
ಚಳ್ಳಕೆರೆ: ತಾಲ್ಲೂಕಿನಲ್ಲಿ ನೋಂದಣಿ ಹೊಂದಿರುವ ಎಲ್ಲ ಸಮುದಾಯದ ಸಂಘಗಳಿಗೆ ನಿವೇಶನ ಒದಗಿಸಬೇಕು ಎಂಬುದು ಶಾಸಕ ಟಿ.ರಘುಮೂರ್ತಿ ಅವರ ಆಶಯವಾಗಿದ್ದು, ಅರ್ಹ ಜಾತಿ ಸಮುದಾಯಗಳ ಮುಖಂಡರು ತಾಲ್ಲೂಕು ಕಚೇರಿಗೆ ಫೆ. 15ರೊಳಗೆ ತಮ್ಮ ಸಂಘದ ಪತ್ರದ ಮೂಲಕ ಮನವಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸಮುದಾಯಗಳ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು.
‘ಶಾಸಕರ ಆದೇಶದ ಮೇರೆಗೆ ಸಭೆ ನಡೆಸಿದ್ದು ತಾಲ್ಲೂಕಿನಲ್ಲಿ ಎಲ್ಲ ಅರ್ಹ ಸಮುದಾಯಗಳಿಗೆ ನಿವೇಶನ ಕಲ್ಪಿಸಲಾಗುವುದು. ಆದರೆ, ಉದ್ದೇಶ ಉತ್ತಮವಾಗಿರಬೇಕು. ಸ್ವ ಹಿತಾಸಕ್ತಿಗೆ ನೀಡಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ತಾಲೂಕಿನಲ್ಲಿರುವ ಗೋವುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಸ್ಥಳವನ್ನು ನಿಗದಿಪಡಿಸಿ ಉಳಿದ ಜಾಗವನ್ನು ಹಂಚಲು ಆದೇಶ ನೀಡಿರುವುದರಿಂದ ತಾಲ್ಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳವನ್ನು ಮೀಸಲಿಟ್ಟು ನಂತರದ ಸ್ಥಳವನ್ನು ಸರ್ಕಾರದ ಮಾನದಂಡಗಳ ಪ್ರಕಾರ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.
‘ಆದ್ದರಿಂದ ಎಲ್ಲ ಸಮುದಾಯಗಳ ಮುಖಂಡರು ತಮ್ಮ ನೋಂದಾಯಿತ ಸಮುದಾಯದ ಪತ್ರದಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಲು ಅವಕಾಶವಿದೆ. ಇದರ ಸೌಲಭ್ಯವನ್ನು ಎಲ್ಲ ಸಮುದಾಯಗಳೂ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಇಒ ಶಶಿಧರ್ ಮಾತನಾಡಿ, ‘ಪಂಚಾಯಿತಿ ಹಂತದಲ್ಲಿ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಮೊದಲು ಸಂಬಂಧಪಟ್ಟ ಜಾತಿ ಸಮುದಾಯಗಳು ಅರ್ಜಿ ಸಲ್ಲಿಸಿದಾಗ ಪರಿಶೀಲನೆ ನಡೆಸಿ ಮಂಜೂರು ಮಾಡುತ್ತೇವೆ. ಬೆಲೆ ನಿಗದಿ ಅಥವಾ ಉಚಿತವಾಗಿ ನೀಡಬೇಕು ಎಂದಾದಲ್ಲಿ ಅದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ತಾಲ್ಲೂಕಿನಲ್ಲಿ ಲಭ್ಯವಿರುವ ಸಿಎ ನಿವೇಶನಗಳಲ್ಲಿ ಹಂಚಿಕೆ ಮಾಡಲು ನಿರ್ಧರಿಸಿದ್ದು, ಸಮುದಾಯದ ಮುಖಂಡರು ತಮ್ಮ ಅರ್ಹ ಪತ್ರದಲ್ಲಿ ಮನವಿ ಸಲ್ಲಿಸಬೇಕು’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿದರು. ಮಂಜುಳಮ್ಮ, ನಾಗರಾಜ್, ಎಸ್. ರಾಜಣ್ಣ, ಪೌರಾಯುಕ್ತ ಜಗರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.