ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಗ್ರಾಮದಲ್ಲಿ ಗುರುವಾರ ಶಾಸಕ ಟಿ.ರಘುಮೂರ್ತಿ ವಿವಿಧ ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ತಾಲ್ಲೂಕಿನ ಗಡಿ ಗ್ರಾಮ ಪರಶುರಾಂಪುರದಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ₹ 600 ಲಕ್ಷ ವೆಚ್ಚದ ಕಮಟಾ – ಕಡಮಡಗಿ ಕೂಡು ರಸ್ತೆ ವಿಸ್ತರಣೆ ಕಾಮಗಾರಿ, ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿಯಿಂದ (150–ಎ) ವಿಶ್ವನಾಥಪುರ ಗ್ರಾಮದವರೆಗೆ ರಸ್ತೆ ವಿಸ್ತರಣೆ ಮತ್ತು ಕರೆಕಲ್ಲಹಟ್ಟಿ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಮುಖ್ಯಮಂತ್ರಿ ವಿಶೇಷ ಅನುದಾನದ ₹ 5 ಲಕ್ಷ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಶಾಸಕ ಟಿ.ರಘುಮೂರ್ತಿ ಭೂಮಿಪೂಜೆ ನೆರವೇರಿಸಿದರು.
‘ಗಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಕಾಮಗಾರಿಗೆ ಗುಣಮಟ್ಟದ ಸಿಮೆಂಟ್, ಕಲ್ಲುಜಲ್ಲಿ ತಪ್ಪದೇ ಬಳಕೆ ಮಾಡಬೇಕು. ಯೋಜನೆಯಲ್ಲಿ ನಿಗದಿಪಡಿಸಿದ ಉದ್ದ– ಅಗಲ ಅಳತೆಯನ್ನು ಕಾಯ್ದುಕೊಳ್ಳಬೇಕು. ಕಾಮಗಾರಿ ಕಳಪೆಯಾದಲ್ಲಿ ಬಿಲ್ ತಡೆ ಹಿಡಿಯಲಾಗುವುದು’ ಎಂದು ಶಾಸಕರು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಹೋಬಳಿ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಟಿ.ಶಶಿಧರ್, ಪಂಚಗ್ಯಾರಂಟಿ ಯೋಜನೆ ಅನುಷ್ಠಾನ ಹೋಬಳಿ ಘಟಕದ ಅಧ್ಯಕ್ಷ ಚನ್ನಕೇಶವ, ಜಿಲ್ಲಾ ಪಂಚಾಯಿತಿ ನಾಮನಿರ್ದೇಶಕ ಸದಸ್ಯ ಚೌಳೂರು ಬಸವರಾಜ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ನಾಮ ನಿರ್ದೇಶಕ ಸದಸ್ಯ ಒ.ರಂಗಸ್ವಾಮಿ, ಕಾಂಗ್ರೆಸ್ ಮುಖಂಡ ಜಯವೀರಚಾರಿ, ಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರೇಶ್, ಮಾಜಿ ಅಧ್ಯಕ್ಷೆ ಬೊಮ್ಮಕ್ಕ, ಮಂಜುಳಮ್ಮ, ಸದಸ್ಯ ಲಾಯರ್ ಪ್ರಕಾಶ್, ಜಗಳೂರು ಸ್ವಾಮಿ, ನಾಗರಾಜ, ನಾಗಭೂಷಣ, ಪ್ರಕಾಶ್, ಸಣ್ಣೀರಪ್ಪ, ನಿಜಲಿಂಗಪ್ಪ, ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.