ADVERTISEMENT

ಕುಗ್ರಾಮದಲ್ಲೊಂದು ಸುಂದರ ಸರ್ಕಾರಿ ಶಾಲೆ

ಓಬಳಾಪುರ ತಾಂಡಾದಲ್ಲಿ ಬಸ್‌ಗಾಗಿ 10 ಕಿ.ಮೀ. ನಡೆಯಬೇಕಾದ ಅನಿವಾರ್ಯ, ವಿದ್ಯಾರ್ಥಿಗಳ ಪರದಾಟ ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:59 IST
Last Updated 1 ಅಕ್ಟೋಬರ್ 2021, 4:59 IST
ಹಿರಿಯೂರು ತಾಲ್ಲೂಕಿನ ಓಬಳಾಪುರ ತಾಂಡಾದಲ್ಲಿ ಶಾಸಕರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿಸಿರುವ ಶಾಲಾ ಕೊಠಡಿ.
ಹಿರಿಯೂರು ತಾಲ್ಲೂಕಿನ ಓಬಳಾಪುರ ತಾಂಡಾದಲ್ಲಿ ಶಾಸಕರ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಿಸಿರುವ ಶಾಲಾ ಕೊಠಡಿ.   

ಓಬಳಾಪುರ ತಾಂಡಾ (ಹಿರಿಯೂರು):ಈ ತಾಂಡಾದ ಜನ ಬಸ್‌ ಹಿಡಿದು ಹಿರಿಯೂರು ಅಥವಾ ಬೆಂಗಳೂರು ಕಡೆ ಹೋಗಬೇಕೆಂದರೆ 10 ಕಿ.ಮೀ. ದೂರದಲ್ಲಿರುವ ಹೋಬಳಿ ಕೇಂದ್ರ ಜವನಗೊಂಡನಹಳ್ಳಿಗೆ ಹೋಗಲೇಬೇಕು.

ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಯಾರಾದರೂ ಶಿಕ್ಷಕರು ವರ್ಗಾವಣೆ ಆಗಿದ್ದಾರೆ ಎಂದರೆ ಅದು ಶಿಕ್ಷಾರ್ಹ ಎಂಬ ಮಾತು ಜನಜನಿತ. ಇಂತಹ ಊರಿಗೆ ವರ್ಗಾವಣೆಯಾಗಿ ಬಂದ ಇಬ್ಬರು ಶಿಕ್ಷಕರು ಎರಡು ವರ್ಷಗಳಲ್ಲಿ ಇಡೀ ಶಾಲೆಯನ್ನು ಸುಂದರಗೊಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹಿರಿಯೂರು ತಾಲ್ಲೂಕಿನ ಓಬಳಾಪುರ ತಾಂಡಾಕ್ಕೆ ಹೋಗಬೇಕೆಂದರೆ ಜವನಗೊಂಡನಹಳ್ಳಿಯಲ್ಲಿ ಇಳಿದು ಆಟೊ ಅಥವಾ ಪರಿಚಯಸ್ಥರ ವಾಹನಗಳನ್ನು ಹಿಡಿಯಲೇಬೇಕು. ಅಂತಹ ಶಾಲೆಗೆ 2018–19ರಲ್ಲಿ ಆರ್. ಹಾಲೇಶಪ್ಪ ಹಾಗೂ ಇ.ಎಸ್. ರೂಪಾದೇವಿ ಶಿಕ್ಷಕರಾಗಿ ಬಂದರು. ಒಂದರಿಂದ ಐದನೇ ತರಗತಿಯವರೆಗೆ 2016–17ರಲ್ಲಿ 46 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 74ಕ್ಕೆ ಏರಿದೆ.

ADVERTISEMENT

ಇಬ್ಬರೂ ಶಿಕ್ಷಕರು ಬಿಸಿಯೂಟಕ್ಕೆ ಬೇಕಿದ್ದ ಸೊಪ್ಪು–ತರಕಾರಿಯನ್ನು ಹಿರಿಯೂರಿನಿಂದ ತರಬೇಕಿತ್ತು. ಅಡುಗೆ ತಯಾರಿಸುವ ವೇಳೆಗೆ ಸೊಪ್ಪೆಲ್ಲ ಬಾಡಿ ಹೋಗಿರುತ್ತಿತ್ತು. ಹೀಗಾಗಿ ಶಾಲೆಯ ಆವರಣದಲ್ಲಿ ಪೌಷ್ಟಿಕ ಆಹಾರಗಳಾದ ಸೊಪ್ಪು, ತರಕಾರಿ ಬೆಳೆಯಲು ಮುಂದಾದರು. ನಿತ್ಯ ಶುಚಿ–ರುಚಿಯಿಂದ ಕೂಡಿದ ಬಿಸಿಯೂಟ, ಇಬ್ಬರೂ ಶಿಕ್ಷಕರ ಪ್ರೀತಿಯ ಬೋಧನೆ ಮಕ್ಕಳನ್ನು ಶಾಲೆಯತ್ತ ಆಕರ್ಷಿಸತೊಡಗಿತು.

