ADVERTISEMENT

ಚಿತ್ರದುರ್ಗ: ಸಿ.ಸಿ.ರಸ್ತೆ, ದೇಗುಲಕ್ಕೆ ಶಾಸಕರ ನಿಧಿ ಅನುದಾನ ಮೀಸಲು

ಕ್ಷೇತ್ರದಲ್ಲಿ ನಾಲ್ಕು ವರ್ಷಗಳಲ್ಲಿ 66 ಕಾಮಗಾರಿ

ಜಿ.ಬಿ.ನಾಗರಾಜ್
Published 28 ಡಿಸೆಂಬರ್ 2021, 4:57 IST
Last Updated 28 ಡಿಸೆಂಬರ್ 2021, 4:57 IST
ಚಿತ್ರದುರ್ಗ ನಗರದ ಗಾಯತ್ರಿ ವೃತ್ತದ ಸಮೀಪ ಶಾಸಕರ ನಿಧಿಯಲ್ಲಿ ನಿರ್ಮಾಣವಾಗಿರುವ ಸಿ.ಸಿ.ರಸ್ತೆ (ಎಡಚಿತ್ರ). ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರ.
ಚಿತ್ರದುರ್ಗ ನಗರದ ಗಾಯತ್ರಿ ವೃತ್ತದ ಸಮೀಪ ಶಾಸಕರ ನಿಧಿಯಲ್ಲಿ ನಿರ್ಮಾಣವಾಗಿರುವ ಸಿ.ಸಿ.ರಸ್ತೆ (ಎಡಚಿತ್ರ). ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರ.   

ಚಿತ್ರದುರ್ಗ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಶಾಸಕರ ನಿಧಿಯ ಬಹುತೇಕ ಅನುದಾನವನ್ನು ಚಿತ್ರದುರ್ಗ ನಗರ ವ್ಯಾಪ್ತಿಯ ಸಿ.ಸಿ.ರಸ್ತೆ ಹಾಗೂ ಗ್ರಾಮೀಣ ಪ್ರದೇಶದ ದೇಗುಲಗಳಿಗೆ ಮೀಸಲಿಟ್ಟಿದ್ದಾರೆ. ನಾಲ್ಕು ವರ್ಷದಲ್ಲಿ 66 ಕಾಮಗಾರಿಗಳನ್ನು ಈ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಶಾಸಕರು ಚಿತ್ರದುರ್ಗ ಕ್ಷೇತ್ರವನ್ನು ಎರಡೂವರೆ ದಶಕಗಳಿಂದ ಪ್ರತಿನಿಧಿಸುತ್ತಿದ್ದಾರೆ. ರಸ್ತೆ ನಿರ್ಮಾಣ, ಚರಂಡಿ, ಅಂಗನವಾಡಿ ಕಟ್ಟಡ, ಅಂಗವಿಕಲರಿಗೆ ನೆರವು, ಜಿಮ್‌ ಉಪಕರಣಗಳ ಖರೀದಿ, ಸಮುದಾಯ ಹಾಗೂ ಸಾಂಸ್ಕೃತಿಕ ಭವನ ಹೀಗೆ ಹಲವು ಉದ್ದೇಶಗಳಿಗೆ ಅನುದಾನ ವೆಚ್ಚವಾಗಿದೆ. ದೇಗುಲ, ಪ್ರಾರ್ಥನಾ ಮಂದಿರದ 41 ಕಾಮಗಾರಿ ಹಾಗೂ ಸಿ.ಸಿ.ರಸ್ತೆಯ 13 ಕಾಮಗಾರಿಗಳಿಗೆ ಈ ನಿಧಿ ಬಳಕೆಯಾಗಿದೆ. ಅನುದಾನದ ಹೆಚ್ಚು ಮೊತ್ತ ಸಿ.ಸಿ.ರಸ್ತೆ, ಚರಂಡಿಗೆ ವೆಚ್ಚವಾಗಿದೆ.

2018–19ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕರು ಪುನರಾಯ್ಕೆಯಾದರು. ಈ ಅವಧಿಯ ಮೊದಲ ವರ್ಷದ ನಿಧಿಯನ್ನು ಸಿ.ಸಿ.ರಸ್ತೆ ನಿರ್ಮಾಣಕ್ಕೆ ಮಾತ್ರ ಮೀಸಲಿಟ್ಟಿದ್ದಾರೆ. ₹ 1.75 ಕೋಟಿ ವೆಚ್ಚದಲ್ಲಿ ಏಳು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಲ್ಲಿಯೂ ಸಿ.ಸಿ.ರಸ್ತೆಗೆ ಅನುದಾನ ಮೀಸಲಿಡಲಾಗಿದೆ. ₹ 1.69 ಕೋಟಿ ವೆಚ್ಚವಾಗಿದೆ. ₹ 6 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳ್ಳಬೇಕಿದೆ.

