
ಹಿರಿಯೂರು: ತಾಲ್ಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ಈಚೆಗೆ ಕೆಂಚಾಂಬದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
ಮಧ್ಯದಲ್ಲಿ ಕೆಂಚಾಂಬದೇವಿ, ಬಲಗಡೆಯಲ್ಲಿ ಕೊಲ್ಲಾಪುರದಮ್ಮ ಹಾಗೂ ಎಡಗಡೆಯಲ್ಲಿ ಗೌರಸಂದ್ರ ಮಾರಮ್ಮ ದೇವಿ ಮೂರ್ತಿಗಳಿಗೆ ಬಗೆಬಗೆಯ ಹೂವಿನ ಹಾರ, ನಿಂಬೇಹಣ್ಣು, ಹೊಂಬಾಳೆ, ಪತ್ರೆಹಾರದಿಂದ ಸಿಂಗರಿಸಲಾಗಿತ್ತು. ದೇವಸ್ಥಾನಕ್ಕೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅವಲಕ್ಕಿ, ಹಾಲು, ಸಕ್ಕರೆ, ದ್ರಾಕ್ಷಿ, ಗೋಡಂಬಿ, ಉತ್ತುತ್ತಿ, ಮೊಸರು, ತುಪ್ಪದಿಂದ ತಯಾರಿಸಿದ ಪ್ರಸಾದವನ್ನು ದೇವರುಗಳಿಗೆ ನೈವೇದ್ಯ ಮಾಡಿ ಮಹಾಮಂಗಳಾರತಿ ನಂತರ ಭಕ್ತರಿಗೆ ವಿತರಿಸಲಾಯಿತು.
ದೇವಿಯ ಸನ್ನಿಧಿಯಲ್ಲಿ ನರಹರಿ ಸದ್ಗುರು ಭಜನಾ ಬಳಗದ ಆರ್. ಲೋಕೇಶ್ ಮಾಸ್ಟರ್, ಎಸ್.ಟಿ. ಮಂಜುನಾಥ್, ಎಸ್.ಎನ್. ಸಿದ್ದಪ್ಪ, ಕೋಳಿಗೌಡ, ನಿಂಗಮ್ಮ, ಗೌರಮ್ಮ, ರತ್ನಮ್ಮ, ತಿಪ್ಪಮ್ಮ, ಸುಂದರಮ್ಮ ಅವರು ಕೆಂಚಾಂಬ ದೇವಿಯನ್ನು ಕುರಿತು ರಚಿಸಿರುವ 25 ಹಾಡುಗಳನ್ನು ಭಜನೆ ರೂಪದಲ್ಲಿ ಹಾಡಿದರು.
ಪೂಜೆಯಲ್ಲಿ ಕೆಂಚಾಂಬದೇವಿ ಟ್ರಸ್ಟ್ ಸದಸ್ಯರು, ಭಜನಾ ಬಳಗದವರು, ನರಹರಿ ಸದ್ಗರು ವಿದ್ಯಾ ಸಂಸ್ಥೆಯವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.