ADVERTISEMENT

ಮತದಾರರ ಮಾಹಿತಿ ಸಂಗ್ರಹ: ಬಿಜೆಪಿಯಿಂದ ಚುನಾವಣಾ ಆಯೋಗ ಭೇಟಿ: ರವಿಕುಮಾರ್

ಮತದಾರರ ಮಾಹಿತಿ ಸಂಗ್ರಹ ಆರೋಪ: ಎನ್‌. ರವಿಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:30 IST
Last Updated 19 ನವೆಂಬರ್ 2022, 6:30 IST
ಎನ್.ರವಿಕುಮಾರ್‌
ಎನ್.ರವಿಕುಮಾರ್‌   

ಚಿತ್ರದುರ್ಗ: ಮತದಾರರ ಮಾಹಿತಿ ಸಂಗ್ರಹ ಹಾಗೂ ಮತದಾನ ಜಾಗೃತಿಗೆ ‘ಚಿಲುಮೆ’ ಸಂಸ್ಥೆಗೆ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅನುಮತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲು ಬಿಜೆಪಿ ನಿಯೋಗ ಚುನಾವಣಾ ಆಯೋಗವನ್ನು ಶನಿವಾರ ಭೇಟಿ ಮಾಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ತಿಳಿಸಿದರು.

‘ಮತದಾರರ ಮಾಹಿತಿ ಸಂಗ್ರಹಕ್ಕೆ 2018ರ ಡಿ.20ರಂದು ‘ಚಿಲುಮೆ’ ಸಂಸ್ಥೆಗೆ ಅವಕಾಶ ಸಿಕ್ಕಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಸರ್ಕಾರದ ಭಾಗವಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದರು.

‘ಮತದಾರರ ಪಟ್ಟಿ ಪರಿಷ್ಕರಣೆಯ ಹೊಣೆ ಚುನಾವಣಾ ಆಯೋಗಕ್ಕಿದೆ. ಈ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿರುವುದು ಅನುಮಾನ ಮೂಡಿಸಿದೆ. ‘ಚಿಲುಮೆ’ಗೆ ನೀಡಿದ್ದ ಅವಕಾಶವನ್ನು 2022ರ ನ.2ರಂದು ರದ್ದು ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ. ಕಾಂಗ್ರೆಸ್‌ ಅವಧಿಯಲ್ಲಿ ಆಗಿರುವ ಲೋಪವನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಚಿಲುಮೆ ಸಂಸ್ಥೆ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಸಿಕ್ಕಿದ್ದರೆ ದೂರು ನೀಡುವ ಅವಕಾಶ ಕಾಂಗ್ರೆಸ್‌ಗೆ ಇದೆ. ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ಸ್ವಾತಂತ್ರ್ಯವೂ ಇದೆ. ಆದರೆ, ವಿನಾ ಕಾರಣ ಇದಕ್ಕೆ ವಿವಾದದ ಸ್ವರೂಪ ನೀಡಲು ಕಾಂಗ್ರೆಸ್‌ ಹವಣಿಸಿದೆ’ ಎಂದು ಕಿಡಿಕಾರಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ₹ 130 ಕೋಟಿ ವೆಚ್ಚ ಮಾಡಿ ಜಾತಿಗಣತಿ ನಡೆಸಿದರು. ಈ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೂ ಮುನ್ನವೇ ಸೋರಿಕೆ ಮಾಡಲಾಗಿದೆ. ಜಾತಿ ಸಮೀಕ್ಷೆಯ ವರದಿಯನ್ನು ಕಾಂಗ್ರೆಸ್‌ ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಸಂಪತ್‌ಕುಮಾರ್‌, ಶಿವಣ್ಣಾಚಾರ್, ನವೀನ್‌ ಚಾಲುಕ್ಯ, ಡಾ.ಸಿದ್ದಾರ್ಥ ಗುಂಡಾರ್ಪಿ, ನಾಗರಾಜ್‌ ಬೇದ್ರೆ ಇದ್ದರು.

‘ನಿರುದ್ಯೋಗಿಗಳ ಕೂಟ ಕಾಂಗ್ರೆಸ್‌’

ಕಾಂಗ್ರೆಸ್‌ ನಿರುದ್ಯೋಗಿಗಳ ಕೂಟವಾಗಿದೆ. ಸರ್ಕಾರದ ಒಳ್ಳೆಯ ಕೆಲಸಗಳು ಈ ಕೂಟಕ್ಕೆ ಕಾಣುವುದೇ ಇಲ್ಲ ಎಂದು ಎನ್‌.ರವಿಕುಮಾರ್‌ ವ್ಯಂಗ್ಯವಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಏರಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗ ನೀಡಿದ ವರದಿಯನ್ನು ಕಾಂಗ್ರೆಸ್‌ ನಿರ್ಲಕ್ಷ್ಯ ಮಾಡಿತ್ತು. ಆಯೋಗದ ಸಭೆಗೆ ಕನಿಷ್ಠ ಸ್ಥಳಾವಕಾಶ ನೀಡುವ ಔದಾರ್ಯವನ್ನು ಕಾಂಗ್ರೆಸ್ ತೋರಿರಲಿಲ್ಲ. ಮೀಸಲಾತಿ ಹೆಚ್ಚಳಕ್ಕೆ ತಾನೇ ಕಾರಣ ಎಂಬಂತೆ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಿಡಿಕಾರಿದರು.

ನ.22, 23ರಂದು ಜಿಲ್ಲೆಗೆ ಮುಖ್ಯಮಂತ್ರಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ.22 ಮತ್ತು 23ರಂದು ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸರ್ಕಾರ ಹಾಗೂ ಪಕ್ಷದ ಹಲವು ಸಮಾರಂಭಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಎನ್.ರವಿಕುಮಾರ್‌ ಮಾಹಿತಿ ನೀಡಿದರು.

ನ.22ರಂದು ಬೆಳಿಗ್ಗೆ 10.30ಕ್ಕೆ ವಿ.ವಿ.ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಣೆ ಮಾಡಲಿದ್ದಾರೆ. ವಾಣಿವಿಲಾಸಪುರ ಸಮೀಪ ಬಿಜೆಪಿ ಆಯೋಜಿಸಿದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಚಳ್ಳಕೆರೆ ತಾಲ್ಲೂಕಿನ ರಾಣಿಕೆರೆಗೆ ಬಾಗೀನ ಅರ್ಪಿಸಲಿದ್ದಾರೆ. ಚಳ್ಳಕೆರೆಯಲ್ಲಿ ಬಿಜೆಪಿ ಹಮ್ಮಿಕೊಂಡ ‘ಜನಸಂಕಲ್ಪ’ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನ.23ರಂದು ಜಿಲ್ಲೆಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಚಿಲುಮೆ’ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ತನಿಖೆಯನ್ನು ಯಾವ ಸಂಸ್ಥೆಗೆ ನೀಡಬೇಕು ಎಂಬುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ.

– ಎನ್‌.ರವಿಕುಮಾರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.