
ಮೊಳಕಾಲ್ಮುರು: ತಾಲ್ಲೂಕಿಗೆ ಭದ್ರಾಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ಶೀಘ್ರ ನೀರು ಹರಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಧರಣಿಗೆ ಚಾಲನೆ ನೀಡಲಾಯಿತು.
ಬಸ್‌ನಿಲ್ದಾಣದ ಆವರಣದಲ್ಲಿ ಧರಣಿ ಆರಂಭಿಸಲಾಗಿದ್ದು, ತಾಲ್ಲೂಕು ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತಸಂಘ ಮತ್ತು ಹಸಿರುಸೇನೆ, ದಲಿತ ಸಂಘರ್ಷ ಸಮಿತಿ, ಸಿಪಿಐ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಧರಣಿ ನಡೆಸಲಾಗುತ್ತಿದೆ.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ₹ 5,300 ಕೋಟಿ ಅನುದಾನ ಬಿಡುಗಡೆ ಮಾಡಲು ಕೇಂದ್ರಸರ್ಕಾರ ಮುಂದಾಗುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಿತಾಸಕ್ತಿ ಪ್ರದರ್ಶನ ಮಾಡದಿರುವುದು ಹಿನ್ನೆಡೆಗೆ ಮುಖ್ಯ ಕಾರಣ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಪ್ರಕಾಶ್ ಆರೋಪಿಸಿದರು.
ಜನಪ್ರತಿನಿಧಿಗಳ ಭರವಸೆಯನ್ನು ನಂಬಿಕೊಂಡಲ್ಲಿ ಪ್ರಯೋಜನವಿಲ್ಲ. ಹೋರಾಟವನ್ನು ಚುರುಕುಗೊಳಿಸಿದರೆ ಮಾತ್ರ ಸರ್ಕಾರ ಸ್ಪಂದಿಸಲಿದೆ ಎಂದು ರೈತಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ಹೊರಹಾಕಿದರು.
ಫೆ. 7 ರಿಂದ 9 ರವರೆಗೆ ಮೂರು ದಿನಗಳು ಮೊಳಕಾಲ್ಮುರಿನಲ್ಲಿ ಧರಣಿ ನಡೆಸಲಾಗುವುದು, 10 ರಂದು ಮೊಳಕಾಲ್ಮುರು ಬಂದ್‌ಗೆ ಕರೆ ನೀಡಲಾಗಿದ್ದು, ಸಹಕಾರ ನೀಡಬೇಕು. 13 ರಂದು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ನಮ್ಮ ಅಹವಾಲನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಸಿ. ನಾಗರಾಜ್ ಮನವಿ ಮಾಡಿದರು.
ಸಿಪಿಐ ಮುಖಂಡ ಜಾಫರ್ ಷರೀಫ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಗಟಕದ ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ ಮಾತನಾಡಿದರು.
ರೈತಸಂಘದ ಎಸ್. ರಾಜಣ್ಣ, ಜಿಲ್ಲಾ ಘಟಕದ ಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಕೆ. ಜಗಳೂರಯ್ಯ, ಹಿರೇಹಳ್ಳಿ ತಿಪ್ಪೇಸ್ವಾಮಿ, ಜೀರಹಳ್ಳಿ ತಿಪ್ಪೇಸ್ವಾಮಿ, ಸಂಜೀವಪ್ಪ, ಹಾನಗಲ್ ಪರಮೇಶ್, ಪಾಪಯ್ಯ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.