ADVERTISEMENT

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಿ: ಶಾಸಕ ಟಿ. ರಘುಮೂರ್ತಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 4:11 IST
Last Updated 12 ಏಪ್ರಿಲ್ 2022, 4:11 IST
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು.
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಟಿ. ರಘುಮೂರ್ತಿ ಮಾತನಾಡಿದರು.   

ಚಳ್ಳಕೆರೆ: ಬೇಸಿಗೆ ಬಿರು ಬಿಸಿಲಿನ ತಾಪ ದಿನದಿನಕ್ಕೂ ಹೆಚ್ಚುತ್ತಿರುವುದರಿಂದ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸ ಬೇಕು ಎಂದು ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಇಲಾಖೆಯ ವಿವಿಧ ಯೋಜನೆ ಪ್ರಗತಿ ವರದಿಯ ಪೂರ್ಣ ಮಾಹಿತಿಯನ್ನು ದಾಖಲೆಗಳೊಂದಿಗೆ ಅಧಿಕಾರಿಗಳೇ ಸಭೆಗೆ ಖುದ್ದಾಗಿ ಹಾಜರಾಗಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಮುಂದಿನ ದಿನಗಳಲ್ಲಿ ಕೋವಿಡ್‍ನ ಮತ್ತೊಂದು ರೂಪಾಂತರಿ ವೈರಾಣು ಹರಡುವ ವದಂತಿ ಹಬ್ಬಿದ್ದು, ಹೀಗಾಗಿ ಶುದ್ಧ ಕುಡಿಯುವ ನೀರು ಪೂರೈಕೆಯ ಜತೆಗೆ ಗ್ರಾಮದ ಸ್ವಚ್ಛ ಹಾಗೂ ನೈರ್ಮಲ್ಯದ ಕಡೆಗೂ ಗ್ರಾಮಾಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ಜನರ ಸಮಸ್ಯೆಗಳನ್ನು ಅರಿಯಲು ಪ್ರತಿದಿನ ಆಯಾ ಗ್ರಾಮ ಪಂಚಾಯಿತಿಗೆ ತಪ್ಪದೇ ಭೇಟಿ ನೀಡಬೇಕು’ ಎಂದು ಹೇಳಿದರು.

‘ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಬೇಕು. ಜಾಬ್‍ಕಾರ್ಡ್ ಹೊಂದಿರುವವರಿಗೆ ಗ್ರಾಮದಲ್ಲೇ ಕೂಲಿ ಕೆಲಸ ಒದಗಿಸುವ ಮೂಲಕ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ಅಧಿಕಾರಿಗಳು ತಡೆಯಬೇಕು’ ಎಂದು ಹೇಳಿದರು.

ಕಾರ್ಯನಿರ್ವಹಣಾಧಿಕಾರಿ ಹನು ಮಂತಪ್ಪ, ‘ಶುದ್ಧ ಕುಡಿಯುವ ನೀರು ಪೂರೈಕೆಯ ಜತೆಗೆ ಅಗತ್ಯವಿರುವ ಗ್ರಾಮದಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸಬೇಕು. ವಾರದಲ್ಲಿ 2ರಿಂದ 3 ದಿವಸ ರಸ್ತೆ, ಚರಂಡಿಯ ಸ್ವಚ್ಛ ಮಾಡಿಸಬೇಕು’ ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ತಹಶೀಲ್ದಾರ್ ಎನ್.ರಘುಮೂರ್ತಿ, ‘ಮುಂಗಾರು ಹಂಗಾಮಿನ ಒಣ ಬೇಸಾಯಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ ನೀಡಬೇಕು’ ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ಮಾಂತೇಶ ಕಣ್ಣೂರು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಆರೋಗ್ಯ ಇಲಾಖೆ ಆರೋಗ್ಯಾಧಿಕಾರಿ ಎಸ್.ಬಿ. ತಿಪ್ಪೇಸ್ವಾಮಿ ಮಾತನಾಡಿದರು.

ಕೃಷಿ ಸಹಾಯಕ ನಿರ್ದೇಶಕ ಅಶೋಕ್, ತೋಟಗಾರಿಕಾ ಹಿರಿಯ ಸಹಾಯಕ ಡಾ.ವಿರೂಪಾಕ್ಷಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.