
ಚಿತ್ರದುರ್ಗ: ಪ್ರಾಚೀನ ನಾಗರಿಕತೆಯ ಪ್ರತೀಕವಾಗಿರುವ ‘ಚಂದ್ರವಳ್ಳಿ ಸ್ಮಾರಕ’ಗಳು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಈಚೆಗೆ ನಡೆದ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಂಸ್ಕೃತಿ ಸಚಿವರು ‘ಚಂದ್ರವಳ್ಳಿ ಪ್ರದೇಶ ಕೇಂದ್ರ ಸಂರಕ್ಷಿತ ಪ್ರದೇಶವಲ್ಲ’ ಎಂದು ಲಿಖಿತ ಉತ್ತರ ನೀಡಿರುವುದು ನಿರ್ಲಕ್ಷ್ಯವನ್ನು ಸಾಕ್ಷೀಕರಿಸುತ್ತಿದೆ.
ಸಂಸದ ಗೋವಿಂದ ಕಾರಜೋಳ ಅವರು ಲೋಕಸಭಾ ಅಧಿವೇಶನದ ಸಂದರ್ಭ ‘ಚಿತ್ರದುರ್ಗದ ಕಲ್ಲಿನಕೋಟೆ, ಚಂದ್ರವಳ್ಳಿ ಸ್ಮಾರಕ ಹಾಗೂ ಇತರ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ’ ಕುರಿತ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಅಧಿಕಾರಿಗಳು ಚಂದ್ರವಳ್ಳಿಯನ್ನು ಕೇಂದ್ರ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಲ್ಲ ಎಂದು ಹೇಳಿದೆ. ಇದು ಸಂಶೋಧಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಆಗಿಹೋಗಿರುವ ಪ್ರಾಚೀನ ನಾಗರಿಕತೆಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಚಂದ್ರವಳ್ಳಿ ಅಗ್ರಸ್ಥಾನ ಪಡೆದುಕೊಂಡಿದೆ. ಕ್ರಿ.ಶ. 1ನೇ ಶತಮಾನದಿಂದಲೂ ಚಂದ್ರವಳ್ಳಿಯ ಗುರುತುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಶಾತವಾಹನರ ಕಾಲದಿಂದಲೂ ಪಟ್ಟಣವಾಗಿ ಗುರುತಿಸಿಕೊಂಡಿದ್ದ ಚಂದ್ರವಳ್ಳಿ ಭಾಗದಲ್ಲಿ ದೊರೆಯುತ್ತಿದ್ದ ಸೀಸ ಲೋಹದಿಂದ ನಾಣ್ಯ ಠಂಕಿಸಲಾಗುತ್ತಿತ್ತು ಎಂಬ ಆಧಾರಗಳು ದೊರೆಯುತ್ತವೆ. ಈಗಲೂ ಇಲ್ಲಿಯ ನಾಣ್ಯಗಳು, ಕುರುಹುಗಳು ಕಾಣಸಿಗುತ್ತವೆ.
ಉತ್ಖನನ ಕಾಲದಲ್ಲಿ ಸಿಕ್ಕಿರುವ ಕುರುಹುಗಳಿಂದಾಗಿ ಚಂದ್ರವಳ್ಳಿಯ ಇತಿಹಾಸ ಕ್ರಿಸ್ತ ಪೂರ್ವದಲ್ಲೂ ದಾಖಲಾಗಿದೆ. ‘ಇಂತಹ ದೀರ್ಘ ಇತಿಹಾಸವುಳ್ಳ ಸ್ಮಾರಕವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ಸಂರಕ್ಷಿತ ಸ್ಮಾರಕವಾಗಿ ಏಕೆ ಗುರುತಿಸಿಲ್ಲ?’ ಎಂದು ಇತಿಹಾಸ ಸಂಶೋಧಕರು ಪ್ರಶ್ನಿಸುತ್ತಾರೆ. ಎಎಸ್‌ಐ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ತಾಣ ಇಂದಿಗೂ ಪ್ರಮುಖ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿಲ್ಲ ಎಂದು ಆರೋಪಿಸುತ್ತಾರೆ.
‘ಕದಂಬ ಪ್ರಭುತ್ವದ ಸ್ಥಾಪಕ ಮಯೂರವರ್ಮ ಚಂದ್ರವಳ್ಳಿ ಅರಣ್ಯದಲ್ಲೇ ವಾಸಿಸುತ್ತಿದ್ದ. ಆತ ಪುನರ್ ನಿರ್ಮಿಸಿದ ಕೆರೆ ಈಗಲೂ ಜೀವಂತವಾಗಿದೆ. ಕಲ್ಯಾಣಿಯ ಚಾಲುಕ್ಯರ ಕಾಲದಲ್ಲಿ ಅಭಿವೃದ್ಧಿಗೊಂಡ ಅಂಕಲಿ ಗುಹಾಂತರ ದೇವಾಲಯ ವಿದ್ಯಾಪೀಠವಾಗಿತ್ತು. ಇಂತಹ ಅಪರೂಪದ ಸ್ಮಾರಕ ಸಂರಕ್ಷಿತ ತಾಣವಾಗದಿರುವುದು ದುರದೃಷ್ಟಕರ’ ಎಂದು ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿ ‘ಪ್ರಜಾವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.
ಚಂದ್ರವಳ್ಳಿ ಪ್ರದೇಶದಲ್ಲಿ ಅಂಕಲಿ ಗುಹಾಂತರ ದೇವಾಲಯ (ಗುರುಪೀಠ), ಹುಲಿಗೊಂದಿ ಸಿದ್ದೇಶ್ವರ ದೇವಾಲಯ, ಪಂಚಲಿಂಗೇಶ್ವರ ದೇವಾಲಯ, ಮಯೂರ ವರ್ಮನ ಶಾಸನ ಹಾಗೂ ಚಂದ್ರವಳ್ಳಿ ಕೆರೆಯಂಥ ಸ್ಮಾರಕಗಳಿವೆ. ಚಂದ್ರವಳ್ಳಿ ಆಸುಪಾಸಿನಲ್ಲಿ ಸಿದ್ದರ ಗುಹೆ, ಕಟ್ಟಿಗೆ ಸಂಗಪ್ಪ, ದವಳೇಶ್ವರ ದೇವಾಲಯಗಳಿವೆ. ಇವುಗಳಲ್ಲಿ ಹುಲಿಗೊಂದಿ ಸಿದ್ದೇಶ್ವರ ದೇವಾಲಯ ಹಾಗೂ ಮಯೂರವರ್ಮ ಶಾಸನ ಮಾತ್ರ ಎಎಸ್‌ಐ ವ್ಯಾಪ್ತಿಯಲ್ಲಿದ್ದು, ಉಳಿದ ಸ್ಮಾರಕಗಳು ಅನಾಥವಾಗಿವೆ. ಕೆರೆಯನ್ನು ಮುರುಘಾ ಮಠ ನಿರ್ವಹಣೆ ಮಾಡುತ್ತಿದೆ.
ಮಯೂರ ವರ್ಮನ ಶಾಸನ ಸ್ಥಳದಿಂದ ಅಂಕಲಿ ಮಠ ಕೇವಲ 100 ಮೀಟರ್ ದೂರದಲ್ಲಿದೆ. 80 ಅಡಿ ಆಳದಲ್ಲಿ ರೂಪಿತವಾಗಿರುವ ಈ ಅಪರೂಪದ ವಿದ್ಯಾಪೀಠ ಎಎಸ್‌ಐ ವ್ಯಾಪ್ತಿಗೆ ಬಾರದಿರುವುದು ಆಶ್ಚರ್ಯ ತರಿಸುತ್ತದೆ. ‘ರಾಜ್ಯ ಸರ್ಕಾರದ ಸಂರಕ್ಷಿತ ತಾಣಗಳ ನಿರ್ದೇಶಿಕೆಯಲ್ಲಿ ಅಂಕಲಿ ಮಠವನ್ನು ಕೇಂದ್ರ ಸಂರಕ್ಷಿತ ತಾಣ ಎಂದು ಹೆಸರಿಸಲಾಗಿದೆ. ಆದರೆ, ಎಎಸ್‌ಐ ಅಧಿಕಾರಿಗಳು ದಾಖಲೆ ಕಳೆದುಕೊಂಡಿದ್ದು, ಅದನ್ನು ಮತ್ತೆ ಸಂರಕ್ಷಿತ ತಾಣವಾಗಿ ಗುರುತಿಸಲು ವಿಫಲವಾಗಿದ್ದಾರೆ’ ಎಂದು ಇತಿಹಾಸಕಾರರು ಆರೋಪಿಸುತ್ತಾರೆ.
‘ಚಂದ್ರವಳ್ಳಿಯ ಎಲ್ಲ ಸ್ಮಾರಕಗಳನ್ನು ಎಎಸ್‌ಐ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. ಅಂಕಲಿ ಮಠವನ್ನು ರಾಜ್ಯ ಸಂರಕ್ಷಿತ ತಾಣವೆಂದು ಗುರುತಿಸಲು ಈಗಾಗಲೇ ಪ್ರಸ್ತಾಪ ಸಲ್ಲಿಸಲಾಗಿದೆ’ ಎಂದು ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ತಿಳಿಸಿದರು.
ಸೂಕ್ತ ದಾಖಲೆಯೊಂದಿಗೆ ಸಚಿವರ ಭೇಟಿ
‘ಚಂದ್ರವಳ್ಳಿ ಸ್ಮಾರಕಗಳು ಸಂರಕ್ಷಿತ ತಾಣವಾಗಬೇಕು ಎಂಬ ಒತ್ತಾಯ ನನ್ನದೂ ಆಗಿದೆ. ಜಿಲ್ಲೆಯ ಸಂಶೋಧಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ದಾಖಲೆ ಸಂಗ್ರಹಿಸುತ್ತೇನೆ. ಶೀಘ್ರ ಕೇಂದ್ರ ಸಂಸ್ಕೃತಿ ಸಚಿವರನ್ನು ಭೇಟಿಯಾಗಿ ಕೇಂದ್ರ ಸಂರಕ್ಷಿತ ತಾಣವನ್ನಾಗಿ ಘೋಷಣೆ ಮಾಡುವಂತೆ ಮನವಿ ಮಾಡುತ್ತೇನೆ’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು. ‘ಚಿತ್ರದುರ್ಗದ ಅಸ್ಮಿತೆಯಾಗಿರುವ ಕಲ್ಲಿನಕೋಟೆ ಹಾಗೂ ಚಂದ್ರವಳ್ಳಿ ಸ್ಮಾರಕಗಳ ಸಮಗ್ರ ಅಭಿವೃದ್ಧಿಗೆ ಬೃಹತ್ ಯೋಜನೆ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಲಾಗುವುದು’ ಎಂದರು.
ಅನಧಿಕೃತವಾಗಿ ಹಣ ವಸೂಲಿ
‘ಅಂಕಲಿ ಗುರುಪೀಠದ ಬಳಿ ಕೆಲವರು ಪ್ರವಾಸಿ ಮಾರ್ಗದರ್ಶಕರ ಹೆಸರಿನಲ್ಲಿ ಪ್ರವಾಸಿಗರಿಂದ ಅತೀ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಟಾರ್ಚ್ ಬೆಳಕಿನಲ್ಲಿ 80 ಅಡಿ ಆಳದ ಗುಹೆಗೆ ಕರೆದೊಯ್ಯುತ್ತಾರೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ತರಬೇತಿ ಪಡೆದ ಮಾರ್ಗದರ್ಶಕರನ್ನು ನಿಯೋಜನೆ ಮಾಡಬೇಕು. ದರ ನಿಗದಿ ಮಾಡಬೇಕು’ ಎಂದು ಪ್ರವಾಸಿಗರೊಬ್ಬರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.