ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕೋಟೆ ನಾಡಲ್ಲಿ ಕನ್ನಡದ ಝೇಂಕಾರ

ವಿದ್ಯಾವಂತರಿಂದಲೇ ಭ್ರೂಣ ಹತ್ಯೆ; ಕೆ.ಆರ್‌. ಸಂಧ್ಯಾರೆಡ್ಡಿ ಕಳವಳ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:42 IST
Last Updated 18 ಫೆಬ್ರುವರಿ 2026, 6:42 IST
ಸಮ್ಮೇಳನಾಧ್ಯಕ್ಷೆ ಕೆ.ಆರ್‌. ಸಂಧ್ಯಾರೆಡ್ಡಿ ಅವರ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ಸಾಗಿತು
ಸಮ್ಮೇಳನಾಧ್ಯಕ್ಷೆ ಕೆ.ಆರ್‌. ಸಂಧ್ಯಾರೆಡ್ಡಿ ಅವರ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ಸಾಗಿತು   

ಚಿತ್ರದುರ್ಗ: ‘ಇತ್ತೀಚೆಗೆ ಮಹಿಳೆ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ವಿದ್ಯಾವಂತರೇ ಶಿಶು ಹತ್ಯೆ, ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ಕಳವಳಕಾರಿ’ ಎಂದು ಸಾಹಿತಿ ಕೆ.ಆರ್‌. ಸಂಧ್ಯಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರದ ಜಿ.ಜಿ. ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

‘ಬದಲಾದ ಸನ್ನಿವೇಶದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂಥದ್ದು. ಹೆಣ್ಣು ಮಕ್ಕಳ ಮೇಲೆ ಕುಟುಂಬದೊಳಗಿನ ಬಂಧು– ಬಾಂಧವರಿಂದಲೇ ಅತ್ಯಾಚಾರ ನಡೆಯುತ್ತಿದೆ. ವರದಕ್ಷಿಣೆ ಕಿರುಕುಳ, ವಿವಾಹ ವಿಚ್ಛೇದನ ಸಮಸ್ಯೆಯ ಜೊತೆಗೆ ಈಗ ಮರ್ಯಾದೆಗೇಡು ಹತ್ಯೆ, ಆ್ಯಸಿಡ್‌ ದಾಳಿ ಪ್ರಕರಣಗಳೂ ಸೇರಿಕೊಂಡಿವೆ’ ಎಂದರು.

ADVERTISEMENT

‘ಶೀಲ ಮತ್ತು ಪಾತಿವ್ರತ್ಯ ಸಂಸ್ಕೃತಿಯಲ್ಲಿ ನಾವು ಬೆಳೆದು ಬಂದಿದ್ದೇವೆ, ಅವೇ ಹೆಣ್ಣಿಗೆ ಭೂಷಣ ಎಂದು ಸಾರಿದ್ದೇವೆ. ಇದೇ ವಿಷಯಕ್ಕೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಪರ್ಯಾಸ. ಹೆಣ್ಣಿನ ಶೀಲ ಅನೇಕರಿಗೆ ಜೇಬು ತುಂಬಿಸುವ ಬಂಡವಾಳವಾಗಿದೆ. ಹೆಣ್ಣಿನ ಶೀಲವನ್ನೇ ಮಾರುಕಟ್ಟೆಯ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಸ್ತ್ರೀ ಸಮುದಾಯದ ಮೇಲಾಗುತ್ತಿರುವ ಪರಿಣಾಮಗಳನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ವಿಷಾದಿಸಿದರು.

‘ಆಧುನೀಕರಣ, ವಾಣಿಜ್ಯೀಕರಣ, ಜಾಗತೀಕರಣದ ಪ್ರಭಾವದ ನಡುವೆ ಹಣದ ವ್ಯಾಮೋಹ ತೀವ್ರಗೊಂಡಿದೆ. ಈ ದಿನಗಳಲ್ಲಿ ಸ್ತ್ರೀಯರು ವಾಮಮಾರ್ಗ ಹಿಡಿದು ಹಣ ಸಂಪಾದಿಸುತ್ತಿದ್ದಾರೆ. ಇದರಿಂದ ಸ್ತ್ರೀ ಅಪರಾಧಗಳ ಸಂಖ್ಯೆ ತೀವ್ರಗೊಂಡಿವೆ. ಟೀಕಿಸುವವರ ಕಣ್ಣಿಗೆ ಎದ್ದು ಕಾಣುವಂತಹ ಅಂಶಗಳನ್ನು ನಿವಾರಿಸುತ್ತಾ ತಮ್ಮತನ ಅರ್ಥಮಾಡಿಕೊಳ್ಳುವ ವಾತಾವರಣ ನಿರ್ಮಾಣಗೊಳ್ಳಬೇಕಿದೆ’ ಎಂದರು.

‘ಪುರುಷರೂ ಮಹಿಳಾ ಸಾಹಿತ್ಯದತ್ತ ತಿರುಗಿ ನೋಡುವ ವಾತಾವರಣ ನಿರ್ಮಾಣವಾಗಿತ್ತು. ಮಹಿಳಾ ಸಾಹಿತ್ಯದ ವಿಶಿಷ್ಟತೆ ಅವರ ಅನುಭವ ಲೋಕವನ್ನು ಅನಾವರಣಗೊಳಿಸುವ ಪರಿಯಲ್ಲಿತ್ತು. ಲೇಖಕಿಯರಿಗೆ ಪಾಂಡಿತ್ಯ, ಕಲಾವಂತಿಕೆ ಪ್ರದರ್ಶನ ಆದ್ಯತೆಯಾಗಿರಲಿಲ್ಲ. ಸಾಹಿತ್ಯವೆಂಬುದು ಅವರಿಗೆ ವೈಯಕ್ತಿಕ ಒತ್ತಡಗಳಿಂದ ಬಿಡುಗಡೆಯಾಗುವ ಮಾಧ್ಯಮವಾಗಿತ್ತು’ ಎಂದು ತಿಳಿಸಿದರು. 

‘ಮಕ್ಕಳ ಸಾಹಿತ್ಯ, ವೈದ್ಯಕೀಯ, ವೈಜ್ಞಾನಿಕ ಸಾಹಿತ್ಯ ಕ್ಷೇತ್ರಕ್ಕೂ ಮಹಿಳೆಯರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂಕಣ ಬರಹಗಳು ಮಹಿಳೆಯರ ಅಭಿವೃದ್ಧಿ, ಮಹಿಳಾ ಪರವಾದ ಹಾಗೂ ಜನಸಾಮಾನ್ಯರ ಪರವಾದ ಕಾಳಜಿಯನ್ನು ಹೊಂದಿವೆ. ಈ ದೃಷ್ಟಿಯಿಂದ ಲೇಖಕಿಯರ ಸಾಹಿತ್ಯ ಉತ್ತಮ ಸಮಾಜ ನಿರ್ಮಾಣಕ್ಕಾಗಿ ತನ್ನದೇ ಕೊಡುಗೆ ನೀಡಿದೆ’ ಎಂದರು.

ಸಾಹಿತ್ಯ ಸಮ್ಮೇಳನವನ್ನು ಚಿಂತಕ ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸಿದರು. ಗಣ್ಯರು ಉಪಸ್ಥಿತರಿದ್ದರು 
ಜಾನಪದ ಕಲಾ ತಂಡಗಳ ಮೆರವಣಿಗೆ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿತು
ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು
ಸಮ್ಮೇಳನಾಧ್ಯಕ್ಷೆ ಕೆ.ಆರ್‌.ಸಂಧ್ಯಾರೆಡ್ಡಿ ಮಾತನಾಡಿದರು

ಕಸಾಪಗೆ ರಾಜಕಾರಣದ ಕೊಳಕು: ಎಸ್‌ಜಿಎಸ್‌

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಪ್ರಭುತ್ವವನ್ನು ಮೀರಿದ ಸ್ವಾಯತ್ತತೆ ಹೊಂದಿತ್ತು. 1915ರಿಂದಲೂ ರಾಜಕಾರಣದ ಸೋಂಕು ತಾಕಿರಲಿಲ್ಲ. ಆದರೆ ಇತ್ತೀಚೆಗೆ ಪಕ್ಷ ರಾಜಕಾರಣದ ಮಸಿ ಅದಕ್ಕೂ ಅಂಟಿಕೊಂಡಿದೆ. ಶೀಘ್ರ ಕಸಾಪವು ರಾಜಕಾರಣದಿಂದ ಮುಕ್ತವಾಗಬೇಕು’ ಎಂದು ಸಮ್ಮೇಳನ ಉದ್ಘಾಟಿಸಿದ ಚಿಂತಕ ಎಸ್‌.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.

‘ಕಾಂಗ್ರೆಸ್‌ ಮುಖಂಡ ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲೂ ಕಸಾಪ ಪಕ್ಷ ರಾಜಕಾರಣದ ವೇದಿಕೆಯಾಗಲಿಲ್ಲ. ಸಾಹಿತ್ಯ ಸಂಸ್ಕೃತಿಗೆ ಅವರು ಆದ್ಯತೆ ನೀಡಿದ್ದರು. ಹೆಚ್ಚು ಜಿಲ್ಲಾ ಘಟಕಗಳು ಅವರಿಂದ ಆರಂಭಗೊಂಡವು. ಆದರೆ ಈಚೆಗೆ ಪಕ್ಷ ರಾಜಕಾರಣ ಪ್ರವೇಶ ಮಾಡಿರುವುದು ಕನ್ನಡಕ್ಕೆ ಅಪಾಯ’ ಎಂದು ಎಚ್ಚರಿಸಿದರು. ‘ರಾಷ್ಟ್ರೀಕರಣದ ನಂತರವೂ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿತ್ತು. ಕನ್ನಡಕ್ಕೆ ಆದ್ಯತೆ ಇತ್ತು. ಆದರೆ ಈಚೆಗೆ ಪರಭಾಷಾ ಹಾವಳಿಯಿಂದಾಗಿ ಕನ್ನಡ ಮಾಯವಾಗುತ್ತಿದೆ. ಕನ್ನಡಿಗರಿಗೆ ಕೆಲಸ ಇಲ್ಲವಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಕನ್ನಡ ಕನ್ನಡಿಗ ಕರ್ನಾಟಕದ ಅಸ್ಮಿತೆ ಕಾಪಾಡಬೇಕಿದೆ’ ಎಂದರು.

ಭದ್ರಾ ಮೇಲ್ದಂಡೆ ಮೇಲೆ ಕೇಂದ್ರದ ಸಿಟ್ಟೇಕೆ..?

‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ರಾಜ್ಯ ಸರ್ಕಾರ ತ್ವರಿತವಾಗಿ ಮುಗಿಸಲು ಶ್ರಮಿಸುತ್ತಿದೆ. ಆದರೆ ಕೇಂದ್ರ ಸರ್ಕಾರವೇ ನಮ್ಮ ಮೇಲೆ ಸಿಟ್ಟಾದಂತೆ ಕಾಣುತ್ತಿದೆ’ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ. ಕೋದಂಡರಾಮಯ್ಯ ತಿಳಿಸಿದರು. ‘ಜಿಲ್ಲೆಯ ಜೀವಾಳ– ಭದ್ರೆಯ ಭವಿಷ್ಯ ಮತ್ತು ಕೃಷಿ’ ಕುರಿತ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿದ್ದ ₹ 5300 ಕೋಟಿ ಅನುದಾನ ಬಿಡುಗಡೆ ಮಾಡಿಲ್ಲ. ಜೊತೆಗೆ ರಾಷ್ಟ್ರೀಯ ಯೋಜನೆ ಮುದ್ರೆ ನೀಡುವ ಮಾತು ತಪ್ಪಿದೆ’ ಎಂದು ಕಿಡಿಕಾರಿದರು. ‘ಪ್ರಾರಂಭದಲ್ಲಿ ಯೋಜನೆ ಜಾರಿ ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ಇತ್ತು. ಆದರೆ ಯೋಜನೆ ಜಾರಿ ವಿಷಯದಲ್ಲಿ ನಮಗೆ ಸಹಕರಿಸಿದವರು ಎಚ್.ಕೆ. ಪಾಟೀಲ್‌. ಅವರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ನಾವು ನಡೆಸಿದ ಪ್ರತಿ ಸಭೆಯಲ್ಲೂ ನೀರಿನ ಲಭ್ಯತೆ ಕುರಿತು ಪ್ರಶ್ನಿಸುತ್ತಿದ್ದರು’ ಎಂದು ತಿಳಿಸಿದರು. ‘ಈಗ ತರೀಕೆರೆ ಸೇರಿದಂತೆ ವಿವಿಧೆಡೆ ಭದ್ರಾ ನೀರು ಹರಿದು ಬರುತ್ತಿದೆ. ಆದರೆ ಜಿಲ್ಲೆಯತ್ತ ಹರಿದು ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಅನುದಾನದ ಸಮಸ್ಯೆ. ರಾಜ್ಯದಲ್ಲಿರುವ 28 ಸಂಸದರು ಧ್ವನಿ ಎತ್ತಿದರೆ ಅನುದಾನ ಬಿಡುಗಡೆ ಸಾಧ್ಯ’ ಎಂದರು. ರೈತ ಸಂಘದ ರಾಜ್ಯ ಘಟಕದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಅವಿನಾಶ್‌ ಎಂ.ಎನ್‌. ಅಹೋಬಳಪತಿ ಕೊಂಡ್ಲಹಳ್ಳಿ ಜಯಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.