ADVERTISEMENT

ಚಿತ್ರದುರ್ಗ: ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಕೋರಿಕೆ

ಮುಖ್ಯಮಂತ್ರಿ ಭೇಟಿಯಾದ ಶ್ರೀರಾಮುಲು ನೇತೃತ್ವದ ಬಿಜೆಪಿ ನಿಯೋಗ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 16:17 IST
Last Updated 17 ಫೆಬ್ರುವರಿ 2021, 16:17 IST
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ಬಿಜೆಪಿ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಮನವಿ ಮಾಡಿತು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ಬಿಜೆಪಿ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಮನವಿ ಮಾಡಿತು.   

ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದ ಬಿಜೆಪಿ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬುಧವಾರ ಕೋರಿಕೆ ಸಲ್ಲಿಸಿತು.

ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಯವರ ಕಾವೇರಿ ನಿವಾಸಕ್ಕೆ ತೆರಳಿದ ನಿಯೋಗ ಕೆಲಹೊತ್ತು ಚರ್ಚೆ ನಡೆಸಿತು.

ಸರ್ಕಾರಿ ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ₹ 50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ದೀಪಾವಳಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಸ್ಥಳಪರಿಶೀಲನೆ ನಡೆಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಈಚೆಗೆ ನಡೆದ ಅಧಿವೇಶನದಲ್ಲಿ ಕಾಲೇಜು ಆರಂಭಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದಿದ್ದರು. ಇದಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ADVERTISEMENT

‘2020–21ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ಮುಖ್ಯಮಂತ್ರಿ ಕಚೇರಿ ಹಿಂಬರಹ ನೀಡಿದೆ.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಕೆ.ಪೂರ್ಣಿಮಾ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ರಾಜ್ಯ ಖನಿಜ ನಿಗಮ ಅಧ್ಯಕ್ಷ ಲಿಂಗಮೂರ್ತಿ, ಕರ್ನಾಟಕ ಬುಡಕಟ್ಟು ಆಯೋಗದ ರಾಜ್ಯ ಸದಸ್ಯ ಜಯಪಾಲಯ್ಯ ಅವರು ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.