ADVERTISEMENT

ಕೋಡಿಯಲ್ಲಿ ಮಕ್ಕಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 2:37 IST
Last Updated 5 ಸೆಪ್ಟೆಂಬರ್ 2022, 2:37 IST
ಹೊಸದುರ್ಗದ ಆರನಕಣಿವೆ ಬಳಿ ಕೋಡಿ ವೀಕ್ಷಿಸಲು ಬಂದ ಜನಸಾಗರ
ಹೊಸದುರ್ಗದ ಆರನಕಣಿವೆ ಬಳಿ ಕೋಡಿ ವೀಕ್ಷಿಸಲು ಬಂದ ಜನಸಾಗರ   

ಹೊಸದುರ್ಗ: ತಾಲ್ಲೂಕಿನ ಆರನಕಣಿವೆಯ ಜಲಾಶಯ ಕೋಡಿ ಬಿದ್ದಿರುವುದನ್ನು ನೋಡಲು ಜನಸಾಗರವೇ ಹರಿದುಬರುತ್ತಿದೆ.

ಭಾನುವಾರ ರಜಾ ದಿನವಾಗಿದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪಾಲಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕೋಡಿ ಜಾಗಕ್ಕೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು.

ಕೋಡಿಗೆ ಗಂಗಾಪೂಜೆ ನೇರವೇರಿಸುತ್ತಿದ್ದ ಭಕ್ತರು, ‌ಮತ್ತೊಂದೆಡೆ ಮಕ್ಕಳೊಂದಿಗೆ ಪಾಲಕರು ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಅಂಗಡಿಗಳದ್ದೇ ಕಾರುಬಾರು: ಕೋಡಿ ಸುತ್ತ ಐಸ್ ಕ್ರೀಂ, ಪಾಪ್‌ಕಾರ್ನ್, ಕಬ್ಬಿನ ಹಾಲು, ಮಕ್ಕಳ ಆಟಿಕೆ ಸೇರಿದಂತೆ ಹಲವು ಅಂಗಡಿಗಳ ಸಾಲು ಇತ್ತು.

‘ಕೊರೊನಾ ಅವಧಿಯಲ್ಲಿ ಹೊರ ಹೋಗಲು ಆಗಿರಲಿಲ್ಲ. ಬೇರೆ ಸ್ಥಳಗಳಿಗೆ ಹೋದರೆ ಬೇಗ ಹಿಂತಿರುಗಬೇಕಿತ್ತು. ನಮ್ಮ ತಾಲ್ಲೂಕಿನ ಇಂತಹ ದೃಶ್ಯ ನೋಡಲು ಸೊಗಸಾಗಿದೆ’ ಎಂದು ಪುಟಾಣಿ ಇಂಚರ ಹೇಳಿದಳು.

‘ಹಲವುವರ್ಷಗಳಿಂದ ಇಲ್ಲಿ ಅಂಗಡಿ ಹಾಕಿಕೊಂಡಿದ್ದೇವೆ. ರಂಗನಾಥಸ್ವಾಮಿ ದೇವಾಲಯಕ್ಕೆ ಮಾತ್ರ ಜನರು ಬರುತ್ತಿದ್ದರು. ಈಗ ಕೋಡಿ ಬಿದ್ದಿರುವ ಕಾರಣ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ’ ಎಂದು ವ್ಯಾಪಾರಿ ಗಂಗಮ್ಮ ಸಂತಸ ಹಂಚಿಕೊಂಡರು.

ಶಾಸಕ ಭೇಟಿ: ‘88 ವರ್ಷಗಳ ನಂತರ ಜಲಾಶಯ ಕೋಡಿ ಬಿದ್ದಿದ್ದು, ಸಂತಸ ತಂದಿದೆ. ಇದರಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ಕೋಡಿ ವೀಕ್ಷಿಸಿದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿ‌ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.