
ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ದಲಿತ ಕುಟುಂಬಗಳಿಗೆ ವಿತರಿಸಿರುವ ನಿವೇಶನಗಳ ಖಾತೆಗೆ ಆಗ್ರಹಿಸಿ ದಲಿತ ಸಂಘಟನೆ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಮುಂದೆ ನಡೆಸುತ್ತಿರುವ ಧರಣಿ 11ನೇ ದಿನಕ್ಕೆ ಮುಂದುವರೆದಿದೆ.
ಬುಧವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಸಂಸದ ಗೋವಿಂದ ಕಾರಜೋಳ, 33 ವರ್ಷ ಆದರೂ ದಲಿತ ಕುಟುಂಬಗಳಿಗೆ ನಿವೇಶನದ ಖಾತೆ ಮಾಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವಾಗಿ ಖಾತೆ ಮಾಡಿಸಿಕೊಡುವುದಾಗಿ ಧರಣಿ ನಿರತರಿಗೆ ಭರವಸೆ ನೀಡಿದರು.
ಗ್ರಾಮದ ಅರ್ಹ 87 ಕುಂಟುಂಬಗಳಿಗೆ ಖಾತೆ ಜೊತೆಗೆ ನಿವೇಶನ ಹಂಚಿಕೆ ಮಾಡಿಕೊಡಬೇಕು. ನಿವೇಶನದ ಲೇಔಟ್ ರೂಪಿಸುವ ಮೂಲಕ ಮೂಲಭೂತ ಸೌಲಭ್ಯ ಒದಗಿಸಿಕೊಡುವವರೆಗೂ ಧರಣಿ ನಡೆಸುವುದಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚೌಳೂರು ಎಚ್. ಮಂಜುನಾಥ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಜಿಲ್ಲಾ ಮುಖಂಡ ಬಾಳೆಕಾಯಿ ರಾಮದಾಸ್, ದಯಾನಂದ ಮಾತನಾಡಿದರು.
ದಲಿತ ಮುಖಂಡ ರಾಜಣ್ಣ, ಸಿದ್ದಾಪುರ ರುದ್ರಮುನಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಗೋಸಿಕೆರೆ ಓಂಕಾರಮೂರ್ತಿ, ಟಿ.ಎನ್. ಕೋಟೆ ರಂಗಸ್ವಾಮಿ, ಕೋನಿಗರಹಳ್ಳಿ ಹರೀಶ್, ಮಹಿಳಾ ಸಂಘದ ಪ್ರತಿನಿಧಿ ದುರುಗಮ್ಮ, ಸಾಕಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.