ಚಳ್ಳಕೆರೆ: ತಾಲ್ಲೂಕಿನ ಟಿ.ಎನ್. ಕೋಟಿ ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೊಷಣೆ ಕೂಗುತ್ತ ಸೋಮವಾರ ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ನೇತೃತ್ವವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಓಂಕಾರಮೂರ್ತಿ ಮಾತನಾಡಿ, ‘ಗ್ರಾಮದ ರಿಸನಂ 70ರಲ್ಲಿ 54.2 ಎಕರೆ, 71ರಲ್ಲಿ 23.37 ಎಕರೆ, 72ರಲ್ಲಿ 12.33ಎಕರೆ, 45ರಲ್ಲಿ 45.5 ಎಕರೆ ಸೇರಿ ಒಟ್ಟು 137.30 ಎಕರೆ ಪ್ರದೇಶ ಒತ್ತುವರಿಯಾಗಿದೆ. ಒತ್ತುವರಿ ಜಾಗ ತೆರವಿಗೆ ಆಗ್ರಹಿಸಿ 3– 4 ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿಪ್ಪೇಸ್ವಾಮಿ ಮಾತನಾಡಿ, ‘ಸರ್ಕಾರಿ ಜಾಗ ಒತ್ತುವರಿಯಾಗದಂತೆ ಎಚ್ಚರಿಕೆವಹಿಸಿ ಅದನ್ನು ಸಂರಕ್ಷಣೆ ಮಾಡುವುದು ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ಗಮನಕ್ಕೆ ತಂದಿದ್ದರೂ ತೆರವುಗೊಳಿಸುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಕೂಡಲೆ ತೆರವುಗೊಳಿಸುವ ಮೂಲಕ ಗ್ರಾಮದ ವಸತಿ ರಹಿತ ಕುಟುಂಬಕ್ಕೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಮನವಿ ಪರಿಶೀಲಿಸಿದ ತಹಶೀಲ್ದಾರ್ ರೇಹಾನ್‍ಪಾಷ, ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಆಶ್ರಯ ಯೋಜನೆಯಡಿ ನಿವೇಶನಕ್ಕಾಗಿ ಮೀಸಲಿರಿಸಲಾಗುವುದು. ಗ್ರಾಮದ ವಸತಿರಹಿತ ಕುಟುಂಬಗಳು ಬೇಡಿಕೆ ಸಲ್ಲಿಸಿದಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಸೌಲಭ್ಯ ಒದಗಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್‍ಪಾಷ ಭರವಸೆ ನೀಡಿದರು.
ಗ್ರಾಮದ ಮುಖಂಡ ನಾಗರಾಜ, ತಿಪ್ಪೇಸ್ವಾಮಿ, ಮಂಜುನಾಥ್, ತಿಮ್ಮಣ್ಣ, ಗಂಗಾಧರ, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.