ADVERTISEMENT

ಭೋವಿ ಕುಲಕಸುಬು ನಾಶಕ್ಕೆ ಯತ್ನ: ಸ್ವಾಮೀಜಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಮೇ 2025, 22:54 IST
Last Updated 1 ಮೇ 2025, 22:54 IST
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ   

ಚಿತ್ರದುರ್ಗ: ಪರಿಶಿಷ್ಟ ಜಾತಿ ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಭೋವಿಯವರ ಕುಲ ಕಸುಬುಗಳನ್ನು ನಮೂದು ಮಾಡಿಲ್ಲ. ಆ ಮೂಲಕ ಪರಿಶಿಷ್ಟ ಜಾತಿಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭೋವಿ ಸಮಾಜದ ಕುಲಕಸುಬನ್ನು ರಾಜ್ಯ ಸರ್ಕಾರ ನಾಶ ಮಾಡಲು ಹೊರಟಿದೆ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯಗಳ ಕುಲ ಕಸುಬುಗಳನ್ನು ಕೈಪಿಡಿಯಲ್ಲಿ ನಮೂದು ಮಾಡಲಾಗಿದೆ. ಆದರೆ ಭೋವಿ ಸಮುದಾಯದ ಜನರು ತಲತಲಾಂತರದಿಂದಲೂ ಮಾಡಿಕೊಂಡು ಬಂದಿರುವ ಕಟ್ಟಡ ನಿರ್ಮಾಣ, ಬಾವಿ, ಗೋಕಟ್ಟೆ, ಕೆರೆ ನಿರ್ಮಾಣ ಕಾಯಕ, ಮಣ್ಣಿನ ಕಸುಬುಗಳನ್ನು ಕೈಬಿಡಲಾಗಿದೆ. ಕಲ್ಲುಕುಟಿಕ, ಶಿಲ್ಪಿ, ಬೀಸುವ ಕಲ್ಲು ತಯಾರಕ ಎಂಬ  ಕಸುಬುಗಳನ್ನಷ್ಟೇ ಸೇರಿಸಲಾಗಿದೆ. ಕೆಲವೇ ಕೆಲವು ಸಮುದಾಯಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ತಪ್ಪು ಮಾಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ನಾಗರಿಕತೆಯ ಆರಂಭದಿಂದಲೂ ನಾವು ನಮ್ಮ ಕುಲ ಕಸುಬನ್ನು ಮಾಡಿಕೊಂಡು ಬಂದಿದ್ದೇವೆ. ಆಧುನೀಕರಣ, ನಗರೀಕರಣದ ಸಂದರ್ಭದಲ್ಲೂ ನಮ್ಮ ಕಸುಬು ಉಳಿದಿವೆ. ಕೊಳವೆ ಬಾವಿ ಬರುವುದಕ್ಕೆ ಮೊದಲು ಭೋವಿ ಸಮುದಾಯದ ಕಾರ್ಮಿಕರು ನಿರ್ಮಿಸಿದ ಬಾವಿ, ಕೆರೆ, ಕಟ್ಟೆಗಳೇ ಜನರಿಗೆ ಜೀವಜಲ ಒದಗಿಸುತ್ತಿದ್ದವು. ಸರ್ಕಾರಗಳು ಇಂತಹ ಕುಲಕಸುಬುಗಳನ್ನು ಸಮೀಕ್ಷೆ ವೇಳೆ ಗುರುತಿಸಬೇಕು, ಇತಿಹಾಸವನ್ನು ಅಳಿಸಿ ಹಾಕುವ ಕೆಲಸ ಮಾಡಬಾರದು’ ಎಂದರು.

ADVERTISEMENT

‘ಸಮಸಮಾಜ ನಿರ್ಮಾಣ ಮಾಡಬೇಕಾದರೆ ಸಮುದಾಯಗಳ ದತ್ತಾಂಶದ ಅಗತ್ಯವಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌ ನೇತೃತ್ವದ ಆಯೋಗ ತರಾತುರಿಯಲ್ಲಿ ಕುಲಕಸುಬುಗಳ ಕೈಪಿಡಿ ರೂಪಿಸಿದೆ. ಹಾವಾಡಿಗ, ಗೊಂಬೆ ಆಡಿಸುವವ, ಹಕ್ಕಿಪಿಕ್ಕಿ ವೃತ್ತಿಗಳನ್ನು ಗುರುತಿಸಿ ಭೋವಿ ಸಮುದಾಯದ ಕಸುಬು ಕೈಬಿಟ್ಟಿರುವುದು ಸರಿಯಲ್ಲ. ಸಮೀಕ್ಷೆ ಆರಂಭಗೊಳ್ಳಲು 3 ದಿನಗಳಷ್ಟೇ ಉಳಿದಿದೆ. ಕೂಡಲೇ ತಪ್ಪು ಸರಿಪಡಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೈಪಿಡಿ ರೂಪಿಸುವುದಕ್ಕೂ ಮೊದಲು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ಮುಖಂಡರ ಸಭೆ ನಡೆಸಿ ಚರ್ಚೆ ನಡೆಸಬೇಕಾಗಿತ್ತು. ಭೋವಿ ಸಮುದಾಯದಲ್ಲಿ ನಿರ್ಮಾಣ ಕೆಲಸ ಮಾಡುವ ಕನಿಷ್ಠ 10 ಲಕ್ಷ ಜನರಿದ್ದಾರೆ. ಅವರ ಕುಲಕಸುಬನ್ನು ಸಮೀಕ್ಷೆಯಲ್ಲಿ ನಮೂದು ಮಾಡದಿದ್ದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದರು.

ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ಲಕ್ಷ್ಮಣ್, ವೆಂಕಟೇಶ್, ಗೋವಿಂದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.