ಚಿತ್ರದುರ್ಗ: ನಗರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಚಿಕನ್ ಅಂಗಡಿಗಳಲ್ಲಿ ಅನೈರ್ಮಲ್ಯ ಇರುವ ಬಗ್ಗೆ ಬಹಳಷ್ಟು ದೂರುಗಳಿವೆ. ಆಯಾ ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಎಂಜಿನಿಯರ್‌ಗಳು ಚಿಕನ್ ಸ್ಟಾಲ್‍ಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಾಣಿಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಹಕ್ಕಿಜ್ವರದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೂ ಹಕ್ಕಿ ಜ್ವರ ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಚಿಕನ್ ಸ್ಟಾಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ತಿಳಿವಳಿಕೆ ನೀಡಬೇಕು. ಸ್ವಚ್ಛತೆ ಪಾಲಿಸದ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.
‘ಹಕ್ಕಿಜ್ವರ ತಡೆಗಾಗಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ. ಈಗಾಗಲೇ ರ‍್ಯಾಪಿಡ್ ರೆಸ್ಪಾನ್ಸ್ ತಂಡ ರಚಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇರುವುದು ಖಚಿತಪಟ್ಟಿದ್ದು, ಜಿಲ್ಲೆಗೆ ವಿವಿಧ ಜಿಲ್ಲೆ, ಹೊರರಾಜ್ಯಗಳಿಂದಲೂ ಕೋಳಿ ಸಾಗಾಣಿಕೆ ಇದೆ. ಹೀಗಾಗಿ ಗಡಿ ಪ್ರದೇಶದಲ್ಲಿ ಈಗಾಗಲೇ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದ್ದು, ನಿಗಾ ವಹಿಸಬೇಕು’ ಎಂದರು.
‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಾಗೂ ಉದ್ಯಮಿದಾರರಿಗೆ ಆರೋಗ್ಯ ನಿರೀಕ್ಷಕರು ಶಿಕ್ಷಣ ಸಂವಹನ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಯಾವುದೇ ಗೊಂದಲಗಳಿಗೆ ಕಾರಣವಾಗದಂತೆ ಕರ್ತವ್ಯ ನಿರ್ವಹಣೆ ಮಾಡಬೇಕು’ ಎಂದು ಸೂಚಿಸಿದರು.
‘ಹಕ್ಕಿಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಎವಿಯನ್ ಇನ್ ಪ್ಲೂ-ಎಂಜಾ ವೈರಾಣುವಿನಿಂದ ಬರುತ್ತದೆ. ನಾಟಿಕೋಳಿ, ಫಾರಂ ಕೋಳಿ, ಟರ್ಕಿ ಕೋಳಿ, ಕೌಜುಗನ ಹಕ್ಕಿ, ನವಿಲು ಹಕ್ಕಿ, ಬಾತುಕೋಳಿ, ಹಂಸ ಪಕ್ಷಿ ಇತ್ಯಾದಿ ಎಲ್ಲಾ ಹಕ್ಕಿ ಪ್ರಬೇಧಗಳಲ್ಲಿ ಕಂಡುಬರುತ್ತದೆ’ ಎಂದು ಪಶುವೈದ್ಯಕಿಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕುಮಾರ್ ತಿಳಿಸಿದರು.
‘ಕೋಳಿ, ಪಕ್ಷಿಗಳಲ್ಲಿ ಹಠಾತ್ ಸಾವು, ಸತ್ತ ಕೋಳಿಗಳ ಮೂಗು, ಬಾಯಿ ಮತ್ತು ಕಣ್ಣಿನಿಂದ ನೀರು ಸುರಿಯುವುದು, ಕೋಳಿಗಳ ಮೊಣಕಾಲು ಮತ್ತು ಪಾದಗಳು ನೀಲಿ ಬಣ್ಣಕ್ಕೆ ತಿರುವುದು ಇದರ ರೋಗ ಲಕ್ಷಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಅಸಹಜ ಸಾವನ್ನಪ್ಪಿದರೆ ಸಂಬಂಧಿಸಿದ ಕೋಳಿ ಸಾಕಾಣಿಕೆದಾರರು, ರೈತರು, ತಕ್ಷಣವೇ ಪಶುವೈದ್ಯರ ಗಮನಕ್ಕೆ ತರಬೇಕು’ ಎಂದರು.
