ಹಿರಿಯೂರು (ಚಿತ್ರದುರ್ಗ): ಹಳೆಯ ವಿದ್ಯಾರ್ಥಿಗಳ ಆಸಕ್ತಿಯಿಂದಾಗಿ ಈ ಊರಿನ ಶಾಲೆಗೆ ಹೊಸ ಕಟ್ಟಡ ಪ್ರಾಪ್ತಿಯಾಗಿದೆ.
ಅಲ್ಲಲ್ಲಿ ನೆಲಕಚ್ಚಿದ್ದ ಗೋಡೆ, ಒಡೆದು ಹೋಗಿದ್ದ ಹೆಂಚುಗಳು, ಶೌಚಾಲಯ, ಕುಡಿಯುವ ನೀರಿನಂತಹ ಕನಿಷ್ಠ ಸೌಲಭ್ಯಗಳಿಲ್ಲದ, ಸುಣ್ಣ–ಬಣ್ಣವನ್ನೂ ಕಾಣದೇ ಪ್ರಾಚೀನ ಪಳಿಯುಳಿಕೆಯಂತಿದ್ದ ಶಾಲಾ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಎದ್ದುನಿಂತಿದೆ.
₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸಲು ಸನ್ನದ್ಧವಾಗಿರುವುದು ಹಿರಿಯೂರು ತಾಲ್ಲೂಕಿನ ತಾಳವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ.
1925ರಲ್ಲಿ ಆರಂಭವಾಗಿ, ಶತಮಾನ ಪೂರೈಸಿರುವ ಈ ಶಾಲೆಯಲ್ಲಿ ಶತಮಾನೋತ್ಸವ ಆಚರಿಸಲು ಮುಂದಾದ ಹಳೆಯ ವಿದ್ಯಾರ್ಥಿಗಳಿಗೆ ಶಾಲೆಯ ಸ್ಥಿತಿ ಕಂಡು ಮರುಕ ಉಂಟಾದ ಫಲವಾಗಿ ಹೊಸ ಕಟ್ಟಡ ತಲೆ ಎತ್ತುವಂತಾಗಿದೆ. ‘ಶತಮಾನೋತ್ಸವ ಆಚರಿಸಬೇಕೆಂದರೆ ಶಾಲೆಗೆ ಹೊಸರೂಪ ನೀಡಲೇಬೇಕು’ ಎಂಬ ಆಲೋಚನೆ ಬಂದ ಪರಿಣಾಮ ಸರ್ಕಾರಿ ಶಾಲೆಗೆ ಕಾಯಕಲ್ಪ ದೊರೆತಿದೆ.
ಈ ಶಾಲೆಯಲ್ಲೇ ಕಲಿತು ಬದುಕಿನಲ್ಲಿ ನೆಲೆ ನಿಂತಿರುವ ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಹಾಗೂ ದಾನಿಗಳ ಸಹಾಯದಿಂದ ಹಣ ಸಂಗ್ರಹಿಸಿ 12 ಕೊಠಡಿಗಳನ್ನು ನಿರ್ಮಿಸಲಾಗಿದೆ. ಆಧುನಿಕ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲ ಉಪಕರಣಗಳನ್ನೂ ಖರೀದಿಸಿ ಒದಗಿಸಲಾಗಿದೆ ಎಂದು ಹಳೆಯ ವಿದ್ಯಾರ್ಥಿಗಳು ತಿಳಿಸಿದ್ದಾರೆ.
