ADVERTISEMENT

ಬಸ್‌ ಸಂಚಾರ ಬಂದ್‌; ರೈತ ಸಂಘ ಆಕ್ರೋಶ

ಬಿ.ಡಿ.ರಸ್ತೆಯಲ್ಲಿ ಬಾರದ ಕೆಎಸ್‌ಆರ್‌ಟಿಸಿ ಬಸ್‌; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:07 IST
Last Updated 7 ಜನವರಿ 2026, 5:07 IST
ಬಿ.ಡಿ.ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಸ್ಥಗಿತಗಳಿಸಿರುವುದನ್ನು ಖಂಡಿಸಿ ರಾಜ್ಯ ರೈತಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬಿ.ಡಿ.ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಸ್ಥಗಿತಗಳಿಸಿರುವುದನ್ನು ಖಂಡಿಸಿ ರಾಜ್ಯ ರೈತಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ನಗರದ ಬಿ.ಡಿ.ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ ಸಂಚಾರ ನಿಷೇಧಿಸಿರುವ ಕ್ರಮ ಅವೈಜ್ಞಾನಿಕವಾದುದು. ಪೊಲೀಸರು, ಜಿಲ್ಲಾಧಿಕಾರಿ  ಕೂಡಲೇ ಈ ಆದೇಶ ಹಿಂಪಡೆದು ಮೊದಲಿನಂತೆಯೇ ಬಸ್‌ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಚಾರ ದಟ್ಟಣೆ ನಿಯಂತ್ರಣದ ನೆಪದಲ್ಲಿ ಬೆಂಗಳೂರು, ಹಿರಿಯೂರು, ಚಳ್ಳಕೆರೆ ಕಡೆಗೆ ತೆರಳುವ ಬಸ್‌ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬಿ.ಡಿ.ವೃತ್ತ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ, ಜಿಲ್ಲಾ ಆಸ್ಪತ್ರೆ, ಚಳ್ಳಕೆರೆ ಗೇಟ್‌ ಮೂಲಕ ಬಸ್‌ಗಳು ಹಿರಿಯೂರು, ಚಳ್ಳಕೆರೆ, ಬೆಂಗಳೂರು ಮಾರ್ಗಕ್ಕೆ ಚಲಿಸುತ್ತಿದ್ದವು. ಆದರೆ, ಈಗ ಬಸ್‌ಗಳನ್ನು ದಾವಣಗೆರೆ ರಸ್ತೆ, ಹಳೇ ರಾಷ್ಟ್ರೀಯ ಹೆದ್ದಾರಿ ಮೂಲಕ ಮಾರ್ಗ ಬದಲಾವಣೆ ಮಾಡಿರುವುದು ಹಲವರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಗ್ರಾಮೀಣ ಭಾಗದಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ಕಾಲೇಜು ಮುಗಿಸಿ ಆಟೊದಲ್ಲಿ ಬಸ್‌ ನಿಲ್ದಾಣಕ್ಕೆ ತೆರಳಬೇಕಾಗಿದೆ. ಮೊದಲು ಕಾಲೇಜು ಮುಂದೆಯೇ ಬಸ್‌ ಹತ್ತುತ್ತಿದ್ದರು. ವಿವಿಧ ಇಲಾಖೆಗಳಿಗೆ ಬರುವ ಸಿಬ್ಬಂದಿಗೂ ತೊಂದರೆಯಾಗಿದೆ. ನಗರದ ಮಾರುಕಟ್ಟೆಗಳಿಗೆ ಬರುವ ರೈತರು ಕೂಡ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರಿಗೆ ತೊಂದರೆ ನೀಡುತ್ತಿರುವ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಚಳ್ಳಕೆರೆಯಿಂದ ಬಸ್‌ನಲ್ಲಿ ಬರಲು ₹ 30 ದರವಿದೆ. ಚಳ್ಳಕೆರೆ ಗೇಟ್‌ನಿಂದ ಬಸ್‌ ನಿಲ್ದಾಣಕ್ಕೆ ಆಟೊದಲ್ಲಿ ತೆರಳಲು ₹ 50 ತೆರಬೇಕಾಗಿದೆ. ಬಡ ರೈತರು, ವಿದ್ಯಾರ್ಥಿಗಳು ಇಷ್ಟು ಹಣವನ್ನು ಎಲ್ಲಿ ತರಬೇಕು? ಬಿ.ಡಿ.ರಸ್ತೆಯಲ್ಲಿ ಪೊಲೀಸರು ಟ್ರಾಫಿಕ್‌ ನಿಯಂತ್ರಣಕ್ಕೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಕರ್ತವ್ಯ ನಿರ್ವಹಿಸಲು ವಿಫಲರಾಗುತ್ತಿರುವ ಪೊಲೀಸರು ಬಸ್‌ ಸಂಚಾರ ಸ್ಥಗಿತಗೊಳಿಸಿ ಸುಗಮ ಸಂಚಾರದ ಕತೆ ಹೇಳುತ್ತಿದ್ದಾರೆ. ಕೂಡಲೇ ಮೊದಲಿನಂತೆ ಬಸ್‌ ಓಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಕಳೆದೆರಡು ತಿಂಗಳಿಂದಲೂ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಸ್‌ಗಳು ಚಳ್ಳಕೆರೆ ಗೇಟ್‌ಗೆ ಬರದೇ ಮೇಲ್ಸೇತುವೆ ಮೇಲೆಯೇ ಹಿರಿಯೂರು, ಬೆಂಗಳೂರಿಗೆ ತೆರಳುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶಕ್ಕೆ ತೆರಳುವ ಜನರಿಗೆ ಕಷ್ಟವಾಗಿದೆ ಎಂದು ಆರೋಪಿಸಿದರು.

