ಚಳ್ಳಕೆರೆ: ಧಾರ್ಮಿಕ ಕೇಂದ್ರವಾಗಿರುವ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಶನಿವಾರ ನಗರದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಂತರ ತಾಲ್ಲುಕು ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘ಕಿಡಿಗೇಡಿಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಲಕ್ಷಾಂತರ ಭಕ್ತರನ್ನು ಹೊಂದಿರುವ ಧರ್ಮಸ್ಥಳ ಮತ್ತು ಮಂಜುನಾಥಸ್ವಾಮಿ ಸೇವಾ ಕೇಂದ್ರಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಜನಸಮುದಾಯಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತ ಬರುತ್ತಿವೆ. ಇದನ್ನು ಸಹಿಸಿಕೊಳ್ಳದ ಕಿಡಿಗೇಡಿಗಳು ಅಪಪ್ರಚಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವವರನ್ನು ಪತ್ತೆಹಚ್ಚಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನೇತೃತ್ವವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಹಿಂದೂಗಳ ಭಕ್ತಿ–ಭಾವನೆಗೆ ಧಕ್ಕೆ ತರುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತ ಬರುತ್ತಿದೆ ಎಂದು ತಾಲ್ಲೂಕು ಮಂಡಲದ ಅಧ್ಯಕ್ಷ ಬಿ.ಎಂ. ಸುರೇಶ್ ದೂರಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ, ಕಾಲುವೆಹಳ್ಳಿ ಜಯಪಾಲಯ್ಯ, ತಾಲ್ಲೂಕು ಮಂಡಲದ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ ಮಾತನಾಡಿದರು.
ಮನವಿಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.
ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಯಾದವ್, ದೇವರಾಜ ರೆಡ್ಡಿ, ದಿನೇಶ್ ರೆಡ್ಡಿ, ತಾಲ್ಲೂಕು ಯುವ ಮಂಡಲದ ಕಾರ್ಯದರ್ಶಿ ಮೀರಾಸಾಬಿಹಳ್ಳಿ ಸುರೇಶ್, ಮುಖಂಡ ಓಬಳೇಶ್, ಈಶ್ವರನಾಯಕ, ಜಿ.ಕೆ. ತಿಪ್ಪೇಸ್ವಾಮಿ, ಜಿ.ಕೆ. ವೀರಣ್ಣ, ವೀರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.