ADVERTISEMENT

ಗಂಗಸಮುದ್ರಕ್ಕೆ ಎಚ್.ಆಂಜನೇಯ ಭೇಟಿ: ಭದ್ರಾ ಕಾಮಗಾರಿಗೆ ಭೂಮಿ ನೀಡಲು ರೈತರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:04 IST
Last Updated 7 ಸೆಪ್ಟೆಂಬರ್ 2025, 2:04 IST
ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಅವರು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು
ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಅವರು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ನಡೆಯುತ್ತಿರುವ ತಾಲ್ಲೂಕಿನ ಗಂಗಸಮುದ್ರಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಶನಿವಾರ ಭೇಟಿ ನೀಡಿ ರೈತರ ಮನವೊಲಿಸಿದರು.

‘ಹೆಚ್ಚು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದ ಗಂಗಸಮುದ್ರದ ನಾಲ್ವರು ರೈತರು ಪೈಪ್‌ಲೈನ್ ಹಾಗೂ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಭೂಮಿ ನೀಡಿರಲಿಲ್ಲ. ಇದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ರೈತರು ಭೂಮಿ ನೀಡಲು ಒಪ್ಪಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಸಮಸ್ಯೆ ಪರಿಹಾರವಾಗಿದೆ’ ಎಂದು ಆಂಜನೇಯ ತಿಳಿಸಿದರು.

‘ಹೊಳಲ್ಕೆರೆ ತಾಲ್ಲೂಕು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿತ್ತು. ಆಗ ಇದರ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಆದರೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಪ್ಪಿಸಿ ತಾಲ್ಲೂಕನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದೆ. ಜೊತೆಗೆ ₹110 ಕೋಟಿ ವೆಚ್ಚದಲ್ಲಿ 22 ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಮಹತ್ವದ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲಾಯಿತು. ಈ ಯೋಜನೆಯ ಯಶಸ್ಸು ನನಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು’ ಎಂದರು.

ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ನಡೆದಿದ್ದರರಿಂದ ಅದರ ಲಾಭ ರೈತರಿಗೆ ಇನ್ನೂ ಸಿಕ್ಕಿಲ್ಲ. ಒಟ್ಟು ₹200 ಕೋಟಿ ವೆಚ್ಚದಲ್ಲಿ ತಾಳ್ಯ ಹೋಬಳಿ ಸೇರಿ 30 ಕೆರೆಗಳಿಗೆ ಭದ್ರಾ ನೀರು ಹರಿಯಲಿದೆ. ನಂತರ ಅಂತರ್ಜಲ ಹೆಚ್ಚಲಿದ್ದು, ರೈತರಿಗೆ ಅನುಕೂಲ ಆಗಲಿದೆ ಎಂದರು.

ತಹಶೀಲ್ದಾರ್ ವಿಜಯಕುಮಾರ್, ಭದ್ರಾ ಮೇಲ್ದಂಡೆ ಯೋಜನೆಯ ಎಇಇ ನಾಗರಾಜ್, ಎಇ ಕಿರಣ್, ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ, ಎಂ.ಎಸ್.ನಾಗಪ್ಪ, ನಾಗಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಗಂಗಾಧರ್, ಲೋಹಿತಕುಮಾರ್, ಡಿ.ಕೆ.ಶಿವಮೂರ್ತಿ, ರಂಗಸ್ವಾಮಿ, ಪಿ.ಆರ್.ಶಿವಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುತ್ತುಗದೂರು ರುದ್ರಣ್ಣ ಇದ್ದರು.

ಭದ್ರಾ ಮೇಲ್ದಂಡೆ ಯೋಜನೆಯ ನೀರು ಮೊದಲಿಗೆ ಹೊಳಲ್ಕೆರೆ ತಾಲ್ಲೂಕಿಗೆ ಹರಿಯಲಿದೆ. ನೀರು ಬಂದ ನಂತರ ಅರೆಮಲೆನಾಡು ಪೂರ್ಣ ಪ್ರಮಾಣದ ಮಲೆನಾಡಾಗಿ ಪರಿವರ್ತನೆ ಆಗಲಿದೆ.
– ಎಚ್.ಆಂಜನೇಯ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.