ADVERTISEMENT

ಬಾಂಬ್‌ ಸ್ಫೋಟ, ಅಗ್ನಿ ಅವಘಡದ ಪ್ರಾತ್ಯಕ್ಷಿಕೆ

‌ಪೊಲೀಸ್‌ ಮೈದಾನದಲ್ಲಿ ‘ಆಪರೇಷನ್‌ ಅಭ್ಯಾಸ್‌’ ಅಣಕು ಪ್ರದರ್ಶನ; ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕ್ರಮಗಳ ದರ್ಶನ

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:31 IST
Last Updated 15 ಮೇ 2025, 15:31 IST
ಚಿತ್ರದುರ್ಗದಲ್ಲಿ ಗುರುವಾರ ಬಾಂಬ್‌ ಸ್ಫೋಟದ ಸಂದರ್ಭದಲ್ಲಿ ಗಾಯಾಳುವನ್ನು ಸಂರಕ್ಷಿಸುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನಡೆಯಿತು
ಚಿತ್ರದುರ್ಗದಲ್ಲಿ ಗುರುವಾರ ಬಾಂಬ್‌ ಸ್ಫೋಟದ ಸಂದರ್ಭದಲ್ಲಿ ಗಾಯಾಳುವನ್ನು ಸಂರಕ್ಷಿಸುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನಡೆಯಿತು   

ಚಿತ್ರದುರ್ಗ: ಬಾಂಬ್ ಸ್ಫೋಟಗೊಂಡ ಕೂಡಲೇ ಸಾರ್ವಜನಿಕರು ಓಡಲಾರಂಭಿಸಿದರು, ಗಾಯಾಳುಗಳು ಕೆಳಕ್ಕೆ ಬಿದ್ದು ನರಳಾಡುತ್ತಿದ್ದರು. ಬಾಂಬ್ ಸ್ಫೋಟದ ಶಬ್ದ ಕೇಳಿದ ತಕ್ಷಣ ತುರ್ತು ಸಂದರ್ಭದ ಸೈರನ್‌ ಮೊಳಗಿತು. ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಯಿತು.

ಶ್ವಾನದಳದೊಂದಿಗೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ದೌಡಾಯಿಸಿದರು. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ರೆಡ್‍ಕ್ರಾಸ್ ಸಂಸ್ಥೆಯ ತಂಡದ ಸದಸ್ಯರು ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ವೈದ್ಯಕೀಯ ತಂಡ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ಆರಂಭಿಸಿತು. 

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ರೆಡ್‍ಕ್ರಾಸ್ ಸಹಯೋಗದಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಂರಕ್ಷಣೆ ಮಾಡುವ ಕುರಿತ ‘ಅಪರೇಷನ್ ಅಭ್ಯಾಸ್’ದ ಪ್ರ್ಯಾತ್ಯಕ್ಷಿಕೆಯ ದೃಶ್ಯ ಇದು.

ADVERTISEMENT

ಪೊಲೀಸ್ ಇಲಾಖೆಯ ವಿಧ್ವಂಸಕ ತಡೆ ರಕ್ಷಣಾ ದಳ ಎಎಸ್‍ಸಿ ತಂಡ, ಶ್ವಾನದಳ ತಪಾಸಣೆ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡ, ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ ತಂಡ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಬೆಂಗಾವಲು ವಾಹನಗಳ ನಿಯೋಜನೆ, ಶೂನ್ಯ ಟ್ರಾಫಿಕ್ ತಂಡಗಳು ಯೋಜಿತ ರೀತಿಯಲ್ಲಿ ಸಂರಕ್ಷಣಾ ಚಟುವಟಿಕೆಯನ್ನು ಅಣಕು ಪ್ರದರ್ಶನದ ಮೂಲಕ ಮರುಸೃಷ್ಟಿಗೊಳಿಸಿದವು.

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿ ಸೋಮಶೇಖರ್ ಅವರ ನೇತೃತ್ವದಲ್ಲಿ ಅಗ್ನಿ ಅವಘಡ ಸಂದರ್ಭಗಳಲ್ಲಿ ಸಾವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಪ್ರದರ್ಶನ ನೀಡಲಾಯಿತು. ಬೆಂಕಿ ನಂದಿಸುವ ಬಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೈಗೊಳ್ಳುವ ಕಾರ್ಯಾಚರಣೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು. ಯಾವುದೇ ಅಗ್ನಿ ಅವಘಡ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ 101 ಅಥವಾ 112ಕ್ಕೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ತುರ್ತು ಸೇವೆಗಳು ಇಲಾಖೆಯು ಸ್ಥಳೀಯ ವಿಕೋಪ ಸ್ಪಂದನಾ ತಂಡದ ಸಹಾಯದೊಂದಿಗೆ ತುರ್ತಾಗಿ ಚಿಕಿತ್ಸೆ ನೀಡುವ ಅಣಕು ಪ್ರದರ್ಶನ ನಡೆಯಿತು. ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ತುರ್ತು ವೈದ್ಯಕೀಯ ಸೇವೆ ಸಹಯೋಗದೊಂದಿಗೆ ತುರ್ತು ಕಾರ್ಯನಿರ್ವಹಿಸುವ ಚಟುವಟಿಕೆ ನಡೆಯಿತು. ರೆಡ್‌ಕ್ರಾಸ್ ಸಂಸ್ಥೆಯಿಂದ ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಮಾಸ್ಕ್‌ ವಿತರಿಸಲಾಯಿತು.

‘ಅವಘಡದ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್‌ ಹಾಗೂ ಸಂರಕ್ಷಣೆಯಲ್ಲಿ ನೆರವಾಗುವ ಇತರ ಸಿಬ್ಬಂದಿಯ ಜೊತೆಗೆ ಸಹಕಾರ ನೀಡಬೇಕು. ಸಾರ್ವಜನಿಕರಲ್ಲಿ ಭಯ ಹರಡದಂತೆ ಜಾಗೃತಿ ನೀಡುವುದು ಈ ಕಾರ್ಯಾಚರಣೆಯ ಉದ್ದೇಶ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಹೇಳಿದರು.

ಡಿವೈಎಸ್‍ಪಿ ಪಿ.ಕೆ. ದಿನಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಡಿವೈಎಸ್‍ಪಿ ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಇದ್ದರು.

‘ವಿಪತ್ತು ವೇಳೆ ವಿವೇಚನೆ ಇರಲಿ

‘ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ವಿಕೋಪಗಳಿಂದ ಉಂಟಾಗುವ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಸಾಕಷ್ಟು ಸಿದ್ಧತೆಗಳ ಅವಶ್ಯಕತೆ ಇದೆ. ಕಡಿಮೆ ಸಮಯದಲ್ಲಿ ತುರ್ತಾಗಿ ಸ್ಪಂದನೆ ದೊರಕುವಂತಾಗಲು ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ. ಇಂತಹ ಸಂದರ್ಭದಲ್ಲಿ ಜನರು ಬಹಳ ಜಾಗೃತಿಯಿಂದ ವರ್ತಿಸಬೇಕು’ ಎಂದು ಅಣಕು ಪ್ರದರ್ಶನಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು. ‘ತುರ್ತು ಸಂದರ್ಭಗಳಲ್ಲಿ ಜನರು ಗಾಬರಿಯಾಗದೇ ವಿವೇಚನೆಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಪರೇಷನ್‌ ಅಭ್ಯಾಸ್‌ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.