ADVERTISEMENT

ಬಸವಜಯಂತಿ: ಜಿಲ್ಲೆಯಲ್ಲಿ ಸರಳ ಆಚರಣೆ

* ಹಲವು ಗ್ರಾಮಗಳಲ್ಲಿ ಎತ್ತುಗಳಿಗೆ ಸಿಂಗಾರವಿಲ್ಲ * ಬೆರಳೆಣಿಕೆಯಷ್ಟು ದೇಗುಲಗಳಲ್ಲಿ ಶಾಸ್ತ್ರೋಕ್ತ ಪೂಜೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 16:31 IST
Last Updated 26 ಏಪ್ರಿಲ್ 2020, 16:31 IST
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಅನುಭವ ಮಂಟಪದಲ್ಲಿ ಭಾನುವಾರ ಬಸವ ಜಯಂತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಬಸವ ಅನುಯಾಯಿಗಳು ಆಚರಿಸಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಅನುಭವ ಮಂಟಪದಲ್ಲಿ ಭಾನುವಾರ ಬಸವ ಜಯಂತಿಯನ್ನು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಬಸವ ಅನುಯಾಯಿಗಳು ಆಚರಿಸಿದರು.   

ಚಿತ್ರದುರ್ಗ: ಬಸವ ಜಯಂತಿ ಆಚರಣೆಯೂ ಭಾನುವಾರ ನಗರ ಸೇರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಸಂಭ್ರಮ ಇಲ್ಲದೇ, ಇದೇ ಪ್ರಥಮ ಬಾರಿ ಅತ್ಯಂತ ಸರಳವಾಗಿ ಜರುಗಿತು.

ಬಸವ ಅನುಯಾಯಿಗಳು, ಬಸವ ಭಕ್ತರು ಶ್ರದ್ಧಾಭಕ್ತಿಯಿಂದ ಮನೆಗಳಲ್ಲಿಯೇ ಮಹಾ ಮಾನವತಾವಾದಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಿದರು.

ಅನೇಕರು ಮನೆಗಳಲ್ಲಿ ಮಡಿಯಿಂದ ಸಿದ್ಧಪಡಿಸಿದ ಪಾನಕ, ಕೋಸಂಬರಿ, ತರಕಾರಿ ಪಲ್ಯ, ಮಜ್ಜಿಗೆ, ಚಿತ್ರನ್ನ, ಕೀಲ್ಸಾ, ರವೆ ಪಾಯಸ, ಗಸಗಸೆ ಪಾಯಸ, ಶಾವಿಗೆ ಪಾಯಸವನ್ನು ಬಸವೇಶ್ವರರ ಮುಂದಿಟ್ಟು ಎಡೆಯಾಗಿ ಸಮರ್ಪಿಸುವ ಮೂಲಕ ಮನೆಮಂದಿಯೆಲ್ಲ ಒಟ್ಟುಗೂಡಿ ಪೂಜೆ ಸಲ್ಲಿಸಿದರು. ನಂತರ ತಯಾರಾಗಿದ್ದ ಹಬ್ಬದ ಊಟವನ್ನು ಸವಿದರು.

ADVERTISEMENT

ಗ್ರಾಮೀಣ ಭಾಗಗಳಲ್ಲಿ ಎತ್ತುಗಳನ್ನು ಅಲಂಕರಿಸಿ ವಿಶೇಷವಾಗಿ ಜಯಂತಿ ಆಚರಿಸುವ ಸಂಪ್ರದಾಯ ಇದೆ. ಆದರೆ, ಪ್ರಸಕ್ತ ವರ್ಷ ಆ ಉತ್ಸಾಹ ವಿವಿಧೆಡೆ ಕಂಡು ಬರಲಿಲ್ಲ. ಸರಳವಾಗಿ ಮನೆಗಳಲ್ಲೇ ಜಯಂತಿ ಆಚರಿಸಿದ್ದು, ಹೆಚ್ಚಾಗಿ ಕಂಡು ಬಂತು. ಇನ್ನೂ ಬೆರಳೆಣಿಕೆಯಷ್ಟು ಕಡೆ ಸರಳ ವಿವಾಹಗಳು ನಡೆದವು. ಬಸವ ಜಯಂತಿ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ.

