ADVERTISEMENT

15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು, ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 5:38 IST
Last Updated 29 ನವೆಂಬರ್ 2021, 5:38 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಚಿತ್ರದುರ್ಗ: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಈಗಲೂ ಶಕ್ತಿಯುತವಾಗಿಯೇ ಇದೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಚುನಾಯಿತರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಸ್ಥಾನ ಲಭಿಸಲಿದೆ’ ಎಂದರು.

‘ಇಡೀ ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಆ ಪಕ್ಷವೀಗ ಮುಳುಗುತ್ತಿರುವ ಹಡಗು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಎಲ್ಲಿರುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಅದನ್ನು ಹೇಳುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

‘ಕೋವಿಡ್ ಮೂರನೇ ಅಲೆ ಇಡೀ ವಿಶ್ವದಲ್ಲಿ ಪುನಃ ಆತಂಕ ಸೃಷ್ಟಿಸಲು ಮುಂದಾಗಿದೆ. ಆರ್ಥಿಕ ಸಂಕಷ್ಟದಿಂದ ರಾಜ್ಯ ಹೊರ ಬರುತ್ತಿರುವ ವೇಳೆ ಮತ್ತೆ ರೂಪಾಂತರಿ ಹೊಸ ತಳಿ ಕೆಲ ದೇಶಗಳಲ್ಲಿ ಅಬ್ಬರಿಸುತ್ತಿದೆ. ಇಲ್ಲಿ ಎಲ್ಲಾ ರೀತಿಯ ಎಚ್ಚರಿಕೆ ಕೈಗೊಳ್ಳಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಯಾರಿಗೂ ತೊಂದರೆ ಉಂಟಾಗಬಾರದು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ’ ಎಂದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನೂ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷದ ಬಲವರ್ಧನೆಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.