ಹೊಳಲ್ಕೆರೆ: ‘ಮೂರು ತಿಂಗಳ ಒಳಗೆ ತಾಲ್ಲೂಕಿನ ಕೆರೆಗಳಿಗೆ ಭದ್ರಾ ನೀರು ಹರಿಯಲಿದೆ’ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಭಾನುವಾರ ತಾಲ್ಲೂಕಿನ ನೂರಾರು ರೈತರು, ರೈತ ಸಂಘದ ಪ್ರತಿನಿಧಿಗಳೊಂದಿಗೆ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಅಬ್ಬಿನ ಹೊಳಲು ಗ್ರಾಮದ ಸಮೀಪ ಕಾಮಗಾರಿ ಸ್ಥಗಿತಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಇಲ್ಲಿನ ಸುಮಾರು 36 ರೈತರು ಪರಿಹಾರ ಹೆಚ್ಚಿಸಲು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇದೇ ಪ್ರದೇಶದಲ್ಲಿ ಕೆಲವು ರೈತರಿಗೆ ಒಂದು ಎಕರೆಗೆ ₹ 45 ಲಕ್ಷದವರೆಗೆ ಪರಿಹಾರ ನೀಡಲಾಗಿದ್ದು, ಕೆಲವರಿಗೆ ಎಕರೆಗೆ ಕೇವಲ ₹ 4 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇದರಿಂದ ರೈತರಿಗೆ ಅನ್ಯಾಯ ಆಗಿದ್ದು 120 ಮೀಟರ್ ನಾಲೆ ತೆಗೆಯುವುದನ್ನು ನಿಲ್ಲಿಸಿದ್ದೇವೆ. ಸೂಕ್ತ ಪರಿಹಾರ ಕೊಡಿಸಿದ ಕೂಡಲೇ ನಾಲೆ ತೆಗೆಯಲು ಅವಕಾಶ ನೀಡುತ್ತೇವೆ’ ಎಂದು ಅಲ್ಲಿನ ರೈತರು ಶಾಸಕ ಎಂ.ಚಂದ್ರಪ್ಪ ಅವರಿಗೆ ತಿಳಿಸಿದರು.
ಭರವಸೆ: ‘ನಾನು ರೈತರ ಪರವಾಗಿದ್ದೇನೆ. ಯಾವ ರೈತರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಇಲ್ಲಿ ನಿಗದಿಯಾಗಿರುವ ಎಸ್‌ಆರ್ ದರ ತೀರಾ ಹಳೆಯದಾಗಿದ್ದು, ಇದನ್ನು ಪರಿಷ್ಕರಿಸಿ ರೈತರಿಗೆ ಹೆಚ್ಚು ಪರಿಹಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಹೆಚ್ಚು ಪರಿಹಾರ ನೀಡುವಂತೆ ಮನವರಿಕೆ ಮಾಡಲಾಗುವುದು’ ಎಂದು ಅಲ್ಲಿನ ರೈತರಿಗೆ ಭರವಸೆ ನೀಡಿದರು.
