ಚಿತ್ರದುರ್ಗ: ‘ಚಳ್ಳಕೆರೆ ರೈಲ್ವೆ ನಿಲ್ದಾಣದ ಮೂಲಕ ಅದಿರು ಸಾಗಾಟ ಮಾಡುವುದನ್ನು ಸ್ಥಗಿತಗೊಳಿಸಲು ಮನವಿ ಮಾಡಿ ರೈಲ್ವೆ ಇಲಾಖೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚಳ್ಳಕೆರೆ ನಗರದ ರೈಲ್ವೆ ಯಾರ್ಡ್ ಬಳಿ ಅದಿರು ಸಾಗಟದ ಧೂಳಿನಿಂದ ಉಂಟಾಗುತ್ತಿರುವ ಸಮಸ್ಯೆ ಸಂಬಂಧ ನಡೆದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿ ಅವರು ಮಾತನಾಡಿದರು.
‘ರೈಲ್ವೆ ನಿಲ್ದಾಣದಲ್ಲಿ ಅದಿರನ್ನು ಲೋಡ್ ಮತ್ತು ಅನ್‍ಲೋಡ್ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಸಂಖ್ಯೆ ಹಾಗೂ ಸಾಮರ್ಥ್ಯದ ಲಾರಿಗಳ ಓಟಾಟದಿಂದ ಅಪಾಯದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರು ಕೇಳಿ ಬಂದವೆ.ಇದರಿಂದ ಪರಿಸರ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ. ವಾರದಲ್ಲಿ ಅಧಿಕಾರಿಗಳು ವರದಿ ನೀಡಲಿದ್ದಾರೆ. ಇದನ್ನು ಆಧರಿಸಿ ರೈಲ್ವೆ ಇಲಾಖೆಗೆ ಪತ್ರದ ಮುಖೇನ ಅದಿರು ಸಾಗಟ ಸ್ಥಗಿತಗೊಳಿಸಲು ಮನವಿ ಮಾಡಲಾಗುವುದು. ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರೊಂದಿಗೂ ಮಾತನಾಡಲಾಗುವುದು’ ಎಂದರು.
‘ಅದಿರು ಸಾಗಟದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ, ಪ್ರಾದೇಶಿಕ ಸಾರಿಗೆ, ಚಳ್ಳಕೆರೆ ನಗರಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಉಪ ಸಮಿತಿ ರಚನೆ ರಚನೆಯಾಗಬೇಕು. ಈ ಉಪ ಸಮಿತಿ ನಿಯಮಾನುಸಾರ ಅದಿರು ಸಾಗಣಿಕೆ ಮಾಡಲಾಗುತ್ತಿದೆಯೇ ಎಂಬುದರ ಪರಿಶೀಲಿಸುವುದರ ಜೊತೆಗೆ, ಪರ್ಯಾಯ ಮಾರ್ಗಗಳ ಕುರಿತು ಸಲಹೆ ಸೂಚನೆಗಳನ್ನು ಒಂದು ವಾರದಲ್ಲಿ ನೀಡಲಿದೆ’ ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ಪರಿಸರಾಧಿಕಾರಿ ಆಸಿಫ್ ಖಾನ್, ನಗರಾಭಿವೃದ್ಧಿ ಯೋಜನೆ ನಿರ್ದೇಶಕಿ ರೇಷ್ಮಾ ಹಾನಗಲ್, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.