2022ರಲ್ಲೂ ಪೊಲೀಸರು ಇಂಥದ್ದೇ ಕ್ರಮ ಜಾರಿಗೊಳಿಸಿದ್ದರು. ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ಮಾರ್ಗ ಬದಲಾವಣೆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿರುವುದು ಸರಿಯಲ್ಲ. ಹೊಸ ನಿಯಮದಿಂದ ಆಟೊ ಚಾಲಕರು ಬಡ ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಹಿಂದೆ ₹ 10ಕ್ಕೆ ಬರುತ್ತಿದ್ದವರು, ಈಗ ₹ 50 ಕೇಳುತ್ತಿದ್ದಾರೆ ಎಂದು ಹೇಳಿದರು.

ಆದೇಶವನ್ನು ಪುನರ್‌ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಈಗಾಗಲೇ 2 ಬಾರಿ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಕ್ರಮ ಜರುಗಿಸಿಲ್ಲ. ಈಗ ಕ್ರಮ ಕೈಗೊಳ್ಳದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ. ಶಿವಮೊಗ್ಗ ಕಡೆಗೆ ತೆರಳುವ ಬಸ್‌ಗಳು ದಾವಣಗೆರೆ ರಸ್ತೆ ರೈಲ್ವೆ ಕ್ರಾಸಿಂಗ್‌ನಲ್ಲಿ ಸಿಕ್ಕಿಕೊಳ್ಳುತ್ತಿವೆ. ಚಳ್ಳಕೆರೆ, ಹಿರಿಯೂರು ಪಟ್ಟಣಕ್ಕೆ ತೆರಳಲು ಅರ್ಧ ಗಂಟೆ ತಡವಾಗುತ್ತಿದೆ. ಅನಾವಶ್ಯಕವಾಗಿ ತೊಂದರೆ ಸೃಷ್ಟಿಸಲಾಗಿದೆ. ಅಧಿಕಾರಿಗಳೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕೆ.ಸಿ.ಹೊರಕೇರಪ್ಪ, ಶಿವಕುಮಾರ್‌, ತಿಪ್ಪೇಸ್ವಾಮಿ, ನಿತ್ಯಶ್ರೀ, ಆರ್‌.ಚೇತನ್‌, ಎನ್‌.ಮಲ್ಲಿಕಾರ್ಜುನಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.