ನೂರಾರು ರೈತರೊಂದಿಗೆ ಭದ್ರಾ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿ ಮಾತನಾಡಿದ ಚಂದ್ರಪ್ಪ, ‘ಹೊಳಲ್ಕೆರೆ ತಾಲ್ಲೂಕಿನ 37 ಕೆರೆಗಳಿಗೆ ಭದ್ರಾ ನೀರು ಹರಿಯಲಿದೆ. ಚಿತ್ರದುರ್ಗ ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗಿ ನೀರಾವರಿಯಿಂದ ವಂಚಿತವಾಗಿದೆ. ತುಂಗಾ ಹಾಗೂ ಭದ್ರಾ ಜಲಾಶಯಗಳು ತುಂಬಿ ಹರಿಯುತ್ತಿದ್ದು, ನೀರು ಸಮುದ್ರ ಸೇರುತ್ತಿದೆ. ಕಾಮಗಾರಿ ಪೂರ್ಣಗೊಂಡರೆ ನೀರು ಸದ್ಬಳಕೆ ಆಗಲಿದೆ’ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ನಾರದಮುನಿ ವಸಂತಕುಮಾರ್, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಮಂಜುನಾಥ್, ಚಿತ್ರಹಳ್ಳಿ ಲವಕುಮಾರ್, ಪುರಸಭೆ ಸದಸ್ಯ ಅಶೋಕ್, ಗುಂಡೇರಿ ಮಂಜುನಾಥ್, ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ್, ಅಜ್ಜಪ್ಪ, ಯತೀಶ್, ಹರೀಶ್, ಯಶವಂತ್ ಕುಮಾರ್, ಮಾರುತೇಶ್, ಶ್ರೀನಿವಾಸ್, ಮಹೇಶಣ್ಣ, ಕುಮಾರಣ್ಣ, ರೂಪಾ ಸುರೇಶ್, ಅಜ್ಜಯ್ಯ, ನಾಗರಾಜ್ ಬೇದ್ರೆ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ, ಅಧೀಕ್ಷಕ ಎಂಜಿನಿಯರ್ ಕವಿತಾ, ಬಾರಿಕರ್ ಚಂದ್ರಪ್ಪ, ನಾಗರಾಜ್, ಎಇಇ ಸಿದ್ದೇಶ್ ಹಾಜರಿದ್ದರು
ಅಬ್ಬಿನ ಹೊಳಲು ಸಮೀಪ 120 ಮೀಟರ್ ಕಾಮಗಾರಿ ಬಿಟ್ಟರೆ ಉಳಿದ ಎಲ್ಲಾ ಕಡೆ ಕಾಮಗಾರಿ ಮುಗಿದಿದೆ. ವಿಧಾನಸಭಾ ಅಧಿವೇಶನದಲ್ಲಿ ಕಾಮಗಾರಿ ಚುರುಕುಗೊಳಿಸಲು ಚರ್ಚಿಸಲಾಗುವುದು.ಎಂ.ಚಂದ್ರಪ್ಪ ಶಾಸಕ
ನೇರೆತ್ತುವ ಘಟಕಕ್ಕೆ ಭೇಟಿ:
ತರಿಕೆರೆ ಶಾಸಕ ಶ್ರೀನಿವಾಸ್ ಅವರೊಂದಿಗೆ ಬೆಟ್ಟದ ತಾವರೆಕೆರೆಯಲ್ಲಿರುವ ನೀರು ಮೇಲೆತ್ತುವ ಘಟಕಕ್ಕೆ ಭೇಟಿ ನೀಡಿದ ಚಂದ್ರಪ್ಪ ಯೋಜನೆಯ ಸ್ಥಿತಿಗತಿ ಕುರಿತು ಚರ್ಚಿಸಿದರು. ‘ನಾನೂ ಕೂಡ ರೈತರಿಗೆ ಹೆಚ್ಚು ಪರಿಹಾರ ಕೊಡಿಸುವ ಭರವಸೆ ನೀಡಿದ್ದು ಅವರ ಮನವೊಲಿಸಿದ್ದೇನೆ. ರೈತರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದರಿಂದ ಕಾಮಗಾರಿ ವಿಳಂಬ ಆಗುತ್ತಿದೆ. ಆ. 14ರಂದು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ’ ಎಂದು ತರಿಕೆರೆ ಶಾಸಕ ಶ್ರೀನಿವಾಸ್ ತಿಳಿಸಿದರು. ‘ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿ ಇದೆ. ತ್ವರಿತ ವಿಚಾರಣೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲು ನೆರವಾಗಬೇಕು. ನೀವು ಸಹಕಾರ ನೀಡಿದರೆ ಬೇಗನೆ ಕಾಮಕಾರಿ ಮುಗಿಯುತ್ತದೆ’ ಎಂದು ಶಾಸಕ ಎಂ.ಚಂದ್ರಪ್ಪ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.