ADVERTISEMENT

ಭದ್ರಾ ಮೇಲ್ದಂಡೆ: ಕಾಮಗಾರಿಗೆ ವೇಗ ನೀಡಲು ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:17 IST
Last Updated 10 ಜನವರಿ 2026, 6:17 IST
ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು 
ಹಿರಿಯೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು    

ಹಿರಿಯೂರು: ‘ಬಯಲುಸೀಮೆಯ ಜನರ ಹಲವು ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭಗೊಂಡು 20 ವರ್ಷ ಕಳೆದರೂ ಮುಗಿಯುವ ಲಕ್ಷಣ ಕಾಣದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಎಚ್ಚರಿಸಲು ಜಿಲ್ಲೆಯಾದ್ಯಂತ ಈ ತಿಂಗಳ ಕೊನೆಯ ವಾರದಲ್ಲಿ ಹೋರಾಟ ಆರಂಭಿಸಲಾಗುವುದು’ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಸಿದರು.

ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶುಕ್ರವಾರ ಭದ್ರಾ ಮೇಲ್ದಂಡೆ ಕಾಮಗಾರಿ ಚುರುಕುಗೊಳಿಸಲು ನಡೆಸಬೇಕಾದ ಹೋರಾಟದ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ₹ 5,300 ಕೋಟಿ ಅನುದಾನ ನೀಡುವ ಭರವಸೆ ನೀಡಿತ್ತು. ಆದರೆ, ಇಂದಿಗೂ ಬಿಡುಗಡೆ ಮಾಡಿಲ್ಲ. ಪದೇಪದೇ ಕೇಂದ್ರದ ಕಡೆ ಬೊಟ್ಟು ಮಾಡುವ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದ ಕಾರಣಕ್ಕೆ ಯೋಜನೆಯ ವೆಚ್ಚ ದಿನೇ ದಿನೇ ಹೆಚ್ಚುತ್ತಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಬಯಲುಸೀಮೆಯ ರೈತರಲ್ಲಿನ ಆತಂಕವೂ ಹೆಚ್ಚುತ್ತಿದೆ’ ಎಂದು ಹೇಳಿದರು.

ADVERTISEMENT

ಬೇಡಿಕೆಗಳು:

‘ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕನಿಷ್ಠ ₹ 5,000 ಕೋಟಿ ಅನುದಾನ ಮೀಸಲಿಡಬೇಕು. ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ ₹ 5,300 ಕೋಟಿ ಮೊತ್ತವನ್ನು ತಡಮಾಡದೆ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ಎಲ್ಲ ಮಣ್ಣಿನ ಕೆರೆಗಳಿಗೆ ಭದ್ರಾ ಯೋಜನೆ ಮೂಲಕ ನೀರು ತುಂಬಿಸಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಬೇಡಿಕೆಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು. ಸರ್ಕಾರ ಖಚಿತ ಭರವಸೆ ನೀಡದೇ ಹೋದರೆ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಹಾಗೆಯೇ ಕೇಂದ್ರದ ವಿರುದ್ಧ ಫೆಬ್ರುವರಿ ಮೊದಲ ವಾರದಲ್ಲಿ ದೆಹಲಿಯ ಜಂಥರ್ ಮಂಥರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದರು.

ಈಶ ಸಂಸ್ಥೆ ವಿರುದ್ಧ ಮನವಿ: 

ಹಿರಿಯೂರು ತಾಲ್ಲೂಕಿನಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವ ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳಲು ಈಶ ಸಂಸ್ಥೆಗೆ ವಹಿಸಿರುವ ಜವಾಬ್ದಾರಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ರೈತರು ಒತ್ತಾಯಿಸಿದ್ದರೂ, ಸಂಸ್ಥೆಯನ್ನು ಮುಂದುವರಿಸಿರುವುದು ಖಂಡನೀಯ. ಸರ್ಕಾರ ತಕ್ಷಣ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರರ್‌ಗೆ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಮುಖಂಡರಾದ ತಿಪ್ಪೀರಣ್ಣ, ಜಿ.ಪಿ. ಯಶವಂತರಾಜು, ಅರಳೀಕೆರೆ ತಿಪ್ಪೇಸ್ವಾಮಿ, ಎಂ.ಆರ್. ವೀರಣ್ಣ, ಈರಣ್ಣ, ವದ್ದೀಕೆರೆ ಕಾಂತರಾಜು, ಕಲ್ಲಟ್ಟಿ ಪಾತಣ್ಣ, ತಿಮ್ಮಾರೆಡ್ಡಿ, ಸಣ್ಣತಿಮ್ಮಣ್ಣ, ಎಚ್.ಟಿ. ಚಂದ್ರಶೇಖರ್, ನಂದಿಹಳ್ಳಿ ರಂಗಸ್ವಾಮಿ, ಜಯಣ್ಣ, ಜಗನ್ನಾಥ್, ವಿರೂಪಾಕ್ಷ, ನಿಂಗಪ್ಪ, ಬಿ.ಆರ್.ರಂಗಸ್ವಾಮಿ, ಶಿವಣ್ಣ, ಬಾಲಕೃಷ್ಣ, ರಾಮಕೃಷ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.