‘ರೋಗನಿಯಂತ್ರಣ ಹಾಗೂ ಆರೋಗ್ಯ ರಕ್ಷಣೆ ಹಿತದೃಷ್ಟಿಯಿಂದ ಕೋಳಿಫಾರಂಗಳಿಗೆ ಅನುಮತಿ ಇಲ್ಲದೇ ಪ್ರವೇಶಿಸಬಾರದು. ಕೆರೆ, ಕಟ್ಟೆ, ನೀರಿನ ತೊರೆ, ನದಿ ಮತ್ತು ಇತರೆ ನೀರಿನ ಜಾಗಕ್ಕೆ ವಲಸೆ ಬರುವ, ಅಲ್ಲಿಯೇ ವಾಸಿಸುವ ಹಕ್ಕಿ, ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯಕೀಯ ಸಿಬ್ಬಂದಿ ಗಮನಕ್ಕೆ ತರಬೇಕು. ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಮುಟ್ಟಿದ್ದಲ್ಲಿ ಸೋಪಿನಿಂದ ಕೈ ತೊಳೆದು ಸ್ವಚ್ಛತೆ ಕಾಯ್ದುಕೊಳ್ಳಬೇಕು’ ಎಂದರು.
‘ಕೋಳಿ ಫಾರಂ ಮಾಲೀಕರು ತಮ್ಮ ಫಾರಂ ಪ್ರದೇಶವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ನಿಯಮಿತವಾಗಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಒಡೆದುಹೋದ ಕೋಳಿ ಮೊಟ್ಟೆ ಹಾಗೂ ಸತ್ತ ಕೋಳಿಯನ್ನು ಸುಡಬೇಕು. ಫಾರಂ ಮೇಲಿನ ಕೋಳಿ, ಕೋಳಿ ಆಹಾರ, ಕುಡಿಯುವ ನೀರಿನ ಸಂಪರ್ಕಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.
‘ಹಕ್ಕಿಜ್ವರದ ಕಾರಣದಿಂದ ಸೋಂಕಿಗೆ ಒಳಗಾಗುವ ಮನುಷ್ಯರಲ್ಲಿ ನೆಗಡಿ, ಜ್ವರ, ಕೆಮ್ಮು ಹಾಗೂ ಭೇದಿ ಉಂಟಾಗುವ ರೋಗ ಲಕ್ಷಣಗಳು ಕಂಡುಬರುತ್ತವೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ರೋಗವಲ್ಲ. ಈ ಕುರಿತು ಈಗಾಗಲೇ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಕೈಗೊಂಡಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿಮಠ ಹೇಳಿದರು.
ಕೋಳಿ ಶೀತ ಜ್ವರ, ಹಕ್ಕಿಜ್ವರದ ಮುಂಜಾಗ್ರತಾ ಕ್ರಮಗಳ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳೇಸಿಂಘೆ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಇದ್ದರು.
ಒಡೆದ ಮೊಟ್ಟೆ, ಸತ್ತ ಕೋಳಿಯನ್ನು ಸುಡಬೇಕು ಕೋಳಿಜ್ವರ ಸಾಂಕ್ರಾಮಿಕ ರೋಗ; ಎಚ್ಚರ ಅವಶ್ಯ ಮನುಷ್ಯರಲ್ಲಿ ಒಬ್ಬರಿಂದ ಒಬ್ಬರಿಗೆ ರೋಗ ಹರಡದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.