ಚಳ್ಳಕೆರೆ: ಮಳೆನೀರು ಹರಿದುಹೋಗಲು ಚರಂಡಿ ನಿರ್ಮಿಸದಿರುವ ಕಾರಣ ಇಲ್ಲಿನ ಪಾವಗಡ ರಸ್ತೆ ಬಳಿಯ ಸಂತೆಮೈದಾನವು ಕೆಸರುಮಯ ಆಗಿದ್ದರಿಂದ ಭಾನುವಾರದ ಸಂತೆಗೆ ತೀವ್ರ ತೊಂದರೆ ಉಂಟಾಯಿತು.
ಸೊಪ್ಪು, ತರಕಾರಿಗಳನ್ನು ಕೆಸರಿನಲ್ಲಿಯೇ ಮಾರಾಟ ಮಾಡುವ ಪರಿಸ್ಥಿತಿ ವರ್ತಕರಿಗೆ ಎದುರಾಯಿತು. ಮೈದಾನ ತಗ್ಗು ಪ್ರದೇಶವಾಗಿದ್ದು, ಅಲ್ಲಲ್ಲಿ ನಿರ್ಮಾಣಗೊಂಡಿರುವ ದೊಡ್ಡ ತಗ್ಗು-ಗುಂಡಿಯಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರು, ಕೆಸರು ಸೊಪ್ಪು-ತರಕಾರಿ ಖರೀದಿಸಲು ಬಂದ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿತು.
ಮಾರಾಟಕ್ಕೆ ಸೂಕ್ತ ಜಾಗವಿಲ್ಲದಿದ್ದರಿಂದ ತಂದಿದ್ದ ಸೊಪ್ಪು- ತರಕಾರಿಯನ್ನು ರೈತರು ಮತ್ತು ವರ್ತಕರು ವಾಪಸ್ ಕೊಂಡೊಯ್ದರು. ಕೆಲವರು ಚಿತ್ರದುರ್ಗ, ಹಿರಿಯೂರು ಹಾಗೂ ಬಳ್ಳಾರಿ ಮಾರುಕಟ್ಟೆಗೆ ಸಾಗಿಸಿದರು.
‘ನಗರದ ಮಧ್ಯ ಭಾಗದಲ್ಲಿ ನಿರ್ಮಿಸಿದ್ದ ರಾಜಕಾಲುವೆ ಮುಚ್ಚಿ ಹೋಗಿದೆ. ವಿವಿಧ ವಾರ್ಡ್‌ಗಳ ಮಳೆನೀರು ಮೈದಾನ ಸೇರುತ್ತದೆ. ಅಲ್ಪ ಪ್ರಮಾಣದ ಮಳೆ ಬಿದ್ದರೂ, ಇಡೀ ಮೈದಾನ ಕೆಸರುಗದ್ದೆಯಾಗುತ್ತದೆ. ಇದರಿಂದಾಗಿ ವಾರಕ್ಕೊಮ್ಮೆ ನಡೆಯುವ ಭಾನುವಾರದ ಸಂತೆಗೆ ಹಲವು ಜಿಲ್ಲೆಯಿಂದ ಬರುವ ವ್ಯಾಪಾರಸ್ಥರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ’ ಎಂದು ವ್ಯಾಪಾರಿ ತಿಪ್ಪೇಸ್ವಾಮಿ ಗೌಡ ಬೇಸರಿಸಿದರು.
‘ವಾರದ ಸಂತೆ ನಡೆಯುತ್ತಿದ್ದ ಜಾಗದಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಿಸಿ ಸಂತೆಯನ್ನು ನಗರಸಭೆ ಉದ್ಯಾನಕ್ಕೆ ಸ್ಥಳಾಂತರ ಮಾಡಿದ್ದರಿಂದ ತೊಂದರೆ ಅನುಭವಿಸಬೇಕಾಗಿದೆ’ ಎಂದು ಮಹಿಳಾ ವ್ಯಾಪಾರಿ ಭವ್ಯಾ ಬೇಸರ ವ್ಯಕ್ತಪಡಿಸಿದರು.
‘ತರಕಾರಿ ಮಾರಾಟಕ್ಕೆ 100 ಕ್ಕೂ ಹೆಚ್ಚು ಸಿಮೆಂಟ್ ಕಟ್ಟೆ, ಕಾಂಕ್ರಿಟ್ ರಸ್ತೆ, ನೆರಳಿಗೆ ಶೆಡ್ ನಿರ್ಮಾಣ ಮಾಡಬೇಕು. ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿಸಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಗ್ರಾಹಕ ನಾಗರಾಜ ಮನವಿ ಮಾಡಿದರು.
‘ವಸೂಲಿ ಮಾಡುವ ಸುಂಕದಲ್ಲೇ ಸಂತೆ ಮೈದಾನ ಅಭಿವೃದ್ಧಿಪಡಿಸಬಹುದು. ಕೆಸರಲ್ಲಿನ ತರಕಾರಿಯನ್ನು ಖರೀದಿಸಲು ಯಾರು ಬರ್ತಾರೆ’ ಎಂದು ಸ್ಥಳೀಯ ಆಡಳಿತ ಮಂಡಳಿ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿಗೆ ಮಣ್ಣು ಹಾಕಿಸಲಾಗಿದೆ. ಸಿ.ಸಿ. ರಸ್ತೆ ನಿರ್ಮಾಣ ಹೈಮಾಸ್ಟ್ ದೀಪಗಳ ಅಳವಡಿಕೆ ನೆರಳಿನ ವ್ಯವಸ್ಥೆ ಕಲ್ಪಿಸಲು ಶಾಸಕರ ಜತೆ ಚರ್ಚಿಸಲಾಗುವುದುಶಿಲ್ಪಾ ಮುರಳೀಧರ್ ನಗರಸಭೆ ಅಧ್ಯಕ್ಷೆ
ಗ್ರಾಹಕರು ವಾಹನಗಳ ಓಡಾಟದ ಅನುಕೂಲಕ್ಕಾಗಿ ಮೈದಾನದ 4 ಕಡೆಗೆ ದೊಡ್ಡ ಗೇಟ್‌ಗಳನ್ನು ಅಳವಡಿಸಬೇಕು. ಮೈದಾನಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕುತಿಪ್ಪೇಸ್ವಾಮಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.