₹ 25 ಲಕ್ಷ ವೆಚ್ಚದಲ್ಲಿ ಆಧುನಿಕ ಅಡುಗೆ ಕೋಣೆ, ಹೈಟೆಕ್ ಶೌಚಾಲಯ, ಶುದ್ಧ ಕುಡಿಯುವ ನೀರು ಪೂರೈಸಲು 40,000 ಲೀಟರ್ ಮಳೆ ನೀರು ಸಂಗ್ರಹಣಾ ಸಾಮರ್ಥ್ಯದ ತೊಟ್ಟಿ ನಿರ್ಮಾಣ, ನಿರಂತರ ವಿದ್ಯುತ್ ಪೂರೈಕೆಗೆ ಎರಡು ಯುಪಿಎಸ್ ಅಳವಡಿಕೆ, ಪ್ರತಿ ಕೊಠಡಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್ ವ್ಯವಸ್ಥೆ, ಶಾಲಾ ಆವರಣದಲ್ಲಿ ಹೈಮಾಸ್ಟ್ ದೀಪ, ಶಾಲಾ ಕಾಂಪೌಂಡ್ ಸುತ್ತ ಸೌರ ವಿದ್ಯುತ್ ದೀಪಗಳ ಅಳವಡಿಕೆ, ಗುಣಮಟ್ಟದ 40 ಕಬ್ಬಿಣದ ಡೆಸ್ಕ್‌ಗಳು, ಸ್ಮಾರ್ಟ್ ತರಗತಿ, 10 ಕಂಪ್ಯೂಟರ್‌ಗಳಿರುವ ಲ್ಯಾಬ್, ಶಾಲೆಯ ಸುತ್ತ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, 5,000 ಗ್ರಂಥಗಳುಳ್ಳ ವಾಚನಾಲಯ ಸೇರಿ ಇನ್ನೂ ಕೆಲವು ಸೌಲಭ್ಯ ಕಲ್ಪಿಸಲಾಗಿದೆ.
ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಹಾಗೂ ಕುಡಿಯುವ ನೀರಿನ ಶುದ್ಧೀಕರಣ (ಆರ್‌ಒ) ಘಟಕ, ಭೋಜನಾಲಯ ನಿರ್ಮಾಣ, ಉತ್ತಮ ಆಟದ ಮೈದಾನ, ಶಾಲಾ ಆವರಣದಲ್ಲಿ ಬೇವು, ಹುಣಸೆ, ನೇರಳೆ ಮುಂತಾದ ನೆರಳು ಕೊಡುವ ನೂರು ಗಿಡಗಳ ನಾಟಿ, 3 ಎಕರೆ ವಿಸ್ತೀರ್ಣವಿರುವ ಶಾಲೆಯ ಸುತ್ತ 5.6 ಅಡಿ ಎತ್ತರದ ಕಾಂಪೌಂಡ್ ನಿರ್ಮಾಣ, ಶಾಲಾ ಆವರಣದಲ್ಲಿ ರಂಗಮಂದಿರ ಸೇರಿ ಇನ್ನೂ ಕೆಲವು ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ಆಗಸ್ಟ್ 16ರಂದು ಶತಮಾನೋತ್ಸವ ಆಚರಣೆಗೆ ಉತ್ಸವ ಸಮಿತಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಶಾಲಾ ಪುನಃಶ್ಚೇತನಕ್ಕೆ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಎ. ಚಂದ್ರಾರೆಡ್ಡಿ (ನಿವೃತ್ತ ಮುಖ್ಯ ಎಂಜಿನಿಯರ್), ಬೆಂಗಳೂರು ಕೃಷಿ ವಿವಿ ನಿವೃತ್ತ ವಿಸ್ತರಣಾಧಿಕಾರಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ವಿ.ವೀರಭದ್ರಯ್ಯ, ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಎಚ್.ಜಲೀಲ್ ಸಾಬ್, ತಾ.ಪಂ. ಮಾಜಿ ಅಧ್ಯಕ್ಷ ಸಿ.ಪ್ರವೀಣ್, ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎ.ಅನಂತರೆಡ್ಡಿ, ವಕೀಲ ಜಿ.