾಗಿ ಬೀಸುತ್ತಿರುವ ಪರಿಣಾಮ ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೆಟ್‌, ಸ್ವೆಟರ್‌ ಹಾಗೂ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಛತ್ರಿಗಳ ಮೊರೆ ಹೋಗಿರುವುದು ಕಂಡುಬಂದಿತು.

ADVERTISEMENT

ಎರಡು ದಿನಗಳಿಂದ ಏಕಾಏಕಿ ಹವಾಮಾನ ವೈಪರೀತ್ಯವಾದ್ದರಿಂದ ಉಷ್ಣಾಂಶ ಕುಸಿದಿದ್ದು, ಚಳಿ ಹೆಚ್ಚಾಗಿದೆ. ಮಳೆಯೂ ಸುರಿಯುತ್ತಿರುವುದರಿಂದ ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಿದೆ. ಇದರಿಂದ ವಯೋವೃದ್ಧರು, ಮಕ್ಕಳು
ಹಾಗೂ ಅನಾರೋಗ್ಯದಿಂದ ಬಳಲುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯಾವ ಕ್ಷಣದಲ್ಲಾದರೂ ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು. ಜೋಗಿಮಟ್ಟಿ ಅರಣ್ಯ ಪ್ರದೇಶದ ಸುತ್ತಮುತ್ತಲೂ ನಿರಂತರವಾಗಿ ತುಂತುರು ಹನಿ ಸುರಿಯಿತು. ರಸ್ತೆಯಲ್ಲಿ ನೀರು ಹರಿಯುವಷ್ಟು ಮಳೆ ಬಾರದಿದ್ದರೂ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುತ್ತಿದೆ. ಶೀತಗಾಳಿ ಹೆಚ್ಚಾದ ಕಾರಣ ವಾಯುವಿಹಾರ, ಮಾರುಕಟ್ಟೆಗೆ ಹೋಗುವುದಕ್ಕೆ ಸಿದ್ಧತೆ ನಡೆಸಿದ್ದವರು ಬಹುತೇಕ ಮನೆಗಳಲ್ಲೇ ಉಳಿದು ಕೊಳ್ಳುತ್ತಿದ್ದಾರೆ.

ಚಳಿಯ ಕಾರಣಕ್ಕೆ ಟೀ ಸ್ಟಾಲ್‌ಗಳ ಮುಂದೆ ಜನರ ಸಂಖ್ಯೆ ಹೆಚ್ಚಾಗಿತ್ತು. ನಗರದ ಜೋಗಿಮಟ್ಟಿ ರಸ್ತೆ, ದೊಡ್ಡಪೇಟೆ, ಜೆಸಿಆರ್‌, ಕನಕವೃತ್ತ, ತುರವನೂರು ರಸ್ತೆ, ಐಯುಡಿಪಿ ಬಡಾವಣೆಯ ಮಂಡಕ್ಕಿ ಮಿರ್ಚಿ ಅಂಗಡಿಗಳಲ್ಲಿ ಬಿಸಿ ಬಿಸಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿತ್ತು. ಬಹುತೇಕರು ಮನೆಗಳಿಗೆ ಪಾರ್ಸಲ್‌ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಂಗಾರು ಪೂರ್ವ ಮಳೆಯಿಂದ ಕೃಷಿಕರಲ್ಲಿ ಕೊಂಚ ಆತಂಕ ಹೆಚ್ಚಾಗಿದೆ. ಮಳೆಗಿಂತಲೂ ಶೀತಗಾಳಿಯ ವೇಗದ ಕಾರಣ ಬಾಳೆ, ಮಾವು, ರಾಗಿ, ಅಡಕೆ, ಹತ್ತಿ ಬೆಳೆಗಾರರು ಫಸಲು ಕೈ ಬಿಟ್ಟು ಹೋಗುತ್ತದೆ ಎಂಬ ಭಯದಲ್ಲಿದ್ದಾರೆ.

ಮಳೆಯಿಂದಾಗಿ ಚಿತ್ರದುರ್ಗದ ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ ಹಾಗೂ ಜೋಗಿಮಟ್ಟಿಯಲ್ಲಿ ಹಸಿರು ಕಾಣಿಸುತ್ತಿದೆ. ಬೇಸಿಗೆಯಲ್ಲೇ ಇಂತಹ ವಾತಾವರಣ ಮೂಡಿದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರದ ಸಮಸ್ಯೆ ನೀಗಿದಂತಾಗಿದೆ.

ಬಿಸಿಲಿನ ವಾತಾವರಣ ಏಕಾಏಕಿ ಬದಲಾಗಿ ಮಳೆ ಹನಿ ಮಿಶ್ರಿತ ತಂಪುಗಾಳಿ ಬೀಸುತ್ತಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಗಳು ಪ್ರಾರಂಭವಾಗುತ್ತಿರುವ ಹೊತ್ತಲ್ಲಿ ಮಕ್ಕಳಿಗೆ ಶೀತ, ಜ್ವರ ಕಾಣಿಸಿಕೊಳ್ಳುತ್ತಿವೆ.

ಜಗದೀಶ್‌, ಪಾಲಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.