ADVERTISEMENT

ಸಮನ್ವಯದಿಂದ ಮಾತ್ರ ಭದ್ರಾ ಕಾಮಗಾರಿ ಪೂರ್ಣ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಧರಣಿ, ಸತ್ಯಾಗ್ರಹ ಕೈಬಿಡುವಂತೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:34 IST
Last Updated 28 ಫೆಬ್ರುವರಿ 2026, 5:34 IST
ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು
ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು   

ಸಿರಿಗೆರೆ: ‘ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘಟನೆಗಳು ಧರಣಿ, ಸತ್ಯಾಗ್ರಹದ ಹಾದಿ ಕೈಬಿಟ್ಟು ಸರ್ಕಾರಗಳೊಂದಿಗೆ ಸಮನ್ವತೆ ಸಾಧಿಸುವ ದಾರಿ ಅನುಸರಿಸಬೇಕು’ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದರು. 

ಇಲ್ಲಿಯ ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನಪ್ರತಿನಿಧಿಗಳು ಮತ್ತು ರೈತ ಸಂಘಟನೆಗಳ ಸಭೆಯಲ್ಲಿ ಮಾತನಾಡಿದರು.

‘2008ರಲ್ಲಿ ಆರಂಭಗೊಂಡ ಕಾಮಗಾರಿ ಇಂದಿಗೂ ಆಮೆ ವೇಗದಲ್ಲಿ ನಡೆಯುತ್ತಿದೆ. ಸರ್ಕಾರಕ್ಕೆ ದೊಡ್ಡ ಶಕ್ತಿ ಇದೆ, ಸರ್ಕಾರ ಮನಸ್ಸು ಮಾಡಿದರೆ ಎಲ್ಲ ಕಾಮಗಾರಿ ಬಹಳ ಬೇಗ ಮುಗಿಯುತ್ತದೆ. ಹೀಗಾಗಿ ಸರ್ಕಾರಗಳ ಜೊತೆ ಸ್ನೇಹಯುತವಾಗಿ ಮಾತುಕತೆ ನಡೆಸಿ ಯೋಜನೆಯನ್ನು ಸಾಕಾರಗೊಳಿಸಬೇಕು. ಪ್ರತಿಭಟನೆ, ಹೋರಾಟಗಳಿಂದ ಯೋಜನೆ ಜಾರಿಗೊಳಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸೌಹಾರ್ದಯುತ ಚರ್ಚೆ ನಡೆಸುವ ಮೂಲಕ ಯೋಜನೆ ಜಾರಿಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಈ ಯೋಜನೆಯ ಜಾರಿಗಾಗಿ ಈ ಹಿಂದೆ ದಾವಣಗೆರೆಯಲ್ಲಿ ಹಲವು ಬಾರಿ ಅಧಿಕಾರಿಗಳು ಮತ್ತು ರಾಜಕೀಯ ಧುರೀಣರ ಸಭೆ ನಡೆಸಿದ್ದೇವೆ. ಯೋಜನೆಗೆ ಅಡ್ಡಿಯಾಗಿರುವ ಹಣಕಾಸು ಮತ್ತು ತಾಂತ್ರಿಕ ತೊಂದರೆಗಳನ್ನು ಬಗೆಹರಿಸಲು ಮುಂದಾಗಬೇಕು’ ಎಂದು ತಿಳಿಸಿದರು. 

ನೆರವಿಗೆ ಮನವಿ: ‘ಒಂದೂವರೆ ದಶಕಗಳಿಂದಲೂ ನಿಧಾನಗತಿಯಲ್ಲಿ ಸಾಗುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಳಿಸಲು ನೇತೃತ್ವ ವಹಿಸಬೇಕು. ಯೋಜನೆ ಸಾಕಾರಗೊಳ್ಳಲು ಸಹಕಾರ ನೀಡಬೇಕು’ ಎಂದು ರೈತ ಮುಖಂಡರು ಸ್ವಾಮೀಜಿಯಲ್ಲಿ ಮನವಿ ಮಾಡಿದರು.

