ADVERTISEMENT

ಚಿತ್ರದುರ್ಗ | ಪೈಪ್‌ಲೈನ್‌ ಶಿಥಿಲ.. ವ್ಯರ್ಥವಾಗುತ್ತಿದೆ ಜೀವಜಲ

ಬೇಸಿಗೆ ಆರಂಭಕ್ಕೆ ಮೊದಲೇ ನೀರಿನ ಅಭಾವ; ಕ್ಯಾನ್‌ಗಳ ಮೊರೆ ಹೋದ ಜನ

ಎಂ.ಎನ್.ಯೋಗೇಶ್‌
Published 24 ಜನವರಿ 2026, 7:35 IST
Last Updated 24 ಜನವರಿ 2026, 7:35 IST
ಕ್ಯಾದಿಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿವಿ ಸಾಗರದಿಂದ ಚಿತ್ರದುರ್ಗ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್‌ ಒಡೆದು ನೀರು ವ್ಯರ್ಥವಾಗುತ್ತಿರುವುದು
ಕ್ಯಾದಿಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಿವಿ ಸಾಗರದಿಂದ ಚಿತ್ರದುರ್ಗ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್‌ ಒಡೆದು ನೀರು ವ್ಯರ್ಥವಾಗುತ್ತಿರುವುದು   

ಚಿತ್ರದುರ್ಗ: ನಗರದ ಹಲವು ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಕಾರಣ ಸಾರ್ವಜನಿಕರು ಕ್ಯಾನ್‌ ನೀರಿನ ಮೊರೆ ಹೋಗುತ್ತಿದ್ದಾರೆ. ವಿ.ವಿ. ಸಾಗರ ಜಲಾಶಯ, ಸೂಳೆಕೆರೆ (ಶಾಂತಿಸಾಗರ) ಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಬೇಸಿಗೆ ಆರಂಭವಾಗುವುದಕ್ಕೂ ಮೊದಲೇ ಜನರು ನೀರಿನ ಅಭಾವ ಎದುರಿಸುತ್ತಿದ್ದಾರೆ.

ಹಿರಿಯೂರು ಸಮೀಪದ ವಾಣಿವಿಲಾಸ ಸಾಗರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯಲ್ಲಿ ನೀರಿನ ಕೊರತೆ ಇಲ್ಲ. ಆದರೆ, ನೀರು ಪಂಪಿಂಗ್‌ ಹಾಗೂ ಸರಬರಾಜಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದು, ಜನರು ಸಮರ್ಪಕವಾಗಿ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ವಿವಿಧ ಗ್ರಾಮಗಳು ಹಾಗೂ ನಗರದ 15ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಕೊರತೆಯುಂಟಾಗಿದೆ.

ವಿ.ವಿ. ಸಾಗರ ಜಲಾಶಯದಿಂದ ನಗರಕ್ಕೆ ನೀರು ಹರಿಸುವ ಪೈಪ್‌ಲೈನ್‌ ತೀರಾ ಹಳೆಯದಾಗಿದೆ. ಎಲ್ಲೆಂದರಲ್ಲಿ ಪೈಪ್‌ಗಳು ಒಡೆದು ಹೋಗುತ್ತಿದ್ದು, ನೀರು ವ್ಯರ್ಥವಾಗುತ್ತಿದೆ. ಒಡೆದ ಪೈಪ್‌ಲೈನ್‌ಗಳನ್ನು ನಗರಸಭೆ ಸಿಬ್ಬಂದಿ ಸರಿಯಾದ ಸಮಯಕ್ಕೆ ರಿಪೇರಿ ಮಾಡದ ಕಾರಣ ಜೀವಜಲ ವ್ಯರ್ಥವಾಗುತ್ತಿದೆ. ನಗರದ ಹೊರವಲಯದ ಕ್ಯಾದಿಗೆರೆ ಬಳಿ 2 ದಿನಗಳ ಹಿಂದೆಯೇ ರಸ್ತೆ ಬದಿಯಲ್ಲಿ ಪೈಪ್‌ ಒಡೆದು ನೀರು ವ್ಯರ್ಥವಾಗುತ್ತಿದ್ದರೂ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಗಮನಿಸಿ ರಿಪೇರಿ ಮಾಡದ ಕಾರಣ ನೀರು ರಸ್ತೆಬದಿಯಲ್ಲಿ ಹರಿದು ಗುಂಡಿಗೆ ಸೇರುತ್ತಿದೆ.

