ಚಿತ್ರದುರ್ಗ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಸೋಮವಾರ ನಗರದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣಕ್ಕೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿತು. ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳ ಕಲಿಕೆ ಕಂಡು ಕಳವಳ ವ್ಯಕ್ತಪಡಿಸಿತು.
ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದ ‘ಕೊಳಕು, ಗಲೀಜು; ಸರ್ಕಾರಿ ಪಿಯು ಕಾಲೇಜು’ ವರದಿ ಗಮನಿಸಿದ ಆಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ‘ಪಿಯು ಕಾಲೇಜು, ಪ್ರೌಢಶಾಲೆ ಕಟ್ಟಡ ಶಿಥಿಲಗೊಂಡಿದ್ದು ಅತ್ಯಂತ ಅಪಾಯಕಾರಿ ವಾತಾವರಣದಲ್ಲಿ ಕಲಿಯುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಾವು ಕೂಡ ಸರ್ಕಾರಕ್ಕೆ ವರದಿ ನೀಡುತ್ತೇವೆ’ ಎಂದು ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
‘ಸರ್ಕಾರದ ನಿರ್ದೇಶನದಂತೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಬೇಕು. ಮೊಟ್ಟೆ ಸೇವನೆ ಮಾಡದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ವಿತರಿಸಬೇಕು. ಆದರೆ, ಈ ಶಾಲೆಯಲ್ಲಿ ವಾರದಲ್ಲಿ 3 ದಿನ ಮಾತ್ರ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ನಮಗೆ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.
‘ಶಾಲೆ ಹಾಗೂ ಕಾಲೇಜಿನಲ್ಲಿ ಸರಿಯಾಗಿ ದಾಖಲಾತಿ ವಹಿ ನಿರ್ವಹಣೆ ಮಾಡಿಲ್ಲ. 800 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ವಾಸ್ತವವಾಗಿ ದಾಖಲಾಗಿ ಪರಿಶೀಲಿಸಿದಾಗ 580 ಮಕ್ಕಳು ಕಲಿಯುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಒಂದೇ ಶೌಚಾಲಯವಿದ್ದು ಶೌಚಕ್ಕೆ ತೆರಳಿದರೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಗಂಡುಮಕ್ಕಳಿಗೆ ಒಂದೂ ಶೌಚಾಲಯವಿಲ್ಲದ ಕಾರಣ ಬಯಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಕಾಲೇಜು, ಪ್ರೌಢಶಾಲೆಗಳ ಕಟ್ಟಡದ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದು, ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದರು.
ಪ್ರಗತಿ ಪರಿಶೀಲನಾ ಸಭೆ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಆಯೋಗ ಪ್ರಗತಿ ಪರಿಶೀಲನಾ ಸಭೆ ನಡೆಸಿತು.
ಈ ವೇಳೆ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 2020ರಿಂದ 2024ರ ಅವಧಿಯಲ್ಲಿ 8,093ಕ್ಕೂ ಅಧಿಕ ಬಾಲ ಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಈ ವರ್ಷ 341 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದೆ. ಆದರೆ 40 ಪ್ರಕರಣಗಳಲ್ಲಿ ಮಾತ್ರ ವೈದ್ಯಾಧಿಕಾರಿಗಳು ಎಫ್‌ಐಆರ್ ದಾಖಲಿಸಲು ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ನಿರ್ಲಕ್ಷ್ಯದ ನಡೆಯಾಗಿದೆ’ ಎಂದು ಆರೋಪಿಸಿದರು.
