ADVERTISEMENT

ದಲಿತ ಪದ ಜಾತಿ ಸೂಚಕವಲ್ಲ: ಸಾಹಿತಿ ಡಾ.ಎಚ್‌.ಟಿ.ಪೋತೆ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:49 IST
Last Updated 2 ಜನವರಿ 2019, 16:49 IST
ಚಿತ್ರದುರ್ಗದಲ್ಲಿ ನಡೆಯುತ್ತಿರುವ ವಿಮರ್ಶಾ ಕಮ್ಮಟದಲ್ಲಿ ಬುಧವಾರ ಸಾಹಿತಿ ಡಾ.ಎಚ್‌.ಟಿ.ಪೋತೆ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ, ಕಮ್ಮಟದ ನಿರ್ದೇಶಕ ಡಾ.ಎಸ್‌.ಎಂ.ಮುತ್ತಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಎಂ.ಗುರುನಾಥ್‌ ಇದ್ದಾರೆ
ಚಿತ್ರದುರ್ಗದಲ್ಲಿ ನಡೆಯುತ್ತಿರುವ ವಿಮರ್ಶಾ ಕಮ್ಮಟದಲ್ಲಿ ಬುಧವಾರ ಸಾಹಿತಿ ಡಾ.ಎಚ್‌.ಟಿ.ಪೋತೆ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ, ಕಮ್ಮಟದ ನಿರ್ದೇಶಕ ಡಾ.ಎಸ್‌.ಎಂ.ಮುತ್ತಯ್ಯ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಎಂ.ಗುರುನಾಥ್‌ ಇದ್ದಾರೆ   

ಚಿತ್ರದುರ್ಗ: ದಲಿತ ಎಂಬುದು ಜಾತಿ ಸೂಚಕವಲ್ಲ. ಅದೊಂದು ಮನೋಧರ್ಮ, ಬಿಡುಗಡೆಯ ಮಾರ್ಗ ಎಂದು ಸಾಹಿತಿ ಡಾ.ಎಚ್‌.ಟಿ. ಪೋತೆ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಆಯೋಜಿಸಿದ ‘ವಿಮರ್ಶಾ ಕಮ್ಮಟ’ದಲ್ಲಿ ‘ದಲಿತ ಸಾಹಿತ್ಯ ವಿಮರ್ಶೆ ಮತ್ತು ಸಾಮಾಜಿಕ ಪ್ರಜ್ಞೆಯ ಸ್ವರೂಪ’ದ ಕುರಿತು ಬುಧವಾರ ಮಾತನಾಡಿದರು.

‘ದಲಿತ ಎಂಬುದು ಸೀಮಿತ ಪ್ರಜ್ಞೆಯೂ ಅಲ್ಲ. ಅದೊಂದು ಅರಿವು. ಅಲ್ಲಿ ಮಾನವೀಯ ಜಾಗೃತಿ ಗೋಚರವಾಗುತ್ತದೆ. ಅದು ವೈಚಾರಿಕ ಪರಂಪರೆಯಲ್ಲಿ ಸೃಷ್ಟಿಯಾಗಿದೆ. ಈ ಸಮೂಹ ಪ್ರಜ್ಞೆಯನ್ನು ಪುನರ್‌ ಮನನ ಮಾಡಿಕೊಳ್ಳುವ ತುರ್ತು ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘1970ರ ದಶಕದಲ್ಲಿ ತಳಸಮುದಾಯದ ಧ್ವನಿಯಾಗಿ ಹುಟ್ಟಿಕೊಂಡ ದಲಿತ ಚಳವಳಿಯ ಭಾಗವಾಗಿ ಸಾಹಿತ್ಯವೂ ಸೃಷ್ಟಿಯಾಯಿತು. ಈ ಸಾಹಿತ್ಯದಲ್ಲಿ ನೋವು, ಅಪಮಾನಗಳು ವ್ಯಕ್ತವಾಗಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯನ್ನು ಇದು ಅಪ್ಪಿಕೊಳ್ಳುತ್ತದೆ. ತುಳಿತಕ್ಕೊಳಗಾದ ಸಮುದಾಯದ ಬಿಡುಗಡೆಯ ಸಂಕೇತವಾಗಿ ಸಾಹಿತ್ಯ ಕಾಣಿಸುತ್ತಿದೆ’ ಎಂದು ವಿವರಿಸಿದರು.

‘ಮನುಷ್ಯನ ಬಿಡುಗಡೆಯ ಮಾರ್ಗವಾಗಿ ತೋರುವ ದಲಿತ ಸಾಹಿತ್ಯ, ವಿಮರ್ಶೆಯನ್ನೂ ಅಂತರ್ಗತ ಮಾಡಿಕೊಂಡಿದೆ. ಅಲ್ಲಿ ಜಾತಿ ಅಸಮಾನತೆಯ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಆರಂಭದಲ್ಲಿ ದಲಿತ ಸಾಹಿತ್ಯವನ್ನು ಹಿಗ್ಗಾ–ಮುಗ್ಗ ವಿಮರ್ಶೆ ಮಾಡಲಾಗಿದೆ. ಸಾಹಿತ್ಯದ ಪಂಥ ಎಂಬುದನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬಹುತೇಕರಲ್ಲಿ ಇರಲಿಲ್ಲ. ಸಿದ್ದಲಿಂಗಯ್ಯ ಅವರ ಕಾವ್ಯ, ದೇವನೂರು ಮಹಾದೇವ ಅವರ ಕಾದಂಬರಿಯನ್ನು ಕೂಡ ನಿರಾಕರಣೆ ಮಾಡಲಾಗಿತ್ತು’ ಎಂದು ನೆನಪಿಸಿಕೊಂಡರು.

‘ಬಹು ಬೇಗ ಅಕ್ಷರ ಜ್ಞಾನವನ್ನು ಪಡೆದ ದಕ್ಷಿಣ ಕರ್ನಾಟಕದ ದಲಿತ ಸಾಹಿತಿಗಳ ಮೇಲೆ ಆಗಿರುವ ಪ್ರಭಾವಗಳೇ ವಿಭಿನ್ನ. ಜ್ಯೋತಿ ಬಾಪುಲೆ, ಅಂಬೇಡ್ಕರ್‌ ಸೇರಿ ಅನೇಕರು ಉತ್ತರ ಕರ್ನಾಟಕದ ದಲಿತ ಸಾಹಿತಿಗಳನ್ನು ಪ್ರಭಾವಿಸಿದ್ದಾರೆ. ದಲಿತ ವಿಮರ್ಶೆಗೆ ಸೀಮಿತ ಮಾನದಂಡಗಳಿಲ್ಲ. ಅದು ವ್ಯಕ್ತಿ, ಕಾಲ ಹಾಗೂ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಕಾಯಕ ಹಿನ್ನೆಲೆಯ ವಚನಕಾರರು ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಅಂಬೇಡ್ಕರ್‌ ವಿಚಾರಧಾರೆಯಿಂದ ಪ್ರತಿಭಟನೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಯಿತು. ಪ್ರಜ್ಞೆಗೆ ಸಾಣೆ ಹಿಡಿಯುವ ಶಕ್ತಿ ಅಂಬೇಡ್ಕರ್‌ ಬರಹಕ್ಕೆ ಇದೆ. ವಿರಾಟ ಪರ್ವ, ಶ್ರೀಕೃಷ್ಣ, ಶ್ರೀರಾಮನ ಅಸ್ತಿತ್ವದ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ. ಅಂಬೇಡ್ಕರ್‌ ಬಾರದೇ ಹೋಗಿದ್ದರೆ ಏಕಲವ್ಯನಂತೆ ದಲಿತ ಸಮುದಾಯ ಕರಗಿ ಹೋಗುತ್ತಿತ್ತು’ ಎಂದರು.

‘ಜಾಗತೀಕರಣ ಬಂದರೂ ದಲಿತರಿಗೆ ದೇಗುಲಗಳಿಗೆ ಪ್ರವೇಶಿ ಸಿಕ್ಕಿಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕೇಳುತ್ತಲೇ ಇದ್ದೇವೆ. ಅಂಬೇಡ್ಕರ್‌ ಕಣ್ಣುಗಳಿಂದ ನೋಡಿದಾಗ ಮಾತ್ರ ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಶೋಷಿತರ ಧ್ವನಿ ಆಲಿಸಲಿಲ್ಲ’
ನವ್ಯ ಸಾಹಿತ್ಯದ ವಿಮರ್ಶಕರಿಗೆ ರೂಪಕ, ಭಾಷೆ ಹಾಗೂ ಪಾತ್ರಗಳು ಮುಖ್ಯವಾದವೇ ಹೊರತು ತಳ ಸಮುದಾಯದ ಶೋಷಿತರ ಧ್ವನಿಯನ್ನು ಆಲಿಸಲಿಲ್ಲ’ ಎಂದು ಡಾ.ಸುರೇಶ ನಾಗಲಮಡಿಕೆ ಬೇಸರ ವ್ಯಕ್ತಪಡಿಸಿದರು.

‘ನವ್ಯ ವಿಮರ್ಶೆಯ ನೆಲೆ–ಬೆಲೆ’ ಬಗ್ಗೆ ಉಪನ್ಯಾಸ ನೀಡಿದ ಅವರು, ‘ಸಾಹಿತ್ಯದ ಪಠ್ಯವನ್ನು ಸಾಹಿತ್ಯದ ನೆಲೆಯಲ್ಲಿ ಮಾತ್ರ ವಿವರಿಸಿತು. ಕೊರಗುತ್ತಿರುವ ಪಾತ್ರಗಳು ಇವರ ಕಣ್ಣಿಗೆ ಕಾಣಲೇ ಇಲ್ಲ. ದಲಿತ ಮತ್ತು ಬಂಡಾಯದ ಬರಹಗಾರರು ಇದನ್ನು ಪ್ರಶ್ನಿಸಿದ್ದಾರೆ’ ಎಂದು ಹೇಳಿದರು.

‘ಈ ವಿಮರ್ಶೆ ಪಾಶ್ಚಿಮಾತ್ಯದ ಅನುಕರಣೆ ಅಲ್ಲ. ಕನ್ನಡ ಸಾಹಿತ್ಯದಲ್ಲಿ ಬಹು ಹಿಂದಿನಂದಲೂ ಈ ಮಾದರಿ ಬೆಳೆದು ಬಂದಿತ್ತು. ಭಾಷೆಯ ಮಹತ್ವವನ್ನು ತಿಳಿಸಿತು. ನಿಕಟ ಓದಿನ ಪರಿಚಯ ಮಾಡಿಸಿತು. ಇದಕ್ಕೆ ನಿರ್ದಿಷ್ಟ ಗಡಿ ಇರಲಿಲ್ಲ’ ಎಂದರು.

‘ಬಂಡಾಯ ಪ್ರಜ್ಞೆ ಅಂತರ್ಗತ’
ಕನ್ನಡ ಸಾಹಿತ್ಯದಲ್ಲಿ ಬಂಡಾಯ ಪ್ರಜ್ಞೆ ಅಂತರ್ಗತವಾಗಿದೆ. ವಚನ, ಕೀರ್ತನೆ ಹಾಗೂ ಪಂಪನ ಸಾಹಿತ್ಯದಲ್ಲಿಯೂ ಬಂಡಾಯವಿದೆ. ಅದನ್ನು ಗುರುತಿಸಿದ್ದು ಮಾತ್ರ ಇತ್ತೀಚೆಗೆ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ತಿಳಿಸಿದರು.

‘ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು’ ಕುರಿತು ಮಾತನಾಡಿದ ಅವರು, ‘ದೇವರು, ಧರ್ಮ ನಿಸರ್ಗ ಸತ್ಯಗಳಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸಿದೆ. ಪುರೋಹಿತಶಾಹಿ, ಬಂಡವಾಳಶಾಹಿ ಆರ್ಭಟವನ್ನು ಮೂಲೆಗೆ ತಳ್ಳಿ ಕುಲುಷಿತಗೊಂಡಿರುವ ಬದುಕನ್ನು ಹಸನ ಮಾಡಲು ಪ್ರಯತ್ನಿಸಿದೆ’ ಎಂದು ಹೇಳಿದರು.

‘ಬಂಡಾಯ ಎಂಬುದು ಜಗಳವಲ್ಲ. ಪ್ರಶ್ನಿಸುವ ಪ್ರವೃತಿಯನ್ನು ಬೆಳೆಸುವ ಮನೋಧರ್ಮ. ಸಾಂಸ್ಕೃತಿಕ ಒಂಟಿತನ, ಕೀಳರಿಮೆಯನ್ನು ತೊಲಗಿಸಿ ಪ್ರತಿಭಾವಂತರಿಗೆ ಆತ್ಮಸ್ಥೈರ್ಯ ತುಂಬಿದೆ. ಮರಾಠಿ ಹಾಗೂ ತೆಲುಗು ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದೆ’ ಎಂದರು.

*
ಪ್ರಭುತ್ವದಿಂದ ಬರುವ ತತ್ವಗಳು ಪ್ರಭುತ್ವವನ್ನು ಕಾಪಾಡುವ ಉದ್ದೇಶ ಹೊಂದಿರುತ್ತವೆ. ಯಜಮಾನಿಕೆ ಕ್ರೌರ್ಯದ ಸ್ವರೂಪದಲ್ಲಿರದೇ ಗುಪ್ತವಾಗಿ ಅಸ್ತಿತ್ವ ಕಂಡುಕೊಳ್ಳುತ್ತದೆ.
-ಡಾ.ನಟರಾಜ್‌ ಹುಳಿಯಾರ್‌, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.