
ಪ್ರಜಾವಾಣಿ ವಾರ್ತೆ
ಸಿರಿಗೆರೆ: ತರಳಬಾಳು ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೀಪಾವಳಿಯನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀಗಳು ಐಕ್ಯಮಂಟಪದಲ್ಲಿ ಶಿವಕುಮಾರ ಶ್ರೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸಾಲು ದೀಪಗಳನ್ನು ಬೆಳಗಿಸಿ ದೀಪಾವಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೃಹಿಣಿಯರು, ಮಕ್ಕಳು, ಯುವಕರು ಸಾವಿರಾರು ಸಂಖ್ಯೆಯಲ್ಲಿ ಮಠಕ್ಕೆ ಬಂದಿದ್ದರು. ಮಠದಲ್ಲಿ ಸಜ್ಜುಗೊಳಿಸಿದ್ದ ಸಾವಿರಾರು ಹಣತೆಗಳನ್ನು ಐಕ್ಯಮಂಟಪದಲ್ಲಿ ಸಾಲಾಗಿ ಜೋಡಿಸಲಾಗಿತ್ತು. ಮಠಕ್ಕೆ ಭೇಟಿ ನೀಡಿದ ಭಕ್ತರು ಬೆಳಗುವ ಹಣತೆಗಳನ್ನು ಪಡೆದುಕೊಂಡು ಮನೆಗಳಿಗೆ ತೆರಳಿ ಮನೆಯಲ್ಲಿನ ಪೂಜೆಗಳನ್ನು ಮುಂದುವರಿಸಿದರು.
‘ಇದು ಶಿವಕುಮಾರ ಶ್ರೀಗಳು ಬೆಳಗಿದ ಹಣತೆ. ಇದರಿಂದ ಮತ್ತೆ ಹತ್ತಾರು ದೀಪಗಳನ್ನು ನಾವು ಬೆಳಗಿಸುತ್ತೇವೆ. ಪ್ರತಿ ದೀಪಾವಳಿಯಂದು ಮಠಕ್ಕೆ ಬಂದು ಅಲ್ಲಿಂದ ಹಣತೆ ಪಡೆದುಕೊಂಡು ಮನೆಗೆ ತೆರಳುತ್ತೇನೆ’ ಎಂದು ಗೃಹಿಣಿ ಮಾನಸಾ ತಿಳಿಸಿದರು.
ಮಠಕ್ಕೆ ಬಂದ ಭಕ್ತರು ಸರತಿ ಸಾಲಲ್ಲಿ ನಿಂತು ಶ್ರೀಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ದೀಪಾವಳಿ ಆಚರಣೆಗೆಂದೇ ಮಠದ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.