ADVERTISEMENT

ಹೊಸದುರ್ಗ ಪುರಸಭೆ: ಪ್ರಥಮ ಬಾರಿಗೆ ಗದ್ದುಗೆ ಏರಿದ ಬಿಜೆಪಿ

ಹೊಸದುರ್ಗ ಪುರಸಭೆಗೆ ಅಧ್ಯಕ್ಷರಾಗಿ ಶ್ರೀನಿವಾಸ್‌, ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 4:37 IST
Last Updated 10 ನವೆಂಬರ್ 2020, 4:37 IST
ಹೊಸದುರ್ಗ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಶ್ರೀನಿವಾಸ್‌, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ ಅವರನ್ನು ಸನ್ಮಾನಿಸಲಾಯಿತು. ಚುನಾವಣೆ ಅಧಿಕಾರಿ ವೈ.ತಿಪ್ಪೇಸ್ವಾಮಿ, ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌ ಇದ್ದರು.
ಹೊಸದುರ್ಗ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಶ್ರೀನಿವಾಸ್‌, ಉಪಾಧ್ಯಕ್ಷೆ ಜ್ಯೋತಿ ಕೆಂಚಪ್ಪ ಅವರನ್ನು ಸನ್ಮಾನಿಸಲಾಯಿತು. ಚುನಾವಣೆ ಅಧಿಕಾರಿ ವೈ.ತಿಪ್ಪೇಸ್ವಾಮಿ, ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌ ಇದ್ದರು.   

ಹೊಸದುರ್ಗ: ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ 11ನೇ ವಾರ್ಡ್‌ ಸದಸ್ಯ ಎಂ.ಶ್ರೀನಿವಾಸ್‌, ಉಪಾಧ್ಯಕ್ಷರಾಗಿ 21ನೇ ವಾರ್ಡ್‌ ಸದಸ್ಯೆ ಜ್ಯೋತಿ ಕೆಂಚಪ್ಪ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್‌ ವೈ.ತಿಪ್ಪೇಸ್ವಾಮಿ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು. ಈ ಮೂಲಕ ಸುಮಾರು 27 ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮುಕ್ತಿ ದೊರಕಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಬಿ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ನಿಗದಿಯಂತೆ ಬೆಳಿಗ್ಗೆ 10ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. 11ರ ಒಳಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಮಧ್ಯಾಹ್ನ 1ರ ನಂತರ ಎರಡೂ ಸ್ಥಾನಕ್ಕೂ ಅವಿರೋಧ ಆಯ್ಕೆ ಘೋಷಣೆಯಾಯಿತು.

ADVERTISEMENT

ಒಟ್ಟು 23 ಸ್ಥಾನಗಳನ್ನು ಹೊಂದಿರುವ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿ 14, ಕಾಂಗ್ರೆಸ್‌ 4 ಹಾಗೂ ಪಕ್ಷೇತರರು 5 ಮಂದಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಪಕ್ಷೇತರರಾಗಿ ಗೆದಿದ್ದ ಐದೂ ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸರಳ ಬಹುಮತಕ್ಕೆ 13 ಮತಗಳ ಅಗತ್ಯವಿತ್ತು. ಶಾಸಕ, ಸಂಸದರ 2 ಮತ ಸೇರಿ ಬಿಜೆಪಿ ಸದಸ್ಯರ ಸಂಖ್ಯಾಬಲ 21ಕ್ಕೆ ಏರಿತ್ತು. ಇದರಿಂದಾಗಿ ಬಿಜೆಪಿ ನಿರಾಂತಕವಾಗಿ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.

ಅಧ್ಯಕ್ಷ ಸ್ಥಾನಕ್ಕೆ ಮೂವರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 4 ಸದಸ್ಯರು ಪೈಪೋಟಿ ನಡೆಸಿದ್ದರು. ಪುರಸಭೆ ಸದಸ್ಯರ ಮನವೊಲಿಸಲು ಶಾಸಕ ಗೂಳಿಹಟ್ಟಿ ಡಿ.ಶೇಖರ್‌, ಬಿಜೆಪಿ ಮಂಡಲದ ಅಧ್ಯಕ್ಷ ಆರ್‌.ಜಗದೀಶ್‌ ಚುನಾವಣೆ ಮುನ್ನ ದಿನವಾದ ಭಾನುವಾರ ಸಭೆ ನಡೆಸಿದ್ದರು. ಇದರಿಂದಾಗಿ ಒಮ್ಮತದ ತೀರ್ಮಾನಕ್ಕೆ ಬರಲು ಯಶಸ್ವಿಯಾದ ಪರಿಣಾಮ ಅವಿರೋಧ ಆಯ್ಕೆ ಸುಲಭವಾಯಿತು. ಇದೇ ಪ್ರಥಮ ಬಾರಿಗೆ ಬಿಜೆಪಿ ಪುರಸಭೆಯ ಗದ್ದುಗೆ ಏರಿದ್ದರಿಂದ ಬಿಜೆಪಿ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ನೂತನ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪುರಸಭೆ ಕಾರ್ಯಾಲಯದಿಂದ ಗಾಂಧಿ ವೃತ್ತದವರೆಗೂ ಬಿಜೆಪಿ ಬಾವುಟ ಹಿಡಿದು ಪಕ್ಷ ಹಾಗೂ ನಾಯಕರ ಪರ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು.

***

ಅಧಿಕಾರ 15 ತಿಂಗಳಿಗೆ ಸೀಮಿತ

ಮೊದಲ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವವರ ಅಧಿಕಾರ ಅವಧಿ 15 ತಿಂಗಳಿಗೆ ಸೀಮಿತ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ನಂತರದ 15 ತಿಂಗಳ ಅವಧಿಗೆ 17ನೇ ವಾರ್ಡ್‌ ಸದಸ್ಯ ಎಂ.ಮಂಜುನಾಥ್‌ ಅವರನ್ನು ಅಧ್ಯಕ್ಷರಾಗಿ ಹಾಗೂ ಪಕ್ಷೇತರರಾಗಿ ಗೆದ್ದು ಪಕ್ಷ ಸೇರಿರುವ ಒಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.