ADVERTISEMENT

ರೈತರನ್ನು ಸ್ವಾವಲಂಬಿ ಮಾಡಿದ ಬಾಬೂಜಿ

ಡಾ.ಬಾಬು ಜಗಜೀವನರಾಂ ಜಯಂತಿಯಲ್ಲಿ ಶಾಸಕ ತಿಪ್ಪಾರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 10:58 IST
Last Updated 5 ಏಪ್ರಿಲ್ 2021, 10:58 IST

ಚಿತ್ರದುರ್ಗ: ದೇಶದ ಜನರ ಹಸಿವು ನೀಗಿಸಲು ಮುಂದಾದ ಡಾ.ಬಾಬು ಜಗಜೀವನರಾಂ ಹಸಿರು ಕ್ರಾಂತಿ ರೂಪಿಸಿದರು. ಇದರ ಫಲವಾಗಿ ರೈತರು ಆರ್ಥಿಕವಾಗಿ ಸ್ವಾವಲಂಬಿಯಾದರು ಎಂದು ಶಾಸಕ ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮಾಜಿ ಉ‍ಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಬೂಜಿ ಅವರು ಕೃಷಿ ಸಚಿವರಾಗಿದ್ದ ಕಾಲದಲ್ಲಿ ದೇಶವನ್ನು ಹಸಿವು ಮತ್ತು ಬಡತನ ಕಾಡುತ್ತಿತ್ತು. ವಿದೇಶದಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆಹಾರ ಧಾನ್ಯ ಉತ್ಪಾದನೆಯಲ್ಲಿ ದೇಶ ಹಿಂದೆ ಉಳಿದಿತ್ತು. ರಷ್ಯ ಸೇರಿ ಹಲವು ರಾಷ್ಟ್ರಗಳ ಮೇಲೆ ಅವಲಂಬನೆ ಹೆಚ್ಚಾಗಿತ್ತು’ ಎಂದು ಹೇಳಿದರು.

ADVERTISEMENT

‘ಆಹಾರ ಧಾನ್ಯಗಳ ಕೊರತೆಯನ್ನು ನೀಗಿಸಲು ಹಸಿರು ಕ್ರಾಂತಿಯ ಪರಿಕಲ್ಪನೆ ಮುಂದೆಬಂದಿತು. ಆಹಾರ ಧಾನ್ಯಗಳನ್ನು ಬೆಳೆಯುವ ರೈತರ ಸಾಮರ್ಥ್ಯ ಹೆಚ್ಚಿತು. ವಿದೇಶಕ್ಕೆ ರಫ್ತು ಮಾಡುವಷ್ಟು ಆಹಾರ ಧಾನ್ಯ ದೇಶದಲ್ಲಿ ಉತ್ಪಾದನೆ ಆಗುತ್ತಿದೆ. ಬಾಬೂಜಿ ಅವರು ನೀಡಿದ ಕೊಡುಗೆಯನ್ನು ದೇಶ ಮರೆಯದು’ ಎಂದರು.

‘ಬಾಬೂಜಿ ಹಾಗೂ ಅಂಬೇಡ್ಕರ್‌ ಇಲ್ಲದೇ ಇದ್ದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಒಂದು ಕಪ್ಪುಚುಕ್ಕೆ ಕೂಡ ಇಲ್ಲದಂತೆ ಬಾಬೂಜಿ ಆಡಳಿತ ನಡೆಸಿ ದೇಶಕ್ಕೆ ಮಾದರಿಯಾಗಿದ್ದಾರೆ. ಎಲ್ಲರಿಗೂ ಸ್ಫೂರ್ತಿದಾಯಕ ಆಗಿದ್ದಾರೆ’ ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುರುನಾಥ್ ಅವರು ಬಾಬೂಜಿ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ನರಸಿಂಹರಾಜು, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ತಹಶೀಲ್ದಾರ್ ವೆಂಕಟೇಶಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.