ADVERTISEMENT

ಬಾಗೂರು: ಭೂವೈಕುಂಠ ಸೇವಾ ದರ್ಶನಕ್ಕೆ ಬಿರುಸಿನ ತಯಾರಿ

ಐತಿಹಾಸಿಕ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ನಾಳೆ ಭಕ್ತರ ದಂಡು

ಪ್ರಜಾವಾಣಿ ವಿಶೇಷ
Published 29 ಡಿಸೆಂಬರ್ 2025, 6:44 IST
Last Updated 29 ಡಿಸೆಂಬರ್ 2025, 6:44 IST
ಹೊಸದುರ್ಗದ ಕಸಬಾ ಹೋಬಳಿಯ ಬಾಗೂರಿನಲ್ಲಿ ನೆಲೆಸಿರುವ ಚೆನ್ನಕೇಶವ ಸ್ವಾಮಿ
ಹೊಸದುರ್ಗದ ಕಸಬಾ ಹೋಬಳಿಯ ಬಾಗೂರಿನಲ್ಲಿ ನೆಲೆಸಿರುವ ಚೆನ್ನಕೇಶವ ಸ್ವಾಮಿ   

ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಭಾಗ್ಯಪುರಿ ಅಥವಾ ಬಾಗೂರಿನಲ್ಲಿ ನೆಲೆಸಿರುವ ಶಕ್ತಿ ದೈವ, ಐತಿಹಾಸಿಕ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಡಿ. 30ರಂದು ನಡೆಯಲಿರುವ ವೈಕುಂಠ ಸೇವಾ ದರ್ಶನಕ್ಕೆ ತಯಾರಿ ಬಿರುಸಿನಿಂದ ಸಾಗಿದೆ.

ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ವಿದ್ಯುತ್ ದೀಪಾಲಂಕಾರ ಎಲ್ಲರನ್ನೂ ಸೆಳೆಯುವಂತಿದೆ. ತಳಿರು ತೋರಣ, ಬಗೆಬಗೆಯ ಹೂಗಳಿಂದ ದೇವಾಲಯವನ್ನು ವಿನೂತನ ರೀತಿಯಲ್ಲಿ ಸಿಂಗರಿಸಲಾಗಿದೆ. ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು, ಗರ್ಭಗುಡಿಯವರೆಗೂ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ತಯಾರಾಗುತ್ತಿದೆ. ಭಕ್ತರಿಗೆ ಉಪಹಾರದ ವ್ಯವಸ್ಥೆಗೆ ಅಚ್ಚುಕಟ್ಟಾಗಿ ತಯಾರಿ ನಡೆಯುತ್ತಿದೆ. ಜಾತ್ರೆ ಅಂಗಡಿಯವರೂ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ.

ಅಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ, 6 ಗಂಟೆಗೆ ತೋಮಲಾಸೇವೆ, ಅಲಂಕಾರ, 7 ಗಂಟೆಯಿಂದ ಮಹಾಮಂಗಳಾರತಿ, ವೈಕುಂಠ ದ್ವಾರ ದರ್ಶನವಿರುತ್ತದೆ. ವಿಷ್ಣು ಸಹಸ್ರನಾಮ, ವೇದ ಪಾರಾಯಣ, ಅರ್ಚನೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ADVERTISEMENT

ಭೂ ವೈಕುಂಠ ಸೇವಾ ದರ್ಶನ: ‘ಧನುರ್ಮಾಸದ ಶುಕ್ಲಪಕ್ಷದ ವೈಕುಂಠ ಏಕಾದಶಿಯಂದು ಉತ್ತರ ದಿಕ್ಕಿಗೆ ದೇವರ ಉತ್ಸವ ಮೂರ್ತಿಯನ್ನು ಅಲಂಕರಿಸಿ ಕೂರಿಸಿ ವೈಕುಂಠ ದ್ವಾರ ನಿರ್ಮಿಸಲಾಗುವುದು. ಈ ಉತ್ಸವ ಮೂರ್ತಿಗೆ ಭಕ್ತರು ನಮಸ್ಕರಿಸಿ ಕೆಳಭಾಗದಲ್ಲಿ ನಡೆದು, ವೈಕುಂಠ ದ್ವಾರದ ಮೂಲಕ ಹೊರ ಬರುತ್ತಾರೆ. ಹೀಗೆ ಮಾಡಿದರೆ ಕಷ್ಟ ಕಾರ್ಪಣ್ಯಗಳು ದೂರಾಗಿ, ಸಕಲ ಇಷ್ಟಾರ್ಥ ಸಿದ್ಧಿಸುತ್ತವೆ’ ಎನ್ನುತ್ತಾರೆ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸನ್.

ಇತಿಹಾಸ: 968 ವರ್ಷ ಹಳೆಯದಾದ ಈ ದೇವಾಲಯದ ಮುಂಭಾಗದಲ್ಲಿ 57 ಅಡಿ ಎತ್ತರದ ಗರುಡ ಸ್ತಂಭವಿದೆ. ಬಾಗೂರು ಮೈಸೂರು ಮಹಾರಾಜರು ಹಾಗೂ ಚಿತ್ರದುರ್ಗದ ಪಾಳೇಗಾರರು ಆಳಿದಂತ‌ಹ ಸಂಪದ್ಭರಿತ ನಾಡು. ಇಲ್ಲಿನ ಐತಿಹಾಸಿಕ ಚೆನ್ನಕೇಶವ ಸ್ವಾಮಿ ದೇವಾಲಯವನ್ನು ಹೊಯ್ಸಳರ ಅರಸ ವಿಷ್ಣುವರ್ಧನ ನಿರ್ಮಿಸಿದ್ದ. ದೀಪಸ್ತಂಭಗಳನ್ನು ಚೋಳರು ನಿರ್ಮಿಸಿದ್ದಾರೆ. ಈ ದೇವಾಲಯದಲ್ಲಿ ಒಂದು ಶಿಲಾಶಾಸನವಿದ್ದು, ಬಾಗೂರಿನ ಇತಿಹಾಸವನ್ನು ಹೇಳುತ್ತದೆ. ಚೆನ್ನಕೇಶವ ಸ್ವಾಮಿ ಪ್ರತಿಮೆ ಶಂಖ, ಚಕ್ರ, ಗದಾಪದ್ಮದಿಂದ ಅಲಂಕೃತವಾಗಿದೆ. ಪ್ರತಿವರ್ಷ ಪುಬ್ಬ ನಕ್ಷತ್ರದಂದು ಇಲ್ಲಿ ರಥೋತ್ಸವ ನಡೆಯುತ್ತದೆ.

ವೈಕುಂಠ ಏಕಾದಶಿ ದಿನದಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ, ಶಾಸಕ ಬಿ‌.ಜಿ. ಗೋವಿಂದಪ್ಪ, ತಹಶೀಲ್ದಾರ್ ತಿರುಪತಿ ಪಾಟೀಲ್, ರಾಜಸ್ವ ನಿರೀಕ್ಷಕ ಎಂ.ಎಚ್. ಹರೀಶ್, ಗ್ರಾಮ ಲೆಕ್ಕಾಧಿಕಾರಿ ಬಿ.ಎಸ್. ಭಾಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತರು ಆಗಮಿಸಿ, ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

ಹೊಸದುರ್ಗದ ಬಾಗೂರಿನಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಚೆನ್ನಕೇಶವ ಸ್ವಾಮಿ ದೇವಾಲಯವನ್ನು ಅಲಂಕರಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.