ADVERTISEMENT

ಚಳ್ಳಕೆರೆ: ಕುಸಿಯುವ ಹಂತದ ಚಾವಣಿಗೆ ಕಂಬಗಳ ಆಸರೆ

ಶಿವಗಂಗಾ ಚಿತ್ತಯ್ಯ
Published 29 ಸೆಪ್ಟೆಂಬರ್ 2025, 6:20 IST
Last Updated 29 ಸೆಪ್ಟೆಂಬರ್ 2025, 6:20 IST
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ದುಃಸ್ಥಿತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ದುಃಸ್ಥಿತಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ   

ಚಳ್ಳಕೆರೆ: ತಾಲ್ಲೂಕಿನ ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗಡಿ ಭಾಗದ ಗ್ರಾಮ ರೇಣುಕಾಪುರ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಚಾವಣಿ ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ತಡೆಯಲು ಮರದ ಕಂಬಗಳನ್ನು ಆಧಾರವಾಗಿ ನೀಡಲಾಗಿದೆ. 

ಇಲ್ಲಿ 1 ರಿಂದ 7ನೇ ತರಗತಿವರೆಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಟ್ಟಡದ ದುಃಸ್ಥಿತಿಯಿಂದಾಗಿ ಇವರೆಲ್ಲ ಆತಂಕಗೊಂಡಿದ್ದಾರೆ. 

ಕಟ್ಟಡದ ಮೂರ್ನಾಲ್ಕು ಕೊಠಡಿಗಳನ್ನು ಹೊರತುಪಡಿಸಿದರೆ ಇನ್ನುಳಿದ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿಗೆ ಹೊದಿಸಿದ್ದ ಕೆಂಪು ಹೆಂಚುಗಳು ಬಿಸಿಲು, ಮಳೆ ಗಾಳಿಗೆ ಸಿಕ್ಕು ಒಡೆದು ಚೂರಾಗಿ ಬಿದ್ದಿವೆ. ಕಿಟಕಿ ಮತ್ತು ಬಾಗಿಲುಗಳೂ ಮುರಿದು ಹೋಗಿವೆ.

ADVERTISEMENT

ಶಿಥಿಲ ಕಟ್ಟಡದಲ್ಲೇ ಶಿಕ್ಷಕರು ಬೋಧನೆ ಮುಂದುವರಿಸಿದ್ದು, ದುರಸ್ತಿ ಮಾಡಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ.

ತಾಲ್ಲೂಕಿನಲ್ಲಿ ದುಃಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳನ್ನು ಗುರುತಿಸಲಾಗಿದ್ದು ಇಲಾಖೆಯಿಂದ ಅನುದಾನ ಬಂದ ತಕ್ಷಣ ದುರಸ್ತಿ ಮಾಡಲಾಗುವುದು. ಶಾಲೆಗೆ ಮೂಲ ಸೌಲಭ್ಯ ಒದಗಿಸಲಾಗುವುದು. 
ಕೆ.ಎಸ್.ಸುರೇಶ್ ಕ್ಷೇತ್ರ ಶಿಕ್ಷಣಾಧಿಕಾರಿ

ಈ ಶಾಲೆ ಚಳ್ಳಕೆರೆ ತಾಲ್ಲೂಕು ಮತ್ತು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿರುವ ಕಾರಣ ಎರಡೂ ಕ್ಷೇತ್ರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ದುರಸ್ತಿಗೆ ರೈತ ಸಂಘ ಆಗ್ರಹ
‘ಶಾಲಾ ಕಟ್ಟಡ ನಿರ್ಮಿಸಿ 60 ವರ್ಷ ಕಳೆದಿದ್ದು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಹಳೆ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗದಿದ್ದರೆ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಗೆ ಗ್ರಾಮಸ್ಥರೊಡನೆ ಮುತ್ತಿಗೆ ಹಾಕಲಾಗುವುದು’ ಎಂದು ರೈತ ಸಂಘದವರು ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.