ಮುಖ್ಯಶಿಕ್ಷಕ ಹಾಲೇಶಪ್ಪ ಪ್ರಯತ್ನದ ಫಲವಾಗಿ ಶಾಸಕರ ಆದರ್ಶ ಗ್ರಾಮ ಯೋಜನೆಯಡಿ ನೂತನ ಶಾಲಾ ಕೊಠಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೈಟೆಕ್ ಶೌಚಾಲಯ, ಗೇಟು, ಕಮಾನು ನಿರ್ಮಾಣಗೊಂಡವು. ಶಾಲಾ ಆವರಣಕ್ಕೆ ರಕ್ಷಣೆ ದೊರೆತ ಮೇಲೆ ಸೊಪ್ಪು–ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಲಾಕ್‌ಡೌನ್ ನಂತರ ಭೌತಿಕ ತರಗತಿಗಳು ಬಂದ್ ಆಗಿದ್ದರಿಂದ ಸೊಪ್ಪು–ತರಕಾರಿ ಒಣಗತೊಡಗಿದವು. ಹೀಗಾಗಿ ದೊಡ್ಡ ಗಿಡಗಳನ್ನು ಬೆಳೆಸುವತ್ತ ಅವರು ಗಮನಹರಿಸಿದ್ದಾರೆ.

ಪ್ರಸ್ತುತ ಶಾಲಾ ಆವರಣದಲ್ಲಿ ಸೀಬೆ, ನುಗ್ಗೆ, ನೇರಳೆ, ಕರಿಬೇವು, ಹೊಂಗೆ, ಬೇವು, ಹೆಬ್ಬೇವು,
ಗಸಗಸೆ ಒಳಗೊಂಡಂತೆ 125 ಗಿಡಗಳನ್ನು ಬೆಳೆಸಿದ್ದು, ಸೀಬೆ, ನುಗ್ಗೆ, ನೇರಳೆ ಫಸಲು ಬಿಡುತ್ತಿವೆ. ಇಡೀ ಆವರಣ ಹಸಿರಿನಿಂದ
ಕಂಗೊಳಿಸುತ್ತಿದೆ.

ಓಬಳಾಪುರ ತಾಂಡಾಕ್ಕೆ ವರ್ಗಾವಣೆಯಾಗಿ ಬರುತ್ತಿದ್ದ ಶಿಕ್ಷಕರು ಶಾಲೆಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣಕ್ಕೆ ತಮ್ಮನ್ನು ಅಲ್ಲಿಗೆ ನಿಯೋಜಿಸಿದವರನ್ನು ಶಪಿಸುತ್ತಿದ್ದುದೇ ಹೆಚ್ಚು. ಮತ್ತೆ ಕೆಲವರು ಪ್ರಭಾವ ಬಳಸಿ ಬೇರೆ ಶಾಲೆಗಳಿಗೆ ನಿಯೋಜನೆ ಮಾಡಿಸಿಕೊಂಡಿದ್ದೂ ಉಂಟು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರ ಸಹಕಾರ ಪಡೆದು ಶಾಲೆಗೆ ಹೊಸರೂಪ ಕೊಟ್ಟ ಕೀರ್ತಿ ಹಾಲೇಶಪ್ಪ ಮತ್ತು ರೂಪಾದೇವಿ ಅವರಿಗೆ ಸಲ್ಲುತ್ತದೆ.

ಸಾರಿಗೆ ವ್ಯವಸ್ಥೆ ಕಲ್ಪಿಸಿ: ಓಬಳಾಪುರ ಮತ್ತು ಓಬಳಾಪುರ ತಾಂಡಾದಿಂದ ನಿತ್ಯ 25ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿಗಳು ಜವನಗೊಂಡನಹಳ್ಳಿಗೆ ನಡೆದುಕೊಂಡು ಇಲ್ಲವೇ ಬೈಕ್‌ ಹಿಡಿದು ಹೋಗಬೇಕಿದೆ. ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ಶಿಕ್ಷಕರಾದ ಹಾಲೇಶಪ್ಪ ಮತ್ತು ರೂಪಾದೇವಿ.

***

ಮಕ್ಕಳ ಪರದಾಟ ನೋಡಲು ಬೇಸರವಾಗುತ್ತದೆ. ಆಟೊ ಪ್ರಯಾಣ ದುಬಾರಿ. ಹೀಗಾಗಿ ಈ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಬಸ್‌ ಸೌಲಭ್ಯ ಕಲ್ಪಿಸಬೇಕು.

–ಹಾಲೇಶಪ್ಪ, ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.