ಇನ್ನೂ ಪ್ರತಿ ವರ್ಷ ಶಿವ, ಬಸವಣ್ಣನ ದೇಗುಲಗಳಲ್ಲಿ ವೈಭವೋಪೇತವಾಗಿ ನಡೆಯುತ್ತಿದ್ದ ಆಚರಣೆಯೂ ಈ ಬಾರಿ ನಗರದ ಬೆರಳೆಣಿಕೆಯಷ್ಟು ಕಡೆ ಅರ್ಚಕರು ಮಾತ್ರ ದೇಗುಲಕ್ಕೆ ತೆರಳಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಯಿತು. ವಿಶೇಷವಾದ ಪುಪ್ಪಾಲಂಕಾರ ಇರಲಿಲ್ಲ. ಸಡಗರದ ವಾತಾವರಣ ಎಲ್ಲಿಯೂ ಕಾಣಲಿಲ್ಲ.

ವೀರಶೈವ ಸಮಾಜದಿಂದ ಪ್ರತಿ ವರ್ಷ ವಿಶೇಷವಾಗಿ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿರುವ ಇಲ್ಲಿನ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಜಯಂತಿ ಅಂಗವಾಗಿ ಬಸವೇಶ್ವರರ ಭಾವಚಿತ್ರ ಹಾಗೂ ದೇವರ ಮೂರ್ತಿಗಳಿಗೆ ಅರ್ಚಕರಿಂದ ಸರಳವಾಗಿ ಪೂಜೆ ನೆರವೇರಿತು. ಅದ್ದೂರಿ ಮೆರವಣಿಗೆ ಈ ಬಾರಿ ರದ್ದುಗೊಳಿಸಿದ್ದರು.

ದೊಡ್ಡಪೇಟೆ, ಚಿಕ್ಕಪೇಟೆ ಸೇರಿ ಕೆಲವೆಡೆ ಬಸವನ ಗುಡಿಗಳಲ್ಲಿ ಸರಳ ಪೂಜೆ ನೆರವೇರಿತು. ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಕೂಡ ಹಲವೆಡೆ ಬಸವೇಶ್ವರರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಅತ್ಯಂತ ಸರಳವಾಗಿ ಆಚರಿಸಿದರು.

ಕಾಯಕವೇ ಕೈಲಾಸ: ‘ಕಾಯಕವೇ ಕೈಲಾಸ’ ಎಂದು ಅದರ ಮಹತ್ವ ಜಗತ್ತಿಗೆ ಸಾರಿದ ಬಸವಣ್ಣನ ತತ್ವ ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ನಡೆದ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಅವರೂ ಇದ್ದರು.

ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ಅನುಭವ ಮಂಟಪದಲ್ಲಿ ಪುಷ್ಪಗಳಿಂದ ಅಲಂಕರಿಸಿ ಬಸವ ಜಯಂತಿ ಆಚರಿಸಲಾಯಿತು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಜಿಲ್ಲಾ ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪ ಹಾಗೂ ಪತಂಜಲಿ ಭಾರತ ಸ್ವಾಭಿಮಾನ ಟ್ರಸ್ಟ್ ಯೋಗ ಸಮಿತಿ ಪದಾಧಿಕಾರಿಗಳು ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಿದರು.

ಸಮಿತಿ ಯೋಗ ಪ್ರಚಾರಕ ರವಿ ಕೆ.ಅಂಬೇಕರ್, ಯೋಗ ಶಿಕ್ಷಕರಾದ ಎಲ್.ಎಸ್. ಬಸವರಾಜ್, ಎಂ.ಆರ್. ಮಂಜುನಾಥ್, ಗುತ್ತಿಗೆದಾರ ಕಣ್ಣನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.