ಸಿರಿಗೆರೆ: ‘ಶಾಸಕರು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರೆ ಮತದಾರರ ಒಲವು ಗಳಿಸಬಹುದು’ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಭರಮಸಾಗರ ಸಮೀಪದ ಕೊಳಹಾಳ್ ಗ್ರಾಮದಲ್ಲಿ ₹5 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಮತದಾರರಿಗೆ ನ್ಯಾಯ ಒದಗಿಸುವ ಬದ್ಧತೆ ಇರಬೇಕು. ಯಾವುದೇ ಪಕ್ಷದ ಸರ್ಕಾರವಿದ್ದರೂ ಅಧಿಕಾರಸ್ಥರ ಮನವೊಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಶಕ್ತಿ ಇರಬೇಕು. ಅಂತಹ ಕೆಲಸವನ್ನು ಕಳೆದ 30 ವರ್ಷಗಳಿಂದ ಮಾಡಿ ಮತದಾರರ ಮನಸ್ಸು ಗೆದ್ದಿದ್ದೇನೆ’ ಎಂದು ಚಂದ್ರಪ್ಪ ಹೇಳಿದರು.
‘ಇದು ಬೃಹತ್ ಪ್ರಮಾಣದ ಚೆಕ್ ಡ್ಯಾಂ. ಇದರಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ. ಗ್ರಾಮದಲ್ಲಿನ ಚಿಕ್ಕ ಕೆರೆಯ ಮೂಲಕ ದೊಡ್ಡ ಕೆರೆಗೆ ನೀರು ಹರಿಸುವ ಯೋಜನೆಗೆ ಅನುದಾನ ನೀಡಲಾಗುವುದು. ಇದರಿಂದ ಗ್ರಾಮದ ರೈತರಿಗೆ ನೆರವಾಗುತ್ತದೆ’ ಎಂದರು.
ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷ ಶೈಲೇಶ್, ಕೊಳಹಾಳ್ ರಾಜಣ್ಣ, ಚಿಕ್ಕಬೆನ್ನೂರು ರಾಜಣ್ಣ, ಪಿಡಿಒ ತಿಪ್ಪೇಸ್ವಾಮಿ, ಎಚ್.ಎಂ. ಬಸವರಾಜಪ್ಪ, ಕೆ.ಆರ್. ಹನುಮಂತಪ್ಪ, ಬಸವನಗೌಡ, ಜಿ.ಕೆ. ಬಸವನಗೌಡ, ಬಸವರಾಜಣ್ಣ , ಓಬಣ್ಣ, ಪ್ರಕಾಶ್, ನಾಗೇಂದ್ರಣ್ಣ, ಈಶಣ್ಣ, ನೀರಾವರಿ ಇಲಾಖೆ ಅಧಿಕಾರಿ ಮನೋಜ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.