
ಚಳ್ಳಕೆರೆ ತಾಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವು ಬೆಳೆದು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಲಾಭಗಳಿಸುತ್ತಿದ್ದಾರೆ.
ಚಳ್ಳಕೆರೆ: ಸೇವಾ ಭದ್ರತೆಯ ಕೊರತೆ, ವೇತನ ವಿಳಂಬ, ಕೆಲಸದ ಒತ್ತಡ.. ಈ ಎಲ್ಲಾ ಸಮಸ್ಯೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸರಿಗೆ ಮಾದರಿಯಾಗುವ ರೀತಿಯಲ್ಲಿ ಚಳ್ಳಕೆರೆ ತಾಲ್ಲೂಕಿನ ನಲ್ಲೂರಹಳ್ಳಿ ಗ್ರಾಮದ ಶಿವರಾಜ್ ಸಿ. ಎಂಬುವವರು ಬೋಧಕ ವೃತ್ತಿಯ ಜೊತೆಗೆ ಲಾಭದಾಯಕ ಕೃಷಿಯಾಗಿ ಗುಲಾಬಿ ಹೂವುಗಳನ್ನು ಬೆಳೆದು ತಿಂಗಳಿಗೆ ₹ 30 ರಿಂದ ₹ 40 ಸಾವಿರ ಲಾಭ ಗಳಿಸುತ್ತಿದ್ದಾರೆ.
7 ವರ್ಷದಿಂದ ಶಿವರಾಜ್ ಅವರು ಬೆಳಗೆರೆಯ ಬಿ. ಸೀತಾರಾಮ ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ವೃತ್ತಿಯಲ್ಲಿ ಬರುವ ಸಂಬಳದಿಂದ ಮನೆ ನಡೆಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಇವರು, ಒಂದು ವರ್ಷದ ಹಿಂದೆ ಕೃಷಿಯಲ್ಲಿ ನಿರತರಾಗಿ ಯಶಸ್ಸು ಕಂಡಿದ್ದಾರೆ.
ತಮಿಳುನಾಡಿನಿಂದ ₹ 18ಕ್ಕೆ ಒಂದರಂತೆ 1,500 ಮಿರಾಬಲ್ ತಳಿಯ ಗುಲಾಬಿ ಸಸಿಗಳನ್ನು ತರಿಸಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಸಾಲಿನಿಂದ ಸಾಲಿಗೆ 7 ಅಡಿ, ಸಸಿಯಿಂದ ಸಸಿಗೆ 3 ಹಂತರದಲ್ಲಿ ನಾಟಿ ಮಾಡಿದ್ದಾರೆ. ಮೊದಲು ಭೂಮಿ ಹದಮಾಡುವುದು, ಬೆಡ್ ಹೊಡೆಸುವುದು, ಡ್ರಿಪ್ ಹಾಕಿಸುವುದು, ಪೈಪ್ ಲೈನ್ ಸೇರಿ ಎಲ್ಲ ಸಿದ್ಧತೆ ಮಾಡಲು ₹ 1 ಲಕ್ಷ ಖರ್ಚು ಮಾಡಿದ್ದಾರೆ. ಸಸಿ ನಾಟಿ ಮಾಡಿ 1 ವರ್ಷ 3 ತಿಂಗಳಾಗಿದ್ದು, ಪ್ರತಿನಿತ್ಯ ಅಂದಾಜು 40 ಕೆ.ಜಿ. ಗುಲಾಬಿ ಹೂವು ಸಿಗುತ್ತದೆ.
‘ಗಲಾಬಿ ಸಸಿ ಹಾಕಿದ ತಕ್ಷಣ ಲಾಭ ಪಡೆಯಲು ಸಾಧ್ಯವಿಲ್ಲ. ಪ್ರತಿನಿತ್ಯ ಗಿಡಗಳ ಪೋಷಣೆ ಮಾಡಬೇಕು. ಮಳೆಗಾಲದಲ್ಲಿ ಚುಕ್ಕೆ ರೋಗ, ಚಳಿಗಾಲದಲ್ಲಿ ಬೂದಿ ರೋಗಗಳು ಬಾಧಿಸುತ್ತವೆ. ಈ ರೋಗಗಳಿಗೆ ಟ್ರೀಡಿಯಂ, ನೆಟಿವೊ ಸೇರಿದಂತೆ ವಿವಿಧ ರೀತಿಯ ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ. 2 ತಿಂಗಳಿಗೊಮ್ಮೆ ರಾಸಾಯನಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ (ಮೈಕ್ರೋ ನ್ಯೂರ್ಟಿಯಂಟ್) ನೀಡಬೇಕಾಗುತ್ತದೆ. ವಾರಕ್ಕೊಮ್ಮೆ ನುಸಿ ರೋಗಕ್ಕೆ ಔಷಧಿ ಸಿಂಪಡಿಸಬೇಕು. ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಎರಡು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಮಳೆಗಾಲದ ಸಮಯದಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕು’ ಎಂದು ಹೂವಿನ ಬೆಳೆ ನಿರ್ವಹಣೆ ಹಿಂದಿನ ಶ್ರಮದ ಬಗ್ಗೆ ವಿವರಿಸಿದರು.