ADVERTISEMENT

‘ಬಿ.ಡಿ ರಸ್ತೆಯ ಮೊದಲ ಹಂತದ ವಿಸ್ತರಣೆ ಮತ್ತು ಅಭಿವೃದ್ಧಿಗೆ ₹ 19 ಕೋಟಿ ಅನುದಾನ ಸರ್ಕಾರ ಮಂಜೂರು ಮಾಡಿತ್ತು. ಚಳ್ಳಕೆರೆ ಗೇಟಿನಿಂದ ಮದಕರಿ ನಾಯಕ ವೃತ್ತದವರೆಗಿನ ಸಿ.ಸಿ.ರಸ್ತೆ ನಿರ್ಮಾಣಕ್ಕೆ ಈ ಅನುದಾನ ಮುಕ್ತಾಯವಾಯಿತು. ಕಾಮಗಾರಿ ಪೂರ್ಣಗೊಳಿಸಲು ವಿವೇಚನಾಧಿಕಾರ ಬಳಸಿ ನಿಧಿಯಲ್ಲಿ ಅನುದಾನ ಒದಗಿಸಲಾಗಿದೆ. ನಗರ ವ್ಯಾಪ್ತಿಯ ಹಲವು ಕಾಮಗಾರಿಗಳನ್ನು ಈ ನಿಧಿಯಲ್ಲಿ ಪೂರ್ಣಗೊಳಿಸಲಾಗಿದೆ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದರು.

2019–20ರಲ್ಲಿ ₹ 1.35 ಕೋಟಿ ವೆಚ್ಚದಲ್ಲಿ 16 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ₹ 96 ಲಕ್ಷಕ್ಕೆ ಮಂಜೂರಾತಿ ದೊರೆತಿದ್ದು, ಕೆಲ ಕಾಮಗಾರಿಗಳು ಪೂರ್ಣಗೊಂಡಿವೆ. ಬಾಬೂ ಜಗಜೀವನರಾಮ್‌ ನಗರದ ನಿವಾಸಿಯೊಬ್ಬರ ಶ್ರವಣದೋಷ ನಿವಾರಣಾ ಉಪಕರಣದ ಖರೀದಿಗೂ ನಿಧಿಯಿಂದ ನೆರವು ನೀಡ
ಲಾಗಿದೆ. ಕಳ್ಳಿಹಟ್ಟಿ, ವೆಂಕಟೇಶ್ವರ ಬಡಾವಣೆ, ಎಣ್ಣೆಗೆರೆ, ಕ್ಯಾಸಾಪುರ, ಇಂಗಳದಾಳ್‌ ಲಂಬಾಣಿಹಟ್ಟಿ, ದೊಡ್ಡಸಿದ್ದವ್ವನಹಳ್ಳಿ, ಕಳ್ಳಿರೊಪ್ಪ, ಸಜ್ಜನಕೆರೆ ಹಾಗೂ ಹಿರೇಗುಂಟನೂರು ಗ್ರಾಮದ ದೇಗುಲಗಳಿಗೆ ಅನುದಾನ ಒದಗಿಸಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ 2020–21ರ ಶಾಸಕರ ನಿಧಿ ಬಳಕೆಗೆ ತೊಡಕು ಉಂಟಾಯಿತು. ಮಂಜೂರಾದ ₹ 1 ಕೋಟಿ ಅನುದಾನದಲ್ಲಿ ₹ 81 ಲಕ್ಷವನ್ನು ವೆಚ್ಚ ಮಾಡಲಾಗಿದೆ. ಜೋಗಿಮಟ್ಟಿ ವೃತ್ತದಿಂದ ಜಿಲ್ಲಾ ಆಸ್ಪತ್ರೆಯ ಮುಂಭಾಗದವರೆಗಿನ ಸಿ.ಸಿ.ರಸ್ತೆಗೆ ₹ 52 ಲಕ್ಷ ಹಾಗೂ ಮದಕರಿ ನಾಯಕ ವೃತ್ತದಲ್ಲಿ ಬಾಕಿ ಉಳಿದ ಕಾಮಗಾರಿಗೆ ₹ 20 ಲಕ್ಷ ಅನುದಾನವನ್ನು ನೀಡಲಾಗಿದೆ. ಉಳಿದ ಅನುದಾನ ದೇಗುಲಗಳಿಗೆ ವೆಚ್ಚಾಗಿದೆ. ನಾಲ್ಕು ಕಾಮಗಾರಿಗಳು ಪೂರ್ಣಗೊಂಡಿವೆ.

2021–22ರ ಆರ್ಥಿಕ ವರ್ಷದಲ್ಲಿ ₹ 1.72 ಕೋಟಿ ವೆಚ್ಚದಲ್ಲಿ 35 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಅನುದಾನವನ್ನು ಗ್ರಾಮೀಣ ಪ್ರದೇಶದ ದೇಗುಲಗಳಿಗೆ ಮೀಸಲಿಡಲಾಗಿದೆ. ಕುಂಬಾರ ಗುರುಪೀಠದ ಸಮುದಾಯ ಭವನ, ಮೆದೇಹಳ್ಳಿಯಲ್ಲಿ ಗೋಶಾಲೆ, ದೊಡ್ಡಗರಡಿಗೆ ವ್ಯಾಯಾಮ ಉಪಕರಣಗಳನ್ನು ಈ ನಿಧಿಯಲ್ಲಿ ಒದಗಿಸಲಾಗಿದೆ.

***

ನಗರ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಅನುದಾನ ಕೊರತೆ ಆಗಿದ್ದರಿಂದ ನಿಧಿ ಬಳಕೆ ಮಾಡಲಾಗಿದೆ. ಜನರ ಕೋರಿಕೆಯ ಮೇರೆಗೆ ಗ್ರಾಮೀಣ ಪ್ರದೇಶದಲ್ಲಿ ದೇಗುಲ, ಪ್ರಾರ್ಥನಾ ಮಂದಿರಕ್ಕೆ ಅನುದಾನ ನೀಡಲಾಗಿದೆ.

- ಜಿ.ಎಚ್‌. ತಿಪ್ಪಾರೆಡ್ಡಿ ಶಾಸಕ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.