ADVERTISEMENT

‘ರಸ್ತೆ ಬದಿಯಲ್ಲಿ ಪೈಪ್‌ ಒಡೆದು ಹೋದರೆ ದಾರಿಯಲ್ಲಿ ಓಡಾಡುವವರು ನಗರಸಭೆ ಸಿಬ್ಬಂದಿಗೆ ತಿಳಿಸುತ್ತಾರೆ. ಜನರು ಓಡಾಡದ ಪ್ರದೇಶದಲ್ಲೂ ಆಗಾಗ ಪೈಪ್‌ ಒಡೆದು ಹೋಗುತ್ತದೆ. ಆಗ ಹಲವು ದಿನಗಳವರೆಗೆ ನೀರು ವ್ಯರ್ಥವಾಗುತ್ತದೆ. ನಮ್ಮ ಊರಿನ ಬಳಿ ನೀರು ವ್ಯರ್ಥವಾಗುತ್ತಿರುವುದನ್ನು ನಗರಸಭೆ ಸಿಬ್ಬಂದಿಗೆ ತಿಳಿಸಿದ್ದೇವೆ’ ಎಂದು ಕ್ಯಾದಿಗೆರೆಯ ವ್ಯಕ್ತಿಯೊಬ್ಬರು ತಿಳಿಸಿದರು.

ವಿ.ವಿ. ಸಾಗರದಿಂದ ಬರುವ ನೀರನ್ನು 30ನೇ ವಾರ್ಡ್‌ನ ಆರ್‌ಟಿಒ ಕಚೇರಿ ಭಾಗದ ಬಡಾವಣೆಗಳು, 31ನೇ ವಾರ್ಡ್‌ನ ಕೆಳಗೋಟೆ, 32ನೇ ವಾರ್ಡ್‌ನ ಬಸವೇಶ್ವರ ಆಸ್ಪತ್ರೆ ಭಾಗ, 33ನೇ ವಾರ್ಡ್‌ನ ಜಿಲ್ಲಾ ಕ್ರೀಡಾಂಗಣ ಭಾಗ, 34ನೇ ವಾರ್ಡ್‌ನ ಟೀಚರ್ಸ್‌ ಕಾಲೊನಿ ಪ್ರದೇಶ, 35ನೇ ವಾರ್ಡ್‌ನ ಸರಸ್ವತಿ ಪುರಂ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ. ಈ ಬಡಾವಣೆಗಳಿಗೆ ವಾರಕ್ಕೊಮ್ಮೆಯೂ ನಿಗದಿತವಾಗಿ ನೀರು ಬರುವುದಿಲ್ಲ. ಕೆಲವೊಮ್ಮೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ದಶಕದ ಹಿಂದೆ ಅಳವಡಿಸಲಾಗಿರುವ ಪೈಪ್‌ಲೈನ್‌ ಶಿಥಿಲಗೊಂಡಿದ್ದು, ವಿವಿಧೆಡೆ ಸಂಪರ್ಕ ಕಳೆದು ಹೋಗುತ್ತದೆ. ಕಳಪೆ ಪೈಪ್‌ ಅಳವಡಿಕೆ,  ಕಳಪೆ ಕಾಮಗಾರಿ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಚರಂಡಿಯ ಕೊಳಚೆ  ನೀರು ಮಿಶ್ರಣವಾಗಿರುವ ಕಾರಣ ಜನರು ನಗರಸಭೆ ಪೂರೈಸುವ ನೀರು ಕುಡಿಯುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಬಹುತೇಕರು ಕ್ಯಾನ್‌ ನೀರನ್ನು ಖರೀದಿಸಿ ಕುಡಿಯುವುದಕ್ಕೆ ಬಳಸುತ್ತಾರೆ.