ಗುಲಾಬಿ ಹೂವಿನ ಕೃಷಿಯಲ್ಲಿ 1 ವರ್ಷದಿಂದ ಪಳಗಿರುವ ಶಿವರಾಜ್ ಅರ್ಧ ಎಕರೆಯಲ್ಲಿ 4000 ಪೂರ್ಣಿಮಾ, 4000 ಸೆಂಟ್ ಯಲ್ಲೋ ಸೇವಂತಿಗೆ ಸಸಿಗಳನ್ನು ಹಾಕಿ ಅದರಿಂದಲೂ ಆದಾಯ ಪಡೆಯುತ್ತಿದ್ದಾರೆ.
ಆರ್ಥಿಕವಾಗಿ ಸದೃಢವಾಗಿದ್ದೇನೆ
‘ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ. ಹಬ್ಬ ಮುಗಿದ ಮೇಲೆ ಬೆಲೆ ಕುಸಿಯುವುದು ಸಹಜ. ಆದರೂ ಒಂದೇ ವರ್ಷದಲ್ಲಿ ₹ ಲಕ್ಷದಿಂದ ₹ 4 ಲಾಭ ಗಳಿಸಿದ್ದೇನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ಮಧ್ಯಾಹ್ನ ಕಾಲೇಜಿನಿಂದ ಬಂದ ಕೂಡಲೇ ಸಂಜೆವರೆಗೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ಒಂದು ವರ್ಷದಿಂದ ಕೃಷಿಯಲ್ಲಿ ತೊಡಗಿದ್ದು ಆರ್ಥಿಕವಾಗಿ ಸಧೃಡವಾಗಲು ಕೃಷಿಯೇ ಸಹಕಾರಿಯಾಗಿದೆ. ಕೃಷಿ ಚಟುವಟಿಕೆಯಿಂದ ಖುಷಿಯಾಗಿದ್ದೇನೆ’ ಎಂದು ಹೇಳುತ್ತಾರೆ ಶಿವರಾಜ್.
ಪ್ರೋತ್ಸಾಹಧನ ಸದುಪಯೋಗ ಪಡೆದುಕೊಳ್ಳಿ
ತಾಲೂಕಿನಲ್ಲಿ 10 ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಬೆಳೆಯನ್ನು ಬೆಳೆಯಲಾಗುತ್ತಿದೆ. ಇತ್ತೀಚೆಗೆ ಗುಲಾಬಿ ಬೆಳೆಗಾರರು ಹೆಚ್ಚಾಗಿದ್ದು ತೋಟಗಾರಿಕೆ ಇಲಾಖೆಯಿಂದ ಗುಲಾಬಿ ಬೆಳೆಗೆ ಹೆಕ್ಟೇರ್‌ಗೆ ₹ 50 ಸಾವಿರ ಹಾಗೂ ಹನಿ ನೀರಾವರಿಗೆ ಶೇ 90ರಷ್ಟು ಧನ ಸಹಾಯ ನೀಡಲಾಗುತ್ತಿದೆ. ಮನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸಸಿ ನಾಟಿ ಮಾಡುವುದಕ್ಕೆ ಗುಂಡಿ ತೆಗೆಯುವುದಕ್ಕೆ ಗರಿಷ್ಠ ₹ 1 ಲಕ್ಷ ಪ್ರೋತ್ಸಾಹಧನ ನೀಡುತ್ತಿದ್ದು ರೈತರು ಇದರ ಉಪಯೋಗ ಪಡೆದುಕೊಂಡರೆ ಕೃಷಿಯಲ್ಲಿ ಇನ್ನಷ್ಟು ಯಶಸ್ಸು ಕಾಣಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಎನ್. ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.