‘ಸ್ವಾಮೀಜಿ ನೇತೃತ್ವದಲ್ಲಿ ಜಾರಿಗೊಂಡ ಹಲವು ಏತ ನೀರಾವರಿ ಯೋಜನೆಗಳು ಯಶಸ್ವಿಯಾಗಿವೆ. ನೂರಾರು ಕೆರೆಗಳು ಭರ್ತಿಯಾಗಿವೆ. ಭದ್ರಾ ಮೇಲ್ಡಂಡೆ ಯೋಜನೆಗೆ ಶ್ರೀಗಳ ನೇತೃತ್ವ ಸಿಕ್ಕರೆ ಈ ಯೋಜನೆ ಬೇಗನೆ ಸಾಕಾರಗೊಳ್ಳುತ್ತದೆ’ ಎಂದು ಕೋರಿದರು. 

ಇದಕ್ಕೆ ಉತ್ತರಿಸಿದ ಶ್ರೀಗಳು ‘ಯೋಜನೆಯ ಜಾರಿಗೆ ಅಧಿಕಾರಿ ವ್ಯವಸ್ಥೆಯಲ್ಲಿ ಹಲವು ತೊಡರುಗಳು ಇರುತ್ತವೆ. ಅದು ಹಣಕಾಸು, ತಾಂತ್ರಿಕತೆ ಇಲ್ಲವೆ ರೈತರ ಅಡ್ಡಿಯದೂ ಆಗಿರಬಹುದು. ಅವುಗಳನ್ನು ಬಗೆಹರಿಸಿಕೊಂಡು ಮುನ್ನಡೆಯಬೇಕು. ಯೋಜನೆ ಸಫಲವಾಗಲು ಹಂತಹಂತವಾಗಿ ಸರ್ಕಾರದಿಂದ ನೆರವು ಪಡೆದುಕೊಳ್ಳಬೇಕು. ಯೋಜನೆ ಪೂರ್ಣಗೊಳ್ಳಲು 3 ವರ್ಷಗಳು ಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಯೋಜನೆ ಯಶಸ್ಸಿನ ದೃಷ್ಟಿಯಿಂದ ರೈತರ ಬೆಂಬಲಕ್ಕೆ ಇರುತ್ತೇವೆ’ ಎಂದು ಹೇಳಿದರು.

‘ನಮ್ಮ ರೈತರು ಧರಣಿ, ಸತ್ಯಾಗ್ರಹ ಮತ್ತು ಚಳವಳಿಗಳಿಂದ ಕೆಲಸ ಆಗುತ್ತದೆ ಎಂದು ಭಾವಿಸಿದ್ದಾರೆ. ಆ ಚಳವಳಿಗಳನ್ನು ಬಿಟ್ಟು ಸರ್ಕಾರದ ಮನವೊಲಿಸಿ ಕೆಲಸ ಮಾಡಿಕೊಳ್ಳುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು’ ಎಂದರು.

‘ಈ ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಯ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ. 367 ಕೆರೆಗಳು ತುಂಬಲಿವೆ. ಇದಕ್ಕಾಗಿ 17.40 ಟಿಎಂಸಿ ಅಡಿ ನೀರು ಬಳಸಿಕೊಳ್ಳಲಾಗುವುದು. ಯೋಜನೆಗೆ ಅಗತ್ಯವಾದ ಭೂಮಿ, ವಿದ್ಯುತ್‌ ಎಲ್ಲವೂ ಲಭ್ಯವಾಗಿವೆ. ಈ ಕೂಡಲೇ ₹ 300 ಕೋಟಿ ಅನುದಾನ ಬಿಡುಗಡೆಯಾದರೆ ಕನಿಷ್ಠ 90 ಕೆರೆ ತುಂಬಿಸಬಹುದು’ ಎಂದು ಯೋಜನೆಯ ಮುಖ್ಯ ಎಂಜಿನಿಯರ್‌ ಎಫ್.ಎಚ್.‌ಲಮಾಣಿ ತಿಳಿಸಿದರು.

‘ತರಳಬಾಳು ಮಠದ ಶ್ರೀಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಗೌರವ ಇದೆ. ಅವರ ಸಾಮಾಜಿಕ ನೆರವಿನ ಕೆಲಸಗಳು ಸರ್ಕಾರದ ಗಮನದಲ್ಲಿವೆ. ಭದ್ರಾವತಿಯ ಉಕ್ಕು ಕಾರ್ಖಾನೆ ಮರು ಆರಂಭಿಸಲು ಮಠದಿಂದ ₹ 5 ಕೋಟಿ ನೆರವು ಘೋಷಣೆ ಮಾಡಿದ್ದು ಮಠದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.‌ಆರ್.‌ ಬಸವರಾಜಪ್ಪ ಹೇಳಿದರು. 

ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್‌, ವಿಧಾನ ಪರಿಷತ್‌ ಸದಸ್ಯ ಕೆ.ಎಸ್.‌ನವೀನ್‌ ಇದ್ದರು.

ಸಂಸದರು ಹಣ ತರುವ ಜವಾಬ್ದಾರಿ ಹೊರಲಿ

‘ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ₹ 5300 ಕೋಟಿ ಅನುದಾನ ಬಿಡುಗಡೆ ಮಾಡಿಸುವ ಹೊಣೆಯನ್ನು ಸಂಸದ ಗೋವಿಂದ ಕಾರಜೋಳ ಹೊರಬೇಕು’ ಎಂದು ಸ್ವಾಮೀಜಿ ತಿಳಿಸಿದರು.  ಇದಕ್ಕೆ ಕಾರಜೋಳ ‍ಪ್ರತಿಕ್ರಿಯಿಸಿ ‘ಭದ್ರಾ ಮೇಲ್ಡಂಡೆ ಯೋಜನೆ 2008ರಲ್ಲಿ ಬಿ.ಎಸ್.‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನುಮೋದನೆ ಪಡೆಯಿತು. ಅವರು ಮುಖ್ಯಮಂತ್ರಿಯಾದಾಗ ಒಮ್ಮೆ ₹ 1700 ಕೋಟಿ ಮತ್ತೊಮ್ಮೆ ₹ 1500 ಕೋಟಿ  ಅನುದಾನ ಬಿಡುಗಡೆ ಮಾಡಿದರು. ನಂತರ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ 2600 ಕೋಟಿ ಬಿಡುಗಡೆ ಮಾಡಿದರು. ₹ 11 ಸಾವಿರ ಕೋಟಿ ವೆಚ್ಚದ ಯೋಜನೆಗೆ ಬಿಜೆಪಿ ಸರ್ಕಾರವೇ ₹ 5700 ಕೋಟಿ ನೀಡಿದೆ’ ಎಂದು ಹೇಳಿದರು.  ‘ಯೋಜನೆಯ ಜಾರಿಗೆ ಒತ್ತಾಯಿಸಿ ಹಲವು ಬಾರಿ ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ್ದೇನೆ. ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಜನರ ನೀರಿನ ಸಂಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಈ ಯೋಜನೆಗೆ ನೆರವಾಗುವ ಭರವಸೆ ಇದೆ. ಇಂತಹ ದೊಡ್ಡ ಯೋಜನೆಗಳ ಜಾರಿಗೆ ಸಂಸದರ ಮನೆ ಮುಂದೆ ಧರಣಿ ಕುಳಿತರೆ ಪರಿಹಾರ ಸಿಗುತ್ತದೆಯೇ’ ಎಂದು ಪ್ರಶ್ನಿಸಿದರು.

ಮಹಿಳೆಯರು ಗ್ಯಾರಂಟಿ ಹಣ ಕೊಡ್ತಾರಾ?

‘ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯ ಮಹಿಳೆಯರಿಗೆ ಸಾರ್ವಜನಿಕರಿಗೆ ಎಷ್ಟು ಹಣ ಬಿಡುಗಡೆಯಾಗುತ್ತದೆ’ ಎಂದು ಸ್ವಾಮೀಜಿ ಕೇಳಿದರು. ಇದಕ್ಕೆ ಉತ್ತರಿಸಿದ ರೈತ ಮುಖಂಡರು ‘₹ 4000 ಕೋಟಿ ಬರುತ್ತದೆ’ ಎಂದರು. ‘ಮಹಿಳೆಯರು 1 ವರ್ಷ ಗ್ಯಾರಂಟಿ ಯೋಜನೆಯ ಹಣ ಬಿಟ್ಟುಕೊಟ್ಟರೆ ಭದ್ರಾ ಮೇಲ್ದಂಡೆ ಯೋಜನೆಗೆ ಸಹಾಯವಾಗುತ್ತದೆ’ ಎಂದು ಸ್ವಾಮೀಜಿ ಹೇಳಿದರು. ‘ಮಹಿಳೆಯರು ಗ್ಯಾರಂಟಿ ಹಣವನ್ನು ಕೊಡುವುದಿಲ್ಲ’ ಎಂದು ರೈತರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.