ಡಿ. ರಾಮಮೋಹನ್, ನಿವೃತ್ತ ಡಿಡಿಪಿಯು ಕೃಷ್ಣಪ್ರಸಾದ್, ಸಾಮಾಜಿಕ ಕಾರ್ಯಕರ್ತ ಪಿ.ಆರ್. ವೇಣುಗೋಪಾಲ್, ಪ್ರೌಢಶಾಲೆ ಶಿಕ್ಷಕ ಬಿ.ವೈದ್ಯನಾಥ, ನಿವೃತ್ತ ಪೊಲೀಸ್ ಅಧಿಕಾರಿ ಜಿ. ಮಂಜುನಾಥ ರೆಡ್ಡಿ, ನಿವೃತ್ತ ಕೃಷಿ ಅಧಿಕಾರಿ ಎಂ.ಎಸ್. ಗುರುಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಸಿದ್ದಾ ಬೋವಿ, ಉದ್ಯಮಿ ಎಸ್. ಶಶಿಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪುನೀತ್, ಜಿ. ಸುನೀಲ್‌ಕುಮಾರ್ ಮತ್ತಿತರರು ನೆರವು ನೀಡಿದವರಲ್ಲಿ ಪ್ರಮುಖರು ಎಂದು ಶತಮಾನೋತ್ಸವ ಆಚರಣೆ ಸಮಿತಿ ಮುಖಂಡರು ತಿಳಿಸಿದ್ದಾರೆ.
‘ಶಾಲೆ ಆರಂಭವಾದಾಗಿನಿಂದ ಎರಡು ದಶಕಗಳ ಹಿಂದಿನವರೆಗೆ 150ರಿಂದ 200 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದರು. ಪ್ರಸ್ತುತ ಈ ಸಂಖ್ಯೆ 50ಕ್ಕಿಂತ ಕಡಿಮೆ ಆಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣಕ್ಕೆ ಮುಖ್ಯಶಿಕ್ಷಕರ ಹುದ್ದೆಯೇ ರದ್ದಾಗಿದೆ. ಮೂವರು ಕಾಯಂ ಶಿಕ್ಷಕರು ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆ ಉಳಿಸಿಕೊಲ್ಳುವ ನಿಟ್ಟಿನಲ್ಲಿ ಸರ್ಕಾರದಿಂದ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ಯುಕೆಜಿ ಮತ್ತು 1ನೇ ತರಗತಿ ಆರಂಭಿಸಲಾಗುತ್ತಿದೆ. ಇಲ್ಲಿನ ತರಗತಿಗಳಿಗೆ ಬೋಧಿಸಲು ತರಬೇತಿ ಪಡೆದ ಇಬ್ಬರು ಶಿಕ್ಷಕರನ್ನು ನೇಮಿಸಿ ದಾನಿಗಳು ಹಾಗೂ ಉತ್ಸವ ಸಮಿತಿಯ ವತಿಯಿಂದ ವೇತನ ನೀಡುತ್ತಿದ್ದೇವೆ’ ಎಂದು ಹಳೆಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಈಗ ನಮ್ಮೂರ ಶಾಲೆಯಲ್ಲಿ 6 ಜನ ಶಿಕ್ಷಕರಿದ್ದಾರೆ. ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳೆಲ್ಲ ಒಟ್ಟುಗೂಡಿ ಪಾಲಕರ ಮನವೊಲಿಸಿ ನಮ್ಮೂರಿನ ಎಲ್ಲ ಮಕ್ಕಳು ಹಿರಿಯ ಪ್ರಾಥಮಿಕ ಶಾಲಾ ಹಂತದವರೆಗೆ ಈ ಶಾಲೆಯಲ್ಲಿಯೇ ಕಲಿಯುವಂತೆ ಜಾಗೃತಿ ಮೂಡಿಸುತ್ತೇವೆ. ಆಗ ಮಾತ್ರ ಶತಮಾನೋತ್ಸವ ಆಚರಣೆಗೆ ಹಳೆಯ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅರ್ಥ ಬರುತ್ತದೆ’ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.