‘ವೈದ್ಯಾಧಿಕಾರಿಗಳೇ ನೇರವಾಗಿ ಎಫ್‌ಐಆರ್ ದಾಖಲಿಸಬೇಕಿಲ್ಲ. ಆದರೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಯಾವುದೇ ಸಾಮಾಜಿಕ ಒತ್ತಡಗಳಿಗೆ ಮಣಿಯುವ ಅವಶ್ಯಕತೆ ಇಲ್ಲ. ಮಕ್ಕಳ ರಕ್ಷಣೆಗಾಗಿ ಇರುವ ಕಾಯ್ದೆಗಳನ್ನು ಪಾಲನೆ ಮಾಡಲೇಬೇಕು. ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದು ವೇಳೆ ವೈದ್ಯಾಧಿಕಾರಿಗಳು ಮಾಹಿತಿ ನೀಡದಿದ್ದರೆ, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ‘ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಕೃಷಿ ಹೊಂಡಗಳ ಸುತ್ತ ಹಾಗೂ ಕಲ್ಲು ಕ್ವಾರಿಗಳ ಸುತ್ತ ತಂತಿ ಬೇಲಿ ಅಳವಡಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ನೀಡುವ ಮುನ್ನ, ಕುಟುಂಬದಲ್ಲಿ ಬಾಲ್ಯ ವಿವಾಹವಾದರೆ ಸವಲತ್ತುಗಳನ್ನು ಹಿಂಪಡೆಯುವುದಾಗಿ ಷರತ್ತು ವಿಧಿಸಬೇಕು’ ಎಂದು ಹೇಳಿದರು.
ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದ ಇಂದಿರ ಗಾಂಧಿ ವಸತಿ ಶಾಲೆಯಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಕೂಡಲೇ ಎಫ್‌ಐಆರ್ ದಾಖಲಿಸಬೇಕು. ಅಧಿಕಾರಿಗಳ ವಿರುದ್ದ ಕೈಗೊಂಡ ಶಿಸ್ತು ಕ್ರಮದ ಕುರಿತು ವರದಿ ನೀಡುವಂತೆ ಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿತು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಶೇಖರಗೌಡ ರಾಮತ್ನಾಳ, ಅರ್ಪಣಾ ಕೊಳ್ಳಾ, ಜಿ.ಪಂ. ಸಿಇೊ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿವೈಎಸ್‌ಪಿ ಪಿ.ಕೆ. ದಿನಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್, ಜಿಲ್ಲಾ ಮಕ್ಕಳಾ ಕಲ್ಯಾಣ ಸಮಿತಿ ಅಧ್ಯಕ್ಷೆ ಶೀಲಾ ಇದ್ದರು.
ತಾಯಿ– ಮಕ್ಕಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ ನಗರದ ತಾಯಿ– ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ಆಯೋಗದ ಅಧ್ಯಕ್ಷರು ಸದಸ್ಯರು ಅಲ್ಲಿಯ ವ್ಯವಸ್ಥೆಗಳನ್ನು ಕಂಡು ಮರುಗಿದರು. ಬಾಣಂತಿಯರು ಮಕ್ಕಳಿಗೆ ಸೌಲಭ್ಯ ಇಲ್ಲದಿರುವುದನ್ನು ಕಣ್ಣಾರೆ ಕಂಡರು. ಒಂದೇ ವಾರ್ಮರ್‌ನಲ್ಲಿ 2–3 ಮಕ್ಕಳನ್ನು ಹಾಕಿರುವುದನ್ನು ಕಂಡು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಹೊಸದಾಗಿ ನಿರ್ಮಿಸಿರುವ ಬಾಣಂತಿಯ ವಾರ್ಡ್‍ನಲ್ಲಿ ಬಿಸಿನೀರಿನ ವ್ಯವಸ್ಥೆಯಿಲ್ಲ. ಸ್ನಾನ ಮಾಡಲು ಪ್ರತ್ಯೇಕ ಸ್ನಾನ ಗೃಹವಿಲ್ಲ. ನವಜಾತ ಶಿಶುಗಳ ತ್ರೀವ ನಿಗಾ ಘಟಕಕ್ಕೆ ಬೀಗ ಹಾಕಲಾಗಿದೆ. ಮಕ್ಕಳು ಹಾಗೂ ಬಾಣಂತಿಯರ ಆರೋಗ್ಯ ಸುಧಾರಿಸುವ ಬದಲು ಹದಗೆಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಅವರು ಸದಾ ತಮ್ಮ ಖಾಸಗಿ ಆಸ್ಪತ್ರೆ ಶಾಲೆಯಲ್ಲೇ ಇರುತ್ತಾರೆ. ಅವರನ್ನು ಕಾಣಲು ನರ್ಸಿಂಗ್ ಹೋಂ ಶಾಲೆಗೆ ತೆರಳಬೇಕು ಎಂದು ಹಲವರು ದೂರಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.