
ಚಿತ್ರದುರ್ಗ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಈದ್–ಮಿಲಾದ್ ಆಚರಿಸಲಾಯಿತು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ವಿವಿಧ ಮಸೀದಿಗಳು, ದರ್ಗಾಗಳು, ಮುಸ್ಲಿಮರ ವ್ಯಾಪಾರಿ ಮಳಿಗೆಗಳು ಮತ್ತು ಅಂಗಡಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.
ಮೆಕ್ಕಾ ಮಸೀದಿಯ ಚಿತ್ರವುಳ್ಳ ಧ್ವಜಗಳನ್ನು(ಚಾಂದ್) ಹಿಡಿದು ಮುಸ್ಲಿಮರು ಜಾಥಾ, ಬೈಕ್ ರ್‍ಯಾಲಿ ನಡೆಸಿದರು. ನಗರದ ಬೀದಿಬೀದಿಗಳಲ್ಲಿ ಹಸಿರು ಧ್ವಜಗಳಿಂದ ಅಲಂಕಾರ ಮಾಡಲಾಗಿತ್ತು. ಮುಸ್ಲಿಮರು ಸಹಿ ಹಂಚಿ ಪರಸ್ಪರ ಶುಭಾಶಯ ಕೋರಿದರು. ನೆಹರೂ ನಗರದಲ್ಲಿರುವ ದೊಡ್ಡ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ದೊಡ್ಡ ಮಕಾನ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಚಾಂದ್‌ಗಳೊಂದಿಗೆ ಮೆರವಣಿಗೆ ಹೊರಟರು.
ನಗರದ ವಿವಿಧ ಬಡಾವಣೆಗಳಲ್ಲಿರುವ ಮುಸ್ಲಿಮರು ಧ್ವಜಗಳೊಂದಿಗೆ ಪ್ರತ್ಯೇಕ ತಂಡಗಳಾಗಿ ಮೆರವಣಿಗೆ ನಡೆಸಿದರು. ಎಲ್ಲರೂ ದೊಡ್ಡಪೇಟೆಯಲ್ಲಿರುವ ಜಾಮಿಯಾ ಮಸೀದಿ ಬಳಿ ಸೇರಿ ಮೆರವಣಿಗೆ ಕೊನೆಗೊಳಿಸಿ ಹಬ್ಬದ ಶುಭಾಶಯ ಕೋರಿದರು.
ಮಕ್ಕಳು, ಯುವಕರು, ಹಿರಿಯ ನಾಗರಿಕರು ಮೆರವಣಿಗೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಿ.ಡಿ ರಸ್ತೆ, ಗಾಂಧಿ ವೃತ್ತ, ಕನಕ ವೃತ್ತ ಮುಂತಾದೆಡೆ ಹಸಿರು ಧ್ವಜ, ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಈದ್ ಮಿಲಾದ್ ಶುಭಾಶಯ ಕೋರುವ ಫ್ಲೆಕ್ಸ್‌ಗಳು ರಾರಾಜಿಸಿದವು.
ಜಾಮೀಯಾ ಮಸೀದಿ ಬಳಿ ಹಬ್ಬದ ಸಂದೇಶ ನೀಡಿದ ಧರ್ಮಗುರುಗಳು ‘ಮೊಹಮ್ಮದ್ ಪೈಗಂಬರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯಬೇಕು. ಒಂದು ಇರುವೆಗೂ ಕೂಡ ಹಿಂಸೆ ನೀಡಬಾರದು. ಪ್ರತಿಯೊಬ್ಬರಿಗೂ ಮೊಹಮ್ಮದ್ ಪೈಗಂಬರರ ಹಾದಿ ಮಾದರಿಯಾಗಬೇಕು’ ಎಂದು ಹೇಳಿದರು.
ಮೊಹಮ್ಮದ್ ಪೈಬಂಬರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಹುತೇಕ ಮುಸ್ಲಿಮರು ಮನೆಯಲ್ಲಿ ಸಿಹಿ ತಿಂಡಿ ತಯಾರಿಸಿ ಸವಿದರು. ಹೋಳಿಗೆ, ಜಾಮೂನು, ಕೇಸರಿ ಬಾತ್ ಮುಂತಾದ ತಿನಿಸುಗಳನ್ನು ತಯಾರಿಸಿದ್ದರು. ನಗರದ ಹಲವೆಡೆ ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.