ಚಿತ್ರದುರ್ಗ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೇ ಉಸಿರಾಡುವ ಜೋಡಿಯೊಂದು ಕೋಟೆನಾಡಿನ ಮಕ್ಕಳ ಮನಸ್ಸಿನಲ್ಲಿ ಸಪ್ತಸ್ವರಗಳ ಬೀಜಬಿತ್ತಿದೆ. ಸಂಗೀತದಿಂದಲೇ ಒಲಿದು ಒಂದಾದ ದಂಪತಿ ‘ಸರಿಗಮಪ ಸಂಗೀತ ಶಾಲೆ’ಯ ಮೂಲಕ ಜಿಲ್ಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪರಿಸರ ಸೃಷ್ಟಿಸುತ್ತಿದೆ. ಗಾಯನ, ಹಾರ್ಮೋನಿಯಂ, ತಬಲಾ ವೈಲಿನ್ ತರಬೇತಿ ನೀಡುತ್ತಿರುವ ಈ ಸತಿ–ಪತಿ ಕಳೆದ ನಾಲ್ಕು ವರ್ಷದಿಂದ ದುರ್ಗದ ಮಕ್ಕಳು ಹಾಗೂ ಪೋಷಕರ ಮನದಲ್ಲಿ ಮನೆ ಮಾಡಿಕೊಂಡಿದ್ದಾರೆ.
ಪಂಡಿತ್ ಸುಜೀತ್ ಸುರೇಶ್ ಕುಲಕರ್ಣಿ ಹಾಗೂ ವಿದುಷಿ ಟಿ.ಭವ್ಯರಾಣಿ ಸುಜೀತ್ ನಗರದ ತಮಟಕಲ್ಲು ರಸ್ತೆಯ ಮರಳುಸಿದ್ದೇಶ್ವರ ಬಡಾವಣೆಯಲ್ಲಿ ‘ಪರಮರತ್ನ ಸಂಗೀತ ಸಂಸ್ಥೆ’ ಸ್ಥಾಪಿಸಿ ಹಲವು ಸಂಗೀತ ಚಟುವಟಿಕೆ ನಡೆಸುತ್ತಾ ಬಂದಿದ್ದಾರೆ. ಸರಿಗಮಪ ಸಂಗೀತ ಶಾಲೆಯ ಮೂಲಕ ನಗರದ, ಸುತ್ತಮುತ್ತಲಿನ ಪ್ರದೇಶದ ನೂರಾರು ಮಕ್ಕಳಿಗೆ ಸಂಗೀತ ಜ್ಞಾನ ಧಾರೆ ಎರೆಯುತ್ತಿದ್ದಾರೆ. 2021ರಲ್ಲಿ ಕೇವಲ 10 ಮಕ್ಕಳಿಂದ ಆರಂಭವಾದ ಸಂಸ್ಥೆ ಇಂದು 125ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಕಂಗೊಳಿಸುತ್ತಿದೆ.
ಸುಜೀತ್ ಹಾಗೂ ಭವ್ಯರಾಣಿ ಅವರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯಲ್ಲಿ ಗುರು ಪಂಚಾಕ್ಷರ ಗವಾಯಿ, ಪುಟ್ಟರಾಜ ಗವಾಯಿಗಳ ಆಶೀರ್ವಾದದಲ್ಲಿ ಸಂಗೀತ ಕಲಿತವರು. ಉನ್ನತ ಶಿಕ್ಷಣ ಹಾಗೂ ವಿದ್ವತ್‌ನೊಂದಿಗೆ ದುರ್ಗದಲ್ಲಿ ನೆಲೆಗೊಂಡಿರುವ ಈ ದಂಪತಿ ನಾಡಿನ ಹಲವು ಉತ್ಸವಗಳಲ್ಲಿ ಸಂಗೀತ ಸುಧೆ ಹರಿಸಿದ್ದಾರೆ. ಜೊತೆಗೆ ಕೋಟೆನಾಡಿನಲ್ಲಿ ವಿವಿಧ ಸಂಗೀತ ಕಾರ್ಯಕ್ರಮ ಆಯೋಜಿಸಿ ಸ್ಥಳೀಯರಲ್ಲೂ ಹಿಂದೂಸ್ತಾನಿ ಸಂಗೀತದತ್ತ ಆಸಕ್ತಿ ಬೆಳೆಸುತ್ತಾ ಮುನ್ನಡೆಯುತ್ತಿದ್ದಾರೆ.
ಗವಾಯಿಗಳ ಜಯಂತಿ, ಸ್ಮರಣೋತ್ಸವ, ಸಂಗೀತ ಶಾಲೆಯ ವಾರ್ಷಿಕೋತ್ಸವ, ತಿಂಗಳ ಸಂಗೀತ ಕಾರ್ಯಕ್ರಮಗಳ ಮೂಲಕ ವಿವಿಧ ಕಾರ್ಯಕ್ರಮ ನೀಡುತ್ತಿದ್ದಾರೆ. ಖ್ಯಾತನಾಮ ಸಂಗೀತ ಕಲಾವಿದರನ್ನು ದುರ್ಗಕ್ಕೆ ಆಹ್ವಾನಿಸಿ ಕಛೇರಿ ಆಯೋಜಿಸಿದ್ದಾರೆ. ಹಾಡಿ, ನುಡಿಸುವ ಜೊತೆಗೆ ಸಂಘಟಕರಾಗಿಯೂ ಗುರುತಿಸಿಕೊಂಡಿರುವ ಇವರು ನಗರದ ಜನರಲ್ಲಿ ಸಂಗೀತ ಅಭಿರುಚಿ ಬೆಳೆಸುತ್ತಿದ್ದಾರೆ.
ಒಲಿದ ಹೃದಯಗಳು: ಬೆಳಗಾವಿ ಮೂಲದ ಸುರೇಶ್ ಕುಲಕರ್ಣಿ ಹಾಗೂ ಸಮನ ದಂಪತಿಯ ಪುತ್ರ ಸುಜೀತ್ ಕುಲಕರ್ಣಿ ಅವರು ಗದುಗಿನ ಅಣ್ಣಿಗೇರಿ ಗುರುಗಳ ಬಳಿ ಸ್ವರಾಭ್ಯಾಸ ಮಾಡಿದ್ದಾರೆ. ಗದುಗಿನಲ್ಲೇ ಬಿ.ಮ್ಯೂಸಿಕ್ ಪದವಿ ಪಡೆದಿದ್ದಾರೆ. ನಂತರ ಧಾರವಾಡಕ್ಕೆ ಬಂದ ಅವರು ಕರ್ನಾಟಕ ವಿವಿಯಲ್ಲಿ ಎಂ.ಮ್ಯೂಸಿಕ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಧಾರವಾಡದ ಖ್ಯಾತ ಸಂಗೀತಗಾರ ಪಂಡಿತ್ ಡಿ.ಕುಮಾರದಾಸ ಅವರು ಸಂಗೀತಾಭ್ಯಾಸ ಮುಂದುವರಿಸಿದರು.
ಕಲಾವಿದರ ಕುಟುಂಬದಲ್ಲೇ ಅರಳಿದ ಭವ್ಯರಾಣಿ ಅವರು ಹೂವಿನಹಡಗಲಿ ಮೂಲದವರು. ಗಾಯಕರಾದ ಪರಮೇಶ್ವರಪ್ಪ– ನಾಗರತ್ನಮ್ಮ ದಂಪತಿ ಪುತ್ರಿ. ಎಂಸಿಎ ಪದವಿ ಪಡೆದು ಕಂಪನಿಯಲ್ಲಿ ಕೆಲಸ ಸಿಕ್ಕರೂ ಅವರ ಮನಸ್ಸು ಮಾತ್ರ ಸಂಗೀತದ ಜೊತೆಯಲ್ಲೇ ಇತ್ತು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲೇ ಭವ್ಯಾ ಅವರೂ ವೈಲಿನ್ ಕಲಿಕೆ ಆರಂಭಿಸಿದರು. ಬಿ.ಮ್ಯೂಸಿಕ್, ಎಂ.ಮ್ಯೂಸಿಕ್ ಪದವಿ ಪೂರೈಸಿ ಕರ್ನಾಟಕ ವಿವಿಯಿಂದ ‘ಆಲಾಪ್’ ವಿಷಯದಲ್ಲಿ ಪಿಎಚ್‌ಡಿಯನ್ನೂ ಪಡೆದರು. ಗದುಗಿನಲ್ಲಿ ಪಂ.ನಾರಾಯಣ ಹಿರೇಕೊಳಚಿ, ಧಾರವಾಡದಲ್ಲಿ ಪಂ.ಶಂಕರ ಕಬಾಡಿ ಅವರ ಬಳಿ ವೈಲಿನ್ ಕಲಿತರು.
ಸಂಗೀತಾಭ್ಯಾಸ ಮಾಡುತ್ತಲೇ ಸುಜೀತ್– ಭವ್ಯಾ ಹೃದಯಗಳು ಸ್ವರಪ್ರೇಮ ವಿವಾಹದಲ್ಲಿ ಒಂದಾದವು. ಸ್ವತಂತ್ರವಾಗಿ ನೆಲೆ ಕಂಡುಕೊಂಡ ದಂಪತಿ ತಮ್ಮ ಬದುಕಿನ ಸ್ವರ ಪಯಣಕ್ಕೆ ಐತಿಹಾಸಿಕ ನಗರ ಚಿತ್ರದುರ್ಗ ಆಯ್ಕೆ ಮಾಡಿಕೊಂಡರು. ನಾಲ್ಕು ವರ್ಷಗಳಿಂದ ಸಂಗೀತ ಪಾಠ ಮಾಡುತ್ತಿರುವ ದಂಪತಿ ಹಲವು ಮಕ್ಕಳು ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರೇರಣೆಯಾಗಿದ್ದಾರೆ. ಜೊತೆಗೆ ಮಕ್ಕಳಿಗೆ ವೇದಿಕೆ ನೀಡುತ್ತಲೂ ಬಂದಿದ್ದಾರೆ. ಆ ಮೂಲಕ ನಗರದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ವಾತಾವರಣ ಸೃಷ್ಟಿಸಿದ್ದಾರೆ. ಪಂ.ಸುಜೀತ್ ಕುಲಕರ್ಣಿ ಅವರೊಂದಿಗೆ ಮಾತನಾಡಲು ಮೊ; 9036676335 ಸಂಪರ್ಕಿಸಬಹುದು.
ಪಂಚಾಕ್ಷರ ಪುಟ್ಟರಾಜ ಗುರುಗಳ ಪದತಲದಲ್ಲಿ ಕಲಿತವರು ದೇಶವಿದೇಶಗಲ್ಲಿ ಸಂಗೀತದೊಂದಿಗೆ ಜೀವಿಸುತ್ತಿದ್ದಾರೆ. ಅದರಂತೆ ನಾವು ಕೂಡ ಚಿತ್ರದುರ್ಗದಲ್ಲಿ ಸಂಗೀತದ ಮೂಲಕ ಹೊಸ ಬೆಳಕು ಕಂಡಿದ್ದೇವೆ.– ಪಂ.ಸುಜೀತ್ ಸುರೇಶ್ ಕುಲಕರ್ಣಿ, ಸಂಗೀತಗಾರ
ಮನೆಮನೆಯಲ್ಲಿ ಸಂಗೀತ ಧಾರೆ
ಸೃಜನಾತ್ಮಕ ಸಂಗೀತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸುಜೀತ್– ಭವ್ಯಾ ಜೋಡಿ ಮನೆಮನೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಇದಕ್ಕೆ ದುರ್ಗದ ಹಲವು ಗಣ್ಯರು ಕೈಜೋಡಿಸಿದ್ದು ಈಗಾಗಲೇ ತಮ್ಮ ಮನೆಗಳಿಗೆ ಬಂದು ಕಾರ್ಯಕ್ರಮ ನೀಡುವಂತೆ ಆಹ್ವಾನಿಸಿದ್ದಾರೆ.
ಪಂಡಿತ್ ಪುಟ್ಟರಾಜ ಗವಾಯಿ ಸ್ಥಾಪಿತ ಪಂಚಾಕ್ಷರ ಗವಾಯಿಗಳ ನಾಟ್ಯಸಂಘದಿಂದ ನಾಟಕೋತ್ಸವವನ್ನೂ ಆಯೋಜಿಸಿ ಸ್ಥಳೀಯರಿಗೆ ಹೊಸ ಅನುಭವ ಉಣಬಡಿಸುತ್ತಿದ್ದಾರೆ. ಆ ಮೂಲಕ ನಾಟ್ಯ ನಾಟಕ ಸಂಗೀತ ಚಟುವಟಿಕೆಗಳನ್ನು ಒಂದಾಗಿಸುವ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.