ಇನ್ನು, ಸೂಳೆಕೆರೆಯಿಂದ ಬರುವ ನೀರನ್ನು ಜೋಗಿಮಟ್ಟಿ ರಸ್ತೆ, ಕರುವಿನ ಕಟ್ಟೆ, ಪ್ರಶಾಂತ್‌ ನಗರ, ಸುಣಗಾರ ಬೀದಿ, ಅಗಳೇರಿ, ಜಟ್‌ಪಟ್‌ ನಗರ, ವಿವೇಕಾನಂದ ಬಡಾವಣೆ, ಅಂಬೇಡ್ಕರ್‌ ಕಲ್ಯಾಣ ಮಂಟಪ ರಸ್ತೆ, ಸ್ಟೇಡಿಯಂ ಕೆಳಗಿನ ಭಾಗ, ಮೆದೇಹಳ್ಳಿ, ತರಳಬಾಳು ನಗರ, ಮರಳುಸಿದ್ದಪ್ಪ ಬಡಾವಣೆ, ಹೊಳಲ್ಕೆರೆ ರಸ್ತೆ ಭಾಗಕ್ಕೆ ಸರಬರಾಜು ಮಾಡಲಾಗುತ್ತದೆ.

ನೀರು ಪಂಪ್‌ ಮಾಡುವ ಮೋಟಾರ್‌ಗಳು ಆಗಾಗ ಕೈಕೊಡುವ ಕಾರಣ ಇಲ್ಲಿ ತಾಂತ್ರಿಕ ಸಮಸ್ಯೆ ತೀವ್ರವಾಗಿದೆ. ಕೆಲವೊಮ್ಮೆ ತಿಂಗಳಾದರೂ ನೀರು ಬಾರದ ಪರಿಸ್ಥಿತಿ ಇದೆ. ಆಗ ನಗರಸಭೆಯು ಕೆಲವು ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತದೆ. ‘ಶಾಂತಿಸಾಗರದ ಬಳಿಯ ಪಂಪಿಂಗ್‌ ಘಟಕದಿಂದ ನೀರು ಪಂಪ್‌ ಆಗುತ್ತದೆ. ಘಟಕದಲ್ಲಿ ಯಂತ್ರಗಳು ಸದಾ ಹಾಳಾಗುತ್ತವೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ’ ಎಂದು ನಗರಸಭೆ ಸಿಬ್ಬಂದಿ ಹೇಳುತ್ತಾರೆ.

ನಮ್ಮ ಸಿಬ್ಬಂದಿ ನಿಯಮಿತವಾಗಿ ಪೈಪ್‌ಲೈನ್‌ ಪರಿಶೀಲಿಸುತ್ತಾರೆ. ಆದರೂ ಕೆಲವು ವೇಳೆ ಕಣ್ತಪ್ಪಿ ಹೋಗುತ್ತದೆ. ಕ್ಯಾದಿಗೆರೆ ಬಳಿ ಪೈಪ್‌ ಒಡೆದಿದ್ದರೆ ತಕ್ಷಣವೇ ಸರಿಪಡಿಸುವಂತೆ ತಿಳಿಸುತ್ತೇನೆ
ಎಸ್‌.ಲಕ್ಷ್ಮಿ ಆಯುಕ್ತೆ ನಗರಸಭೆ
ರೈತರೇ ಪೈಪ್‌ ಒಡೆಯುವರೇ?
‘ವಿ.ವಿ. ಸಾಗರದಿಂದ ನೀರು ಬರುವ ಮಾರ್ಗದಲ್ಲಿ ಕೃಷಿ ಜಮೀನುಗಳಿವೆ. ಹೊಲದಲ್ಲಿರುವ ಬೆಳೆಗಳಿಗೆ ನೀರು ಕೊರತೆಯಾದಾಗ ರೈತರು ಪೈಪ್‌ಗೆ ಹಾರೆ ಹಾಕಿ ಒಡೆಯುತ್ತಾರೆ. ಇದು ಅಧಿಕಾರಿಗಳಿಗೂ ಗೊತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಕೃತ್ಯ ನಿಲ್ಲಿಸಿಲ್ಲ. ಪೈಪ್‌ಲೈನ್‌ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಿದೆ’ ಎಂದು  ನಗರಸಭಯ ಮಾಜಿ ಸದಸ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.