ADVERTISEMENT

'ಪ್ರಜಾವಾಣಿ' ವರದಿ ಫಲಶೃತಿ: ಬಿ.ಡಿ.ವೃತ್ತದ ಮೂಲಕ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:38 IST
Last Updated 24 ಜನವರಿ 2026, 7:38 IST
ನಿರ್ಬಂಧ ಆದೇಶದಿಂದ ದಾವಣಗೆರೆ ರೈಲ್ವೆ ಗೇಟ್‌ನಲ್ಲಿ ಉಂಟಾಗುತ್ತಿದ್ದ ಬಸ್‌ ದಟ್ಟಣೆ ಬಗ್ಗೆ ಪ್ರವಾವಾಣಿ ವರದಿ ಪ್ರಕಟಿಸಿತ್ತು
ನಿರ್ಬಂಧ ಆದೇಶದಿಂದ ದಾವಣಗೆರೆ ರೈಲ್ವೆ ಗೇಟ್‌ನಲ್ಲಿ ಉಂಟಾಗುತ್ತಿದ್ದ ಬಸ್‌ ದಟ್ಟಣೆ ಬಗ್ಗೆ ಪ್ರವಾವಾಣಿ ವರದಿ ಪ್ರಕಟಿಸಿತ್ತು   

ಚಿತ್ರದುರ್ಗ: ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಿಂದ ಬಿ.ಡಿ.ರಸ್ತೆ ಮೂಲಕ ಬಸ್‌ ಸಂಚಾರ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿಗಳು ವಾಪಸ್‌ ಪಡೆದಿದ್ದಾರೆ. ಕಡೆಗೂ ಅವರು ರೈತರು, ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದಿದ್ದಾರೆ.

ಸಂಚಾರ ದಟ್ಟಣೆ, ಟ್ರಾಫಿಕ್‌ ನಿರ್ವಹಣೆ ಸಂಕಷ್ಟದ ಕಾರಣಗಳಿಂದ ಬಸ್‌ ನಿಲ್ದಾಣದಿಂದ ಚಳ್ಳಕೆರೆ ಗೇಟ್‌ವರೆಗೆ ಬಸ್‌ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಇದರಿಂದ ಶಾಲಾ, ಕಾಲೇಜುಗಳಿಂದ ಮನೆಗೆ ತೆರಳುವ ವಿದ್ಯಾರ್ಥಿಗಳು, ರೈತರು ಹಾಗೂ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗಿತ್ತು. ರೈತಸಂಘದ ಸದಸ್ಯರು ಈ ಆದೇಶದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು.

ಬಸ್‌ಗಳು ದಾವಣಗೆರೆ ರೈಲ್ವೆ ಗೇಟ್‌, ಮುರುಘಾ ಮಠದ ಮೂಲಕ ಹೆದ್ದಾರಿ ಪ್ರವೇಶಿಸುತ್ತಿದ್ದವು. ರೈಲ್ವೆ ಗೇಟ್‌ನಲ್ಲಿ ಬಸ್‌ಗಳು ಸಿಲುಕುತ್ತಿದ್ದವು. ಪ್ರಯಾಣಿಕರ ಪ್ರಯಾಣದ ಅವಧಿ ಹೆಚ್ಚುತ್ತಿತ್ತು. ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ನಿಷೇಧ ಆದೇಶವನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು ವಾಪಸ್‌ ಪಡೆದಿದ್ದಾರೆ. ಈಚೆಗೆ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ದಾವಣಗೆರೆ ರೈಲ್ವೆ ಗೇಟ್‌ನಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿರುವ, ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